More

    ಯೋಜನೆಗಳ ಯಶಸ್ಸಿಗೆ ನಾಗರಿಕರ ಸಹಭಾಗಿತ್ವ ಅಗತ್ಯ

    ದಾವಣಗೆರೆ : ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಬೇಕಾದರೆ ನಾಗರಿಕರ ಸಹಭಾಗಿತ್ವ ಮುಖ್ಯ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಅಭಿಪ್ರಾಯಪಟ್ಟರು.
     ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ, ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ವನಿತಾ ಪರಿಸರ ವೇದಿಕೆ,  ಹಮ್ ಫೌಂಡೇಶನ್ ಭಾರತ್ ಸಂಯುಕ್ತ ಆಶ್ರಯದಲ್ಲಿ ನಡೆದ, ಹಸಿ ತ್ಯಾಜ್ಯ ನಿರ್ವಹಣೆ ಮತ್ತು ಪೌಷ್ಟಿಕ ಕೈತೋಟ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     ಕಸ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ. ಮನೆ ತೆರಿಗೆ, ನೀರಿನ ತೆರಿಗೆ ಕಟ್ಟುತ್ತೇವೆ, ಅದೇ ರೀತಿ ಕಸದ ತೆರಿಗೆ ಪಾವತಿಸುತ್ತೇವೆ ಎಂದು ಕಸ ನಿರ್ವಹಣೆ ಬಗ್ಗೆ ಬೇಜವಾಬ್ದಾರಿತನ ತೋರಬಾರದು. ಶಾಂತಾಭಟ್ ಅವರು ವೈದ್ಯರಾಗಿದ್ದು ಸಮಾಜಸೇವೆ ಮಾಡುತ್ತಿದ್ದಾರೆ. ಅವರು ದಾವಣಗೆರೆಯ ಬ್ರಾೃಂಡ್ ಅಂಬಾಸಿಡರ್ ಆಗಿದ್ದಾರೆ. ಕಸದಿಂದ ರಸ ಅಭಿಯಾನದ ಮೂಲಕ ಬೇರೆಯವರಿಗೂ ಪ್ರೇರಣೆ ನೀಡಿದ್ದಾರೆ ಎಂದರು.
     ಪರಿಸರ ತಜ್ಞೆ ಡಾ.ಶಾಂತಾಭಟ್ ಮಾತನಾಡಿ, ಪರಿಸರ ದಿನವನ್ನು ಹಬ್ಬವಾಗಿ ಆಚರಣೆ ಮಾಡುತ್ತಿದ್ದೇವೆ. ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಿದ್ದೇವೆ. ಕೈತೋಟದ ಬಗ್ಗೆ ಮಹಿಳೆಯರಿಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಕಾರ್ಯಾಗಾರಗಳನ್ನು ಮಾಡಿದ್ದೇವೆ ಎಂದು ಹೇಳಿದರು.
     ಹಸಿ ಕಸ ನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಗಿದೆ. ಮನೆಯಲ್ಲೇ ಕೈತೋಟ ನಿರ್ಮಿಸುವ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ. ಮನೆಯಲ್ಲಿಯೇ ಹಸಿ ಕಸ ವಿಂಗಡನೆ ಹಾಗೂ ಕಾಂಪೋಸ್ಟ್ ವಿಧಾನದ ಬಗ್ಗೆ ತಿಳಿಸಲಾಗುವುದು. ನಂತರ ಕಾಂಪೋಸ್ಟ್ ಅನ್ನು ಯಾವ ರೀತಿ ಉಪಯೋಗ ಮಾಡಬೇಕು. ನಿರ್ವಹಣೆ ಹೇಗೆಂದು ತಿಳಿಸಿಕೊಡಲಾಗುವುದು ಎಂದರು.
     ತಾರಸಿ ಅಥವಾ ಮನೆಯ ಅಂಗಳದಲ್ಲಿ ಕಾಂಪೋಸ್ಟ್ ಬಳಸುವ ಮಾಹಿತಿ ನೀಡಲಾಗುವುದು. ಮನೆಯಲ್ಲಿ ಕಸ ನಿರ್ವಹಣೆ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ಕಸದಿಂದ ರಸ ಅಭಿಯಾನ ಕೈಗೊಳ್ಳುವುದು ನಮ್ಮ ಉದ್ದೇಶ ಎಂದು ವಿವರಿಸಿದರು.
     ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ದೇವರಾಜ ಟಿ.ಎನ್, ಎಂ.ಜಿ. ಬಸವನಗೌಡ, ಸರೋಜಮ್ಮ ಮುಂಡಾಸ್, ಅಲಕನಂದಾ ರಾಮದಾಸ್, ಡಾ. ಆರತಿ ಸುಂದರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts