More

  ಸಿಆರ್‌ಸಿನಲ್ಲಿ 100 ಹಾಸಿಗೆ ಹಾಸ್ಟೆಲ್ ಸೌಲಭ್ಯ

  ದಾವಣಗೆರೆ : ಕರ್ನಾಟಕ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿ ಹೊಂದಿರುವ ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರಕ್ಕೆ 100 ಹಾಸಿಗೆಗಳ ಹಾಸ್ಟೆಲ್ ಸೇರಿ ಹೆಚ್ಚಿನ ಸೌಲಭ್ಯಗಳು ಬೇಕಿದ್ದು ಇದಕ್ಕೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
   ಸಮೀಪದ ವಡ್ಡಿನಹಳ್ಳಿ ಬಳಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರದ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
   ಈ ಕೇಂದ್ರಕ್ಕೆ ಒಟ್ಟು 58 ಕೋಟಿ ರೂ.ಗಳ ಯೋಜನೆ ಮಂಜೂರಾಗಿತ್ತು. ಇದುವರೆಗೆ 25 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಅನುದಾನ ಒದಗಿಸುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂದು, ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರಿಗೆ ಮನವಿ ಮಾಡಿದರು.
   ಒಟ್ಟು 13 ಎಕರೆ ಜಾಗವಿದೆ. ಸಾವಿರಾರು ಮಕ್ಕಳಿಗೆ ಇಲ್ಲಿ ಚಿಕಿತ್ಸೆ ದೊರೆತಿದೆ. ದಾವಣಗೆರೆಯಿಂದ ಸಿಆರ್‌ಸಿಗೆ ಬರಲು 14 ಲಕ್ಷ ರೂ. ವೆಚ್ಚದಲ್ಲಿ ಬಸ್‌ನ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದಿರುವ ಜಾಗ ಬಳಸಿಕೊಂಡು ಕೊಗ್ಗನೂರು ಬಳಿಯಿರುವ 7.23 ಎಕರೆ ಜಾಗದಲ್ಲಿ ಅಂಗವಿಕಲರಿಗಾಗಿ ಕ್ರೀಡಾ ಸಮುಚ್ಚಯ ನಿರ್ಮಿಸುವ ಉದ್ದೇಶವಿದೆ. ಈ ಸೌಲಭ್ಯ ದೇಶದ ಯಾವುದೇ ಸಿಆರ್‌ಸಿ ಕೇಂದ್ರಗಳಲ್ಲಿ ಇಲ್ಲ.
   ವಿಶೇಷ ಒಲಂಪಿಕ್ ಹಾಗೂ ಪ್ಯಾರಾ ಒಲಂಪಿಕ್‌ನಲ್ಲಿ ಭಾಗವಹಿಸುವ ವಿಕಲಾಂಗ ಅಥ್ಲೀಟುಗಳಿಗೆ ಇಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಬಹು ಚಿಕಿತ್ಸಕ ಈಜುಕೊಳ ಹಾಗೂ ಸಹಾಯಕ ಸಾಧನಗಳ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಚಿಂತನೆಯಿದೆ ಎಂದರು.
   ಇಲ್ಲಿಯವರೆಗೆ 5881 ವಿಕಲಾಂಗ ವ್ಯಕ್ತಿಗಳು 33,368 ಬಾರಿ ಕೇಂದ್ರಕ್ಕೆ ಭೇಟಿ ನೀಡಿ ಸೇವೆ ಪಡೆದುಕೊಂಡಿದ್ದಾರೆ. 4169 ಮಂದಿ ಟಿಎಲ್‌ಎಂ ಕಿಟ್ ಸೇರಿ ವಿವಿಧ ಸಾಧನ ಸಲಕರಣೆಗಳನ್ನು ಪಡೆದುಕೊಂಡಿದ್ದಾರೆ. 699 ದೈಹಿಕ ವಿಕಲಾಂಗರಿಗೆ ವೀಲ್ ಚೇರ್, 645 ಜನರಿಗೆ ಶ್ರವಣ ಸಾಧನಗಳನ್ನು ವಿತರಿಸಲಾಗಿದೆ.
   ಕಳೆದ ವರ್ಷದ ಅಂತ್ಯಕ್ಕೆ 53,625 ವಿಕಲಾಂಗರಿಗೆ ಹಾಗೂ ಅವರ ಪಾಲಕರಿಗೆ, ಆರೈಕೆದಾರರಿಗೆ 463 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2019 ರಿಂದ ದಾವಣಗೆರೆ ಸಿ.ಆರ್.ಸಿ. 2 ಡಿಪ್ಲೊಮಾ ಕೋರ್ಸುಗಳನ್ನು ನಡೆಸುತ್ತಿದೆ. 18 ಸಾವಿರ ಚದರ ಅಡಿ ವಿಸ್ತೀರ್ಣದ ಈ ನೂತನ ಕಟ್ಟಡದಲ್ಲಿ 45 ಕೊಠಡಿಗಳಿವೆ ಎಂದರು.
   ಮಾಯಕೊಂಡ ಮಾಜಿ ಶಾಸಕ ಪ್ರೊ. ಲಿಂಗಣ್ಣ, ಹೊನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷ ಎಸ್. ನಾಗರಾಜ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್. ಬಳ್ಳಾರಿ, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಯಶೋದಾ, ಕೆ.ಎಂ. ವೀರೇಶ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಜೀವನಮೂರ್ತಿ, ರಾಜನಹಳ್ಳಿ ಶಿವಕುಮಾರ್, ಸಿಆರ್‌ಸಿಯ ನಿರ್ದೇಶಕಿ ಮೀನಾಕ್ಷಿ, ಸಿಕಂದರಾಬಾದ್ ಶಾಲೆಯ ಪ್ರಾಚಾರ್ಯ ಗಣೇಶ ಶೇರೆಗಾರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts