More

    ಮೆಕ್ಕೆಜೋಳ ಕಣಜದಲ್ಲಿ ಕೇಸರಿ ಕಂಪು

    ರಮೇಶ ಜಹಗೀರದಾರ್ ದಾವಣಗೆರೆ
     ಮೆಕ್ಕೆಜೋಳದ ಕಣಜ ದಾವಣಗೆರೆ ಜಿಲ್ಲೆಯ ಯುವಕನೊಬ್ಬ ಕೇಸರಿ ಬೆಳೆಯುವ ಮೂಲಕ ಗಮನ ಸೆಳೆದಿದ್ದಾನೆ. ತಾಲೂಕಿನ ಹಳೇಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಿವಾಸಿಯಾಗಿರುವ ಜೆ. ಜಾಕೋಬ್ ಸತ್ಯರಾಜ್, ಕಾಶ್ಮೀರದ ಬೆಳೆಯಾದ ಕೇಸರಿಯ ಕಂಪನ್ನು ಕರ್ನಾಟಕದಲ್ಲೂ ಹರಡಿಸಲು ಪ್ರಯತ್ನಿಸುತ್ತಿದ್ದಾರೆ.
     ಡಿಪ್ಲೊಮಾ ವರೆಗೆ ಓದಿರುವ ಜಾಕೋಬ್ ಸ್ವಾವಲಂಬನೆಯ ಕನಸಿನೊಂದಿಗೆ ಕುರಿ ಸಾಕಣೆ, ಕೋಳಿ ಫಾರ್ಮ್ ಮುಂತಾದ ಉದ್ಯೋಗಗಳ ಮೂಲಕ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರಾದರೂ ಅದೇಕೋ ಯಶಸ್ಸು ಕಾಣಲಿಲ್ಲ. ಪ್ರಸ್ತುತ ಹರಿಹರದಲ್ಲಿ ಜಲಸಿರಿ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
     ಈ ನಡುವೆ ಹೇಗೋ ಏನೋ ಕೇಸರಿ ಬೆಳೆಯಬೇಕೆಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಯು-ಟ್ಯೂಬ್‌ನಲ್ಲಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸಿದರು. ತಿಳಿದವರಿಂದ ಮಾಹಿತಿ ಕಲೆಹಾಕಿದರು.
     ಆಂಧ್ರ ಪ್ರದೇಶದ ಮದನಪಲ್ಲಿಯ ಶ್ರೀನಿಧಿ ಎಂಬುವರು ಕೇಸರಿ ಬೆಳೆದು ಯಶಸ್ವಿಯಾಗಿರುವುದು ತಿಳಿದು ಕಳೆದ ಮಾರ್ಚ್‌ನಲ್ಲಿ ಜಾಕೋಬ್ ಅಲ್ಲಿಗೆ ಭೇಟಿ ನೀಡಿ ಮಾರ್ಗದರ್ಶನ ಪಡೆದುಕೊಂಡರು. ಅದಾದ ನಂತರ ಅವರ ಆಸಕ್ತಿ ಇನ್ನಷ್ಟು ಗಟ್ಟಿಯಾಗುತ್ತ ಹೋಯಿತು.
     ಆಗಸ್ಟ್‌ನಲ್ಲಿ ಕೆಲವು ಸ್ನೇಹಿತರ ಜತೆಗೂಡಿ ಕಾಶ್ಮೀರಕ್ಕೆ ತೆರಳಿದರು. ಕೇಸರಿ ಬೆಳೆಗೆ ಹೆಸರಾದ ಅಲ್ಲಿನ ಪ್ಯಾಂಪೂರ್‌ಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಒಡನಾಡಿದರು. ಕೇಸರಿ ಸಂಶೋಧನಾ ಕೇಂದ್ರದಲ್ಲಿ ಇನ್ನಷ್ಟು ಜ್ಞಾನ ಸಂಪಾದಿಸಿದರು.
     …
     
     * ಕೊಠಡಿಯಲ್ಲಿ ಕೃಷಿ
     ಜಾಕೋಬ್ ಅವರು ಕಾಶ್ಮೀರದ ರೈತರಿಂದ 60 ಕೆಜಿ ಕೇಸರಿ ಬೀಜಗಳನ್ನು ಖರೀದಿಸಿ ತಂದರು. ಸಾಗಾಣಿಕೆ ವೇಳೆ 15 ಕೆಜಿ ಹಾಳಾಯಿತು. ಆಗಸ್ಟ್ ತಿಂಗಳ ಕೊನೆಯಲ್ಲಿ ಕೇಸರಿ ಕೃಷಿ ಮಾಡಲು ಆರಂಭಿಸಿದರು.
     ಕಾಶ್ಮೀರದ ಬೆಳೆಯಾದ ಕೇಸರಿಯನ್ನು ಬೆಳೆಯಬೇಕಾದರೆ ಅಲ್ಲಿನ ಹವಾಮಾನವೇ ಬೇಕಾಗುತ್ತದೆ. ಅದಕ್ಕಾಗಿ ಅವರು ತಮ್ಮ ಮನೆಯ ಕೋಣೆಯೊಂದನ್ನು ಮೀಸಲಿಟ್ಟಿದ್ದಾರೆ. 9 ಅಡಿ ಉದ್ದ, 5 ಅಡಿ ಅಗಲದ ಕೊಠಡಿಯನ್ನು ಇದಕ್ಕೆಂದೇ ಸಜ್ಜುಗೊಳಿಸಿದ್ದಾರೆ.
     ಹವಾ ನಿಯಂತ್ರಣ ಸೌಲಭ್ಯ, ಹ್ಯುಮಿಡಿಫೈಯರ್ ಅಳವಡಿಸುವ ಮೂಲಕ ಕೇಸರಿ ಬೆಳೆಯಲು ಬೇಕಾದ ಉಷ್ಣಾಂಶ, ತೇವಾಂಶದ ನಿಯಂತ್ರಣ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಗ್ರೋ ಲೈಟ್‌ಗಳನ್ನು ಅಳವಡಿಸಿದ್ದಾರೆ.
     ನಾಲ್ಕು ರ‌್ಯಾಕ್‌ಗಳಲ್ಲಿ ಕೇಸರಿ ಕೃಷಿಯನ್ನು ಮಾಡುತ್ತಿದ್ದಾರೆ. ಕೆಂಪು ಮಣ್ಣು, ಹುತ್ತದ ಮಣ್ಣು, ಹೊಳೆ ಮಣ್ಣು, ಮರಳು ಮತ್ತು ಎರೆಹುಳು ಗೊಬ್ಬರ, ಕೋಕೋ ಪಿಟ್ (ತೆಂಗಿನ ನಾರು) ಬಳಸಿದ್ದಾರೆ.
     ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹೂವು ಬಿಟ್ಟಿವೆ. 20 ಗ್ರಾಂನಷ್ಟು ಕೇಸರಿ ಉತ್ಪಾದನೆಯಾಗಿದೆ. ಏಪ್ರಿಲ್ ತಿಂಗಳ ವರೆಗೆ ಬೀಜೋತ್ಪಾದನೆ ಪ್ರಕ್ರಿಯೆ ನಡೆಯುತ್ತದೆ.
     …
     
     * ಬಹೂಪಯೋಗಿ ಬೆಳೆ
     ಕೇಸರಿಯನ್ನು ಔಷಧವಾಗಿ ಬಳಕೆ ಮಾಡಲಾಗುತ್ತದೆ. ಕಾಸ್ಮೆಟಿಕ್, ಪರ್ಫ್ಯೂಮ್, ಪೌಡರ್, ಕ್ರೀಮ್ ಹೀಗೆ ಅನೇಕ ಉದ್ದೇಶಗಳಿಗೆ ಉಪಯೋಗಿಸಲಾಗುತ್ತದೆ.
     ಕೇಸರಿಯು ದುಬಾರಿಯಾಗಿದ್ದು ಬೇಡಿಕೆ ಜಾಸ್ತಿಯಿದೆ. ಭಾರತದಲ್ಲಿ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕಾಶ್ಮೀರದ ಕೇಸರಿಗೆ ಹೆಚ್ಚು ಬೇಡಿಕೆಯಿದೆ. ಅದರ ಗುಣಮಟ್ಟ ಉತ್ತಮವಾಗಿದ್ದು ಬಣ್ಣವೂ ದಟ್ಟವಾಗಿರುತ್ತದೆ (ಡಾರ್ಕ್). ಮೋಗ್ರಾದ ಉದ್ದ ಜಾಸ್ತಿ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts