More

    ಮಾರುಕಟ್ಟೆಗೆ ಲಗ್ಗೆ ಇಟ್ಟ ಜನ  ಹೂ, ಹಣ್ಣು

    ದಾವಣಗೆರೆ : ಮಳೆ ಕೊರತೆ ಹಾಗೂ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬದ ಆಚರಣೆಗೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆದಿದ್ದು, ಭಾನುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.
      ಹಬ್ಬಕ್ಕಾಗಿ ಈಗಾಗಲೇ ಮನೆ ಹಾಗೂ ಗಲ್ಲಿಗಳಲ್ಲಿ ಆಕರ್ಷಕ ಮಂಟಪಗಳು ನಿರ್ಮಾಣಗೊಂಡಿದ್ದು, ಮಾರುಕಟ್ಟೆಯಲ್ಲಿ ಸುಂದರ ಗಣಪತಿ ಮೂರ್ತಿಗಳು ಮನೆಗೆ ಬರಲು ಸಿದ್ಧಗೊಂಡಿವೆ.
     ಭಾದ್ರಪದ ಚೌತಿಯ ಶುಭದಿನ ಆದಿಪೂಜಿತ ವಿನಾಯಕನ ಆರಾಧನೆಗೆ ನಾಗರಿಕರು ಸುಂದರ, ವೈವಿಧ್ಯಮಯ ಗಣೇಶ ಮೂರ್ತಿಗಳ ಜತೆಗೆ ಪೂಜಾ ಸಾಮಗ್ರಿ, ಮಾವಿನ ತಳಿರು, ಬಾಳೆಕಂದು, ಬಗೆಬಗೆಯ ಹೂವು-ಹಣ್ಣು ಖರೀದಿಸಿದರು.
     ಮಾರುಕಟ್ಟೆಯಲ್ಲಿ ಬಾಳೇಹಣ್ಣು ಡಜನ್ 60ರಿಂದ 90 ರೂ, ಒಂದು ಕೆಜಿಗೆ ಸೇಬು 140 ರೂ, ದಾಳಿಂಬೆ 150 ರೂ, ಮೋಸಂಬಿ 60ರಿಂದ 80 ರೂ, ದ್ರಾಕ್ಷಿ 200 ರೂ. ಬೆಲೆ ನಿಗದಿಪಡಿಸಲಾಗಿತ್ತು.
     ಒಂದು ಮಾರು ಚೆಂಡು ಮತ್ತು ಸೇವಂತಿಗೆ 30ರಿಂದ 50 ರೂ., ಮಲ್ಲಿಗೆ 80 ರೂ., ಕನಕಾಂಬರ 100 ರೂ., ಹೂವಿನ ಹಾರಗಳು 100ರಿಂದ 250 ರೂ.ಗಳವರೆಗೆ ಮಾರಾಟ ಮಾಡಲಾಯಿತು. ಅಲ್ಲದೇ ಮಂಟಪಗಳ ಅಲಂಕೃತ ವಸ್ತುಗಳ ಖರೀದಿಯೂ ನಡೆಯಿತು.
     ಮಾರುಕಟ್ಟೆಯಲ್ಲಿ ಅರ್ಧ ಅಡಿಯಿಂದ ಹಿಡಿದು 9 ಅಡಿಯವರೆಗೆ ಸಿದ್ಧಗೊಂಡ ಮಣ್ಣಿನ ಗಣೇಶ ಮೂರ್ತಿಗಳನ್ನು 250 ರೂ.ಗಳಿಂದ 25 ಸಾವಿರ ರೂ.ವರೆಗೆ ಮೊತ್ತವನ್ನು ನೀಡಿ ನಾಗರಿಕರು ಹಾಗೂ ಯುವಕರು ಭಕ್ತಿಯಿಂದ ಕೊಂಡೊಯ್ದರು.
     ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಆಚರಿಸುವ ಗಣೇಶೋತ್ಸವ ಜಿಲ್ಲೆಯಲ್ಲಿ ಅತ್ಯಂತ ವಿಶೇಷ. ಈ ಬಾರಿ ಕೇದಾರನಾಥ ಮಂದಿರದ ಮಾದರಿ ನಿರ್ಮಿಸಲಾಗಿದ್ದು ಅತ್ಯಾಕರ್ಷಕ ಭವ್ಯ ಮಂದಿರ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts