More

    ಕಾಡಿನಲ್ಲಿ 24 ಗಂಟೆ ಒಂಟಿಯಾಗಿದ್ದ ಬಾಲಕಿ!

    ದಾವಣಗೆರೆ: ಮೆಕ್ಕೆಜೋಳದ ತೆನೆ ಮುರಿಯಲು ಪಾಲಕರೊಂದಿಗೆ ಹೊಲಕ್ಕೆ ತೆರಳಿದ್ದ 6 ವರ್ಷದ ಬಾಲಕಿಯೊಬ್ಬಳು ಹರಿಹರ ತಾಲೂಕು ಕೊಮಾರನಹಳ್ಳಿ ಬಳಿ ಕಾಡಿನಲ್ಲಿ ತಪ್ಪಿಸಿಕೊಂಡು 24ಗಂಟೆ ಅರಣ್ಯದಲ್ಲಿ ಒಂಟಿಯಾಗಿ ಕಳೆದ ಪ್ರಸಂಗ ಬೆಳಕಿಗೆ ಬಂದಿದೆ.

    ಜೊಯಾ ಕಾಡಿನಲ್ಲಿ ತಪ್ಪಿಸಿಕೊಂಡಿದ್ದ ಬಾಲಕಿ. ತಂದೆ ಅಸ್ಗರ್‌ಅಲಿ, ತಾಯಿ ಫಾತಿಮಾ ಮಲೇಬೆನ್ನೂರು ನಿವಾಸಿಗಳಾಗಿದ್ದು, ಅವರಿಗೆ ಜೊಯಾ ಸೇರಿದಂತೆ ನಾಲ್ವರು ಪುತ್ರಿಯರಿದ್ದಾರೆ. ಕೊಮಾರನಹಳ್ಳಿ ಬಳಿಯ ಕಾಡಿನ ಪಕ್ಕದಲ್ಲಿ ಅವರಿಗೆ ಸೇರಿದ 4 ಎಕರೆ ಜಮೀನಿದೆ.

    ಮಂಗಳವಾರ ತಾಯಿ ಫಾತಿಮಾ, ಚಿಕ್ಕಪ್ಪ ಗೌಸ್ ಅವರು ಮೆಕ್ಕೆಜೋಳದ ತೆನೆ ಮುರಿಯಲು ಹೊಲಕ್ಕೆ ಹೋದರು, ಅವರೊಂದಿಗೆ ಜೊಯಾ ಕೂಡಾ ತೆರಳಿದ್ದಳು. ತಂದೆ ಹಮಾಲಿ ಕೆಲಸಕ್ಕೆ ಬೇರೆ ಕಡೆಗೆ ಹೋಗಿದ್ದರು.

    ಮಧ್ಯಾಹ್ನ 2.30 ಗಂಟೆಗೆ ಬಾಲಕಿ ಸೇರಿದಂತೆ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡಿದ್ದಾರೆ. ಊಟವಾದ ನಂತರ ಜೊಯಾ, ತೆನೆ ಲೋಡ್ ಆಗಿದ್ದ ಟ್ರಾೃಕ್ಟರ್ ಹತ್ತಿ ಕುಳಿತಳು.

    ಆಕೆಯನ್ನು ಕೆಳಗೆ ಇಳಿಯುವಂತೆ ಹೇಳಿ ಸಮೀಪದ ಮರದ ಬಳಿ ಕೊಡದಲ್ಲಿಟ್ಟಿದ್ದ ನೀರು ಕುಡಿದು ಬರುವಂತೆ ಕಳಿಸಿದರು. ಮತ್ತೆ ಎಲ್ಲರೂ ಹೊಲದ ಕೆಲಸದಲ್ಲಿ ಮಗ್ನರಾದರು, ಆದರೆ ನೀರು ಕುಡಿಯಲು ಹೋಗಿದ್ದ ಬಾಲಕಿ ದಾರಿ ತಪ್ಪಿಸಿಕೊಂಡಳು.

    ರಾತ್ರಿಯಿಡೀ ಹುಡುಕಾಟ: ಸಂಜೆ 4ಗಂಟೆ ಹೊತ್ತಿಗೆ ಜೊಯಾ ಎಲ್ಲಿದ್ದಾಳೆಂದು ಗಮನಿಸಿದಾಗ ಆಕೆ ಕಾಣಿಸಲಿಲ್ಲ. ಗಾಬರಿಗೊಂಡ ಪಾಲಕರು ಹುಡುಕಾಡಿದರು. ವಿಷಯ ತಿಳಿದು ಗ್ರಾಮಸ್ಥರೂ ಕುಟುಂಬದವರ ನೆರವಿಗೆ ಬಂದರು. 300 ಜನ ಬಾಲಕಿಗಾಗಿ ರಾತ್ರಿಯಿಡೀ ಟಾರ್ಚ್ ಹಿಡಿದು ಹುಡುಕಾಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ವಿಚಾರಿಸಿದ್ದಾರೆ. ಪ್ರಯತ್ನ ವಿಫಲವಾದಾಗ ಕೊನೆಗೆ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಮಂಗಳವಾರ ಸಂಜೆ ತಪ್ಪಿಸಿಕೊಂಡಿದ್ದ ಜೊಯಾ ಪತ್ತೆಯಾಗಿದ್ದು ಬುಧವಾರ ಸಂಜೆ. ಬರೋಬ್ಬರಿ 24 ಗಂಟೆ ಪಾಲಕರಿಂದ ದೂರವಾಗಿ, ಕಾಡಿನಲ್ಲಿ ಒಂಟಿಯಾಗಿ ಕಾಲ ಕಳೆದಿದ್ದಳು!

    ನಿರ್ಜನ ಪ್ರದೇಶ, ಕಾಡು ಪ್ರಾಣಿಗಳ ಭಯ, ಮೈ ಕೊರೆಯುವ ಚಳಿಯಲ್ಲಿ ನೀರು, ಆಹಾರವಿಲ್ಲದೇ ಆಕೆ ಬದುಕಿ ಬಂದಿದ್ದೇ ಪವಾಡವೆಂದು ಗ್ರಾಮಸ್ಥರು ವಿವರಿಸಿದರು.

    ಬುಧವಾರ ಸಂಜೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಮಗುವೊಂದು ಅಳುವ ದನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದಾಗ ಬಾಲಕಿ ಪತ್ತೆಯಾಗಿದ್ದಾಳೆ.

    ಮಗಳು ಸಿಗ್ತಾಳೊ ಇಲ್ಲವೊ ಎಂದು ಭರವಸೆ ಕಳೆದುಕೊಂಡಿದ್ದೆವು. ರಾತ್ರಿಯೆಲ್ಲ ಊಟ, ನಿದ್ದೆ ಮಾಡಿಲ್ಲ. ಸಿಕ್ಕ ಮೇಲೆ ನೆಮ್ಮದಿ ಆಯಿತು.
    > ಗೌಸ್ ಬಾಲಕಿಯ ಚಿಕ್ಕಪ್ಪ

    ಆ ಪ್ರದೇಶ ಹುಲ್ಲು, ಮುಳ್ಳು, ಪೊದೆಗಳಿಂದ ಕೂಡಿದೆ. ಕಾಡು ಪ್ರಾಣಿಗಳು ಆಗಾಗ ಕಾಣಿಸುತ್ತವೆ. ಅಂಥ ಕಡೆ ನೀರು, ಊಟವಿಲ್ಲದೇ ಚಳಿಯಲ್ಲಿ ಆ ಮಗು ಹೇಗಿತ್ತೆಂಬುದು ಆಶ್ಚರ್ಯ.
    > ಫೈಜ್‌ಮೊಯುದ್ದೀನ್ ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts