More

    ಇಸ್ರೋದಲ್ಲಿ ಸಾಮಾನ್ಯರಿಂದ ಅಸಾಮಾನ್ಯ ಕಾರ್ಯ

    ದಾವಣಗೆರೆ : ಸಾಮಾನ್ಯರಿಂದ ಅಸಾಮಾನ್ಯ ಕಾರ್ಯಗಳನ್ನು ಮಾಡಿಸುವುದು ಇಸ್ರೋ ಸಂಸ್ಥೆಯ ಹೆಮ್ಮೆ ಎಂದು ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಇಂಟಿಗ್ರೇಷನ್ ಆ್ಯಂಡ್ ಚೆಕೌಟ್ ಏರಿಯಾ ಉಪ ನಿರ್ದೇಶಕ ರಾಮನಗೌಡ ವಿ. ನಾಡಗೌಡ ಹೇಳಿದರು.
     ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ ಶನಿವಾರ ಇಸ್ರೋ ಅಂಗಸಂಸ್ಥೆ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
     ಬಾಹ್ಯಾಕಾಶ ನೌಕೆಯ ಪಿತಾಮಹ ಎಂದೇ ಹೆಸರಾಗಿರುವ ಪ್ರೊ. ಯು.ಆರ್. ರಾವ್ ನೇತೃತ್ವದಲ್ಲಿ ಕೇವಲ ಮೂರು ವರ್ಷಗಳಲ್ಲಿ ದೇಶದ ಮೊದಲ ಉಪಗ್ರಹವಾದ ಆರ್ಯಭಟವನ್ನು ರೂಪಿಸಲಾಗಿತ್ತು. ಅವರ ತಂಡದಲ್ಲಿದ್ದ ಎಲ್ಲರೂ ಸಾಮಾನ್ಯ ಹಿನ್ನೆಲೆಯವರೇ ಆಗಿದ್ದರು ಎಂದರು.
     ಈಗಲೂ ಇಸ್ರೋದಲ್ಲಿನ ಶೇ. 70ರಷ್ಟು ಜನರು ಹಳ್ಳಿಗಾಡು ಹಾಗೂ ಸಾಧಾರಣ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಇಸ್ರೋದ ಅಧ್ಯಕ್ಷರೂ ಸೇರಿ ಉನ್ನತ ಸ್ಥಾನದಲ್ಲಿರುವವರು ಸರಳವಾಗಿ ಎಲ್ಲರ ಜತೆ ಬೆರೆಯುತ್ತಾರೆ. ಹೀಗಾಗಿಯೇ ಇಸ್ರೋದಲ್ಲಿ ನಾಯಕತ್ವ ಇದೆಯೇ ಹೊರತು ಪಾಳೇಗಾರಿಕೆ ಇಲ್ಲ ಎಂದು ತಿಳಿಸಿದರು.
     ಕಠಿಣ ಪರಿಶ್ರಮ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ, ತಂಡವಾಗಿ ಕಾರ್ಯ ನಿರ್ವಹಣೆ ಹಾಗೂ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇರಿಸಿರುವುದು ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಯಶಸ್ಸಿಗೆ ನೆರವಾಗಿದೆ ಎಂದು ಅಭಿಪ್ರಾಯ ಪಟ್ಟರು.
     ಬೆಂಗಳೂರಿನ ಎನ್.ಐ.ಎಸ್.ಎ.ಆರ್. ಯೋಜನಾ ನಿರ್ದೇಶಕ ಸಿ.ವಿ. ಶ್ರೀಕಾಂತ್ ಮಾತನಾಡಿ, ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಜತೆಗೂಡಿ ವಿಶ್ವದ ಅತಿ ದೊಡ್ಡ ಭೂ ಪರಿವೀಕ್ಷಣಾ ಉಪಗ್ರಹ ರೂಪಿಸುತ್ತಿವೆ. ಇದರ ಒಟ್ಟು ವೆಚ್ಚ 11 ಸಾವಿರ ಕೋಟಿ ರೂ. ಎಂದು ಹೇಳಿದರು.
     ಈ ಯೋಜನೆಯ ಶೇ. 65ರಷ್ಟು ಕೆಲಸಕ್ಕೆ ಇಸ್ರೋ ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡುತ್ತಿದೆ. ನಾಸಾ ಕೇವಲ ಶೇ. 35ರಷ್ಟು ಕೆಲಸಕ್ಕೆ 10 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಇಸ್ರೋ ಕಡಿಮೆ ವೆಚ್ಚದ ಪರಿಹಾರ ಹುಡುಕುವುದಕ್ಕೆ ಇದು ಉದಾಹರಣೆ ಎಂದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಇಸ್ರೋದ ವಿಶ್ವ ಬಾಹ್ಯಾಕಾಶ ಸಪ್ತಾಹ ಯೋಜನೆ ಅಧ್ಯಕ್ಷ ಡಾ. ರಾಘವೇಂದ್ರ ಬಿ. ಕುಲಕರ್ಣಿ, ಬಾಹ್ಯಾಕಾಶ ತಂತ್ರಜ್ಞಾನದ ಲಾಭಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ವಿಶ್ವದಾದ್ಯಂತ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಹೇಳಿದರು.
     ಡಿ.ಡಿ.ಪಿ.ಐ. ಬಿ. ಕೊಟ್ರೇಶ್, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಬಿಐಇಟಿ ಪ್ರಾಚಾರ್ಯ ಎಚ್.ಬಿ. ಅರವಿಂದ್ ಇದ್ದರು. ದಿವ್ಯಾ ಹಿರೇಮಠ್ ಪ್ರಾರ್ಥಿಸಿದರು. ಸಿ.ಆರ್. ನಿರ್ಮಲಾ ಸ್ವಾಗತಿಸಿದರು. ಐಶ್ವರ್ಯ ಹಾಗೂ ಸೃಜನ್ ನಿರೂಪಿಸಿದರು, ಕೆ.ಎಂ. ನರೇಶ್ ಪಟೇಲ್ ವಂದಿಸಿದರು.
     ಕಾರ್ಯಕ್ರಮದ ಅಂಗವಾಗಿ ಇಸ್ರೋದಿಂದ ಉಪಗ್ರಹ ಹಾಗೂ ರಾಕೆಟ್ ಮಾದರಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಆಶುಭಾಷಣ ಹಾಗೂ ಸ್ಮರಣ ಶಕ್ತಿ ಪರೀಕ್ಷಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts