More

    ಕೋವಿಡ್ ಅವ್ಯವಹಾರ ನ್ಯಾಯಾಂಗ ತನಿಖೆಗೆ ಆಗ್ರಹ

    ದಾವಣಗೆರೆ: ಕೋವಿಡ್ ನಿರ್ವಹಣೆಯ ಹೆಸರಿನಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಲೂಟಿ ಆಗಿದೆ ಈ ಕುರಿತು ಹೈಕೋರ್ಟ್ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಆಗ್ರಹಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ವೇಳೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಲೋಪಗಳಾಗಿದ್ದರೆ ಆ ಬಗ್ಗೆಯೂ ವಿಚಾರಣೆ ನಡೆಯಲಿ ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 4,167 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರ 2,128 ಕೋಟಿಗೆ ಲೆಕ್ಕೆ ನೀಡಿದೆ. ವೆಂಟಿಲೇಟರ್, ಮಾಸ್ಕ್, ಔಷಧ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಹೇಳಿದರೆ ಬಿಜೆಪಿ ನೋಟಿಸ್ ನೀಡುತ್ತದೆ. ಧೈರ್ಯವಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಲಿ ಎಂದು ಸವಾಲು ಹಾಕಿದರು.

    ಗೃಹಸಚಿವ ಅಮಿತ್ ಷಾ, ಸಿಎಂ ಯಡಿಯೂರಪ್ಪ ಅವರಿಗೂ ಸೋಂಕು ತಗುಲಿದೆ. ನಿಮ್ಮ ಆರೋಗ್ಯದ ಬಗ್ಗೆಯೇ ಜಾಗರೂಕತೆ ಇಲ್ಲದ ನೀವು ಜನರ ರಕ್ಷಣೆ ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.

    ಆರೋಗ್ಯ ಸಚಿವ ಬಿ.ಶ್ರೀರಾಮುಲು ಸುತ್ತ ಹೈದರಾಬಾದ್‌ನ ಗುಂಪೊಂದು ನಿರ್ಮಾಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿ ವ್ಯವಹಾರವನ್ನು ಆ ಗುಂಪು ನಿರ್ವಹಿಸುತ್ತದೆ ಎಂದು ದೂರಿದರು.

    ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಿಜೆಪಿ ಸರ್ಕಾರದವರು ದುಡ್ಡು ಹೊಡೆದಿರುವುದು, ಬೇರೆ ಬೇರೆ ಲೆಕ್ಕಶೀರ್ಷಿಕೆಯಲ್ಲಿ ಹಣವನ್ನು ಖರ್ಚು ಮಾಡಿರುವುದು ನಿಜ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

    ಕೋವಿಡ್ ನಿಯಂತ್ರಣಕ್ಕೆ ಪರಿಹಾರ ನಿಧಿಗೆ ಸಾರ್ವಜನಿಕರು ಹಣ ನೀಡಿದ್ದಾರೆ. ಆ ಹಣವನ್ನು ಇವರು ನುಂಗಿ ಹಾಕುತ್ತಿದ್ದಾರೆ. ಸರ್ಕಾರದಲ್ಲಿರುವವರು ತಾವು ಏನೇ ಮಾಡಿದರೂ ಮಾಫಿ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕರ್ಮದ ಫಲವನ್ನು ಅವರು ಉಣ್ಣಲೇಬೇಕಾಗುತ್ತದೆ. ಭ್ರಷ್ಟ ಸರ್ಕಾರ ಆದಷ್ಟು ಬೇಗ ಹೋಗಲಿ ಎಂದು ತಿಳಿಸಿದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಈ ಸರ್ಕಾರಕ್ಕೆ ದೂರದೃಷ್ಟಿ, ಸಂವೇದನಾಶೀಲತೆಯಿಲ್ಲ. ಸಚಿವರಲ್ಲಿ ಸಮನ್ವಯದ ಕೊರತೆಯಿದೆ. ಅಧಿವೇಶನ ಕರೆಯುತ್ತಿಲ್ಲ, ಶ್ವೇತಪತ್ರ ಹೊರಡಿಸಿಲ್ಲ ಎಂದು ಟೀಕಿಸಿದರು.

    ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಎಚ್.ಪಿ.ರಾಜೇಶ್, ಅಬ್ದುಲ್‌ಜಬ್ಬಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಜಿಪಂ ಸದಸ್ಯ ಬಸವಂತಪ್ಪ, ಓಬಳಪ್ಪ, ಪಕ್ಷದ ಮುಖಂಡರಾದ ದಿನೇಶ್ ಕೆ.ಶೆಟ್ಟಿ, ಡಾ.ವೈ.ರಾಮಪ್ಪ, ಅನಿತಾಬಾಯಿ ಸುದ್ದಿಗೋಷ್ಠಿಯಲ್ಲಿದ್ದರು.

    ಹರಿಹರ ಕ್ಷೇತ್ರದಲ್ಲಿ ಸೋಂಕಿನ ಪರೀಕ್ಷೆ ನಡೆಸಿ ಸುಮ್ಮನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೂಡಿ ಹಾಕುತ್ತಿದ್ದಾರೆ. ಅವರಿಗೆ ಕಷಾಯ, ಬಿಸಿ ನೀರು ಕೊಡುತ್ತಿಲ್ಲ.
    > ಎಸ್.ರಾಮಪ್ಪ ಹರಿಹರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts