More

    ಕಡ್ಲಿಗಿಡ, ಚಹಾ ಮಾರಾಟ ಮಾಡಿದ ಅತಿಥಿ ಉಪನ್ಯಾಸಕರು

    ದಾವಣಗೆರೆ : ಕಡ್ಲಿಗಿಡ. ಪಿಎಚ್.ಡಿ, ಎಂ.ಫಿಲ್ ಕಡ್ಲಿಗಿಡ. ಕೇವಲ 10 ರೂ.ಗೆ ಕಡ್ಲಿಗಿಡ. ಟೀ ಬೇಕಾ ಟೀ?.
     ಇದು ಬೀದಿ ಬದಿ ವ್ಯಾಪಾರಿಗಳ ಕೂಗಲ್ಲ, ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡಿದ ರೀತಿ.
     ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಬುಧವಾರ ಜಿಲ್ಲಾಡಳಿತ ಭವನದ ಬಳಿ ಕೈಯಲ್ಲಿ ಕಡ್ಲಿಗಿಡ, ಚಹಾ ಕಪ್‌ಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ವಿನೂತನವಾಗಿ ತಿಳಿಸುವ ಪ್ರಯತ್ನ ಮಾಡಿದರು. ವಾಹನ ಸವಾರರ ಬಳಿಗೆ ತೆರಳಿ ಅವರಿಗೆ ತಮ್ಮ ಬೇಡಿಕೆಗಳ ಬಗ್ಗೆ ಅರಿವು ಮೂಡಿಸಿದರು. ಸರ್ಕಾರ ತಮಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
     ಪಶ್ಚಿಮ ಬಂಗಾಳ, ಪಂಜಾಬ್, ಹರಿಯಾಣ, ದೆಹಲಿ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಅತಿಥಿ ಉಪನ್ಯಾಕರ ಸೇವೆಯನ್ನು ಕಾಯಂ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಬೇಡಿಕೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 10-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ವರ್ಷದಲ್ಲಿ 7-8 ತಿಂಗಳು ಸಂಬಳ ಬಂದರೆ ಹೆಚ್ಚು. ಕಳೆದ ಜುಲೈನಿಂದ ವೇತನ ಪಾವತಿಸಿಲ್ಲ. ನಾವು ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
     ನಮ್ಮ ಬೇಡಿಕೆ ಈಡೇರಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ನಮ್ಮ ಪರವಾಗಿ ಧ್ವನಿ ಎತ್ತಿದ್ದರು. ಈಗ ಅವರದೇ ಸರ್ಕಾರವಿದ್ದರೂ ಈಡೇರಿಸಿಲ್ಲ ಎಂದು ತಿಳಿಸಿದರು.
     ನ. 23ರಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮನ್ನು ಜೀತಪದ್ಧತಿಯಂತೆ ನಡೆಸಿಕೊಳ್ಳಲಾಗುತ್ತಿದೆ. ಮನುಷ್ಯರಂತೆ ಕಾಣುತ್ತಿಲ್ಲ. ನಮ್ಮ ಸಮಸ್ಯೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
     ರಾಜ್ಯದಲ್ಲಿ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿದ್ದು 11 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ಇಲಾಖೆಗಳ ಗುತ್ತಿಗೆ ನೌಕರರನ್ನು ಕಾಯಂ ಮಾಡಿರುವ ಸರ್ಕಾರ ನಮ್ಮ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ಮುಖಂಡ ಶ್ಯಾಮ ಪ್ರಸಾದ್ ತಿಳಿಸಿದರು.
     ಅತಿಥಿ ಉಪನ್ಯಾಸಕರಾದ ವರದ ರಾಘವೇಂದ್ರ, ಸಮರ್ಥ ರಾಮ, ಸಿದ್ದೇಶ್, ವಿಶ್ವನಾಥ್, ಎಸ್. ಶುಭಾ, ರಶ್ಮಿ, ಭಾರತಿ, ಆಶಾ, ಚಂದ್ರಿಕಾ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts