More

    ಮಧ್ಯ ಕರ್ನಾಟಕದ ಉದ್ಯಮಿಗಳ ಸಭೆ

    ದಾವಣಗೆರೆ : ಕೈಗಾರಿಕೋದ್ಯಮಿಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ನಡುವೆ ಸಹಯೋಗವಿದ್ದಾಗ ಸಮಾಜಕ್ಕೆ ಗುಣಮಟ್ಟದ ಇಂಜಿನಿಯರುಗಳನ್ನು ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜತೆ ಜತೆಯಾಗಿ ಹೆಜ್ಜೆ ಹಾಕಲು ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಧ್ಯ ಕರ್ನಾಟಕದ ಉದ್ಯಮಿಗಳ ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.
     ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಿಂದ 42 ಉದ್ಯಮಿಗಳು ಭಾಗವಹಿಸಿದ್ದರು. ತಾಂತ್ರಿಕ ಕಾಲೇಜುಗಳ ಪದವೀಧರರ ನಿರೀಕ್ಷೆಗಳೇನು, ಅವರಿಂದ ಕೈಗಾರಿಕಾ ಕ್ಷೇತ್ರ ಏನನ್ನು ಬಯಸುತ್ತದೆ ಎನ್ನುವ ಕುರಿತು ಚಿಂತನ-ಮಂಥನ ನಡೆಯಿತು.
     ವಿದ್ಯಾರ್ಥಿಗಳ ಕಲಿಕೆ ತರಗತಿಯ ಕೊಠಡಿಗಳಿಗೆ ಸೀಮಿತವಾಗದೇ ಪದವಿ ಹಂತದಲ್ಲಿಯೇ ಅವರಿಗೆ ಉದ್ಯಮದ ನಂಟು ಬೆಳೆಯಬೇಕು. ಅದಕ್ಕೆ ಪೂರಕವಾಗಿ ಕೌಶಲ ತರಬೇತಿ, ತಾಂತ್ರಿಕ ಜ್ಞಾನಗಳು ದೊರೆಯಬೇಕು. ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಕೈಜೋಡಿಸಿದರೆ ಉತ್ತಮ ಫಲಿತಾಂಶ ಸಾಧ್ಯವಿದೆ ಎಂದು ಅಭಿಪ್ರಾಯಪಡಲಾಯಿತು.
     ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ ವರ್ಚುಯಲ್ ಮೂಲಕ ಮಾತನಾಡಿ, ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ವಿವಿಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಲ್ ಆ್ಯಂಡ್ ಟಿ, ಟಿಸಿಎಸ್, ಇನ್‌ಫೋಸಿಸ್ ಸೇರಿ 50 ಉನ್ನತ ಉದ್ಯಮಗಳೊಂದಿಗೆ ವಿಟಿಯು ಕೈಜೋಡಿಸಿದೆ. ಈ ಸಹಭಾಗಿತ್ವದಡಿ 3500 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಈಗಾಗಲೇ 10-12 ಸಂವಾದಗಳಾಗಿವೆ ಎಂದು ತಿಳಿಸಿದರು.
     ಪ್ರತಿ ಜಿಲ್ಲೆಯಲ್ಲೂ ಉದ್ಯಮಿಗಳ ಸಭೆ ನಡೆಸುವ ಉದ್ದೇಶವಿದೆ. ಗುಣಮಟ್ಟದ ಇಂಜಿನಿಯರುಗಳನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ವಿಟಿಯು ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಇಂಟರ್ನ್‌ಶಿಪ್ ತರಬೇತಿ ಆಗಬೇಕು. ಉದ್ಯಮದ ಸವಾಲುಗಳನ್ನು ನಾವು ತಿಳಿಯಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಬೇಕು. ಇದಕ್ಕಾಗಿ ಒಡಂಬಡಿಕೆಗಳಾಗಬೇಕು ಎಂದರು.
     ವಿಟಿಯು ಕ್ಯಾಂಪಸ್‌ನಲ್ಲಿ 2 ಲಕ್ಷ ಚದರ ಅಡಿ ಜಾಗದಲ್ಲಿ ಮಷಿನಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಅಲ್ಲಿ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. 30 ಸ್ಟಾರ್ಟಪ್‌ಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.
     ವಿಟಿಯು ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲೇ ಕೈಗಾರಿಕೆಗಳ ಸಂಪರ್ಕ ದೊರೆತರೆ ಮುಂದಿನ ದಾರಿ ಸುಗಮವಾಗುತ್ತದೆ. ಕೈಗಾರಿಕೆಗಳಿಗೆ ಪೂರಕವಾದ ಪಠ್ಯಕ್ರಮವನ್ನು ಅಳವಡಿಸುವ ಪ್ರಯತ್ನವಾಗಬೇಕಿದೆ ಎಂದು ಹೇಳಿದರು.
     ಉದ್ಯಮ ವಲಯದ ತಜ್ಞರು ತರಗತಿಗಳಿಗೆ ಬಂದು ವಿಶೇಷ ಉಪನ್ಯಾಸ ನೀಡಬೇಕು. ಸಂಶೋಧನೆಗಳು ಹೆಚ್ಚಾಗಬೇಕು, ಜ್ಞಾನದ ಪ್ರಸಾರವಾಗಬೇಕು. ವಿದ್ಯಾರ್ಥಿಗಳಲ್ಲಿ ಕೌಶಲಗಳನ್ನು ಬೆಳೆಸಬೇಕು. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಕೈಜೋಡಿಸಿದರೆ ಇದು ಸಾಧ್ಯವಿದೆ ಎಂದರು.
     ದಾವಣಗೆರೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗಿದೆ. ಅತ್ಯುತ್ತಮ ಪ್ರಯೋಗಾಲಯಗಳಿವೆ. ಸಣ್ಣ ನಗರಗಳಲ್ಲೂ ಸೆಂಟರ್ಸ್ ಆಫ್ ಎಕ್ಸೆಲೆನ್ಸ್ ಸ್ಥಾಪನೆಯಾಗಬೇಕಿದೆ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗುವ ಅವಕಾಶ ಕೈತಪ್ಪಬಾರದು ಎನ್ನುವ ಕಾರಣಕ್ಕೆ ವಿಟಿಯುನಿಂದ ಎರಡು ಘಟಿಕೋತ್ಸವಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
     ವಿಶ್ವೇಶ್ವರಯ್ಯ ರಿಸರ್ಚ್ ಆ್ಯಂಡ್ ಇನೋವೇಷನ್ ಫೌಂಡೇಷನ್ ಮುಖ್ಯಸ್ಥ ಸಂತೋಷ ಇಟ್ಟಣಗಿ ಮಾತನಾಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಾ. ಎಚ್. ಲಕ್ಷ್ಮೀಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ ಕದಮ್, ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ, ಸಂಯೋಜಕ ಡಾ. ಶೇಖರಪ್ಪ ಬಿ. ಮಲ್ಲೂರ, ಡಾ. ಎಸ್. ಮಂಜಪ್ಪ ಇದ್ದರು.
     ಪ್ರಾಧ್ಯಾಪಕ ಡಾ. ಟಿ.ಡಿ. ವಿಷ್ಣುಮೂರ್ತಿ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ಎಸ್. ಹೊಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts