More

    ಮಾದಕ ವ್ಯಸನ ತಡೆಗಟ್ಟಲು ವಿದ್ಯಾರ್ಥಿಗಳ ಸಹಕಾರ ಅಗತ್ಯ

    ದಾವಣಗೆರೆ : ಮಾದಕ ವಸ್ತುಗಳ ವ್ಯಸನ ತಡೆಗಟ್ಟಲು ವಿದ್ಯಾರ್ಥಿಗಳು ಸರ್ಕಾರದ ಇಲಾಖೆಗಳ ಜತೆಗೆ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಗರದ ಎ.ಆರ್.ಎಂ. ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ, ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ತಂಬಾಕು, ಗುಟ್ಕಾ, ಸಿಗರೇಟ್‌ನಂಥ ಚಟಗಳಿಂದ ಆರಂಭವಾಗಿ, ಅದೇ ವ್ಯಸನವಾಗುತ್ತ ಹೋಗುತ್ತದೆ. ಗಾಂಜಾದಂಥ ಮಾದಕ ವಸ್ತುಗಳ ದಾಸರಾಗಿ ಬಿಡುತ್ತಾರೆ. ಮೋಜು, ಆನಂದಕ್ಕಾಗಿ ಶುರುವಾಗಿದ್ದು ಮುಂದೆ ಜೀವನಕ್ಕೇ ತೊಂದರೆ ಮಾಡುತ್ತದೆ ಎಂದು ತಿಳಿಸಿದರು.
     ಕೆಲವು ಡ್ರಗ್‌ಗಳನ್ನು ಔಷಧಕ್ಕಾಗಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಅದನ್ನೇ ಹಣ ಗಳಿಕೆಯ ದಾರಿ ಮಾಡಿಕೊಂಡವರಿದ್ದಾರೆ. ಇದರಿಂದ ಸಾರ್ವಜನಿಕ ಆರೋಗ್ಯ ಹಾಳಾಗುತ್ತದೆ. ಅನೇಕ ಅಪರಾಧಗಳಿಗೂ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
     ಈ ದಂಧೆಯಲ್ಲಿ ತೊಡಗಿದವರು ಆರಂಭದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ, ಕ್ರಮೇಣ ದುಬಾರಿಯಾಗುತ್ತದೆ. ಇದರಿಂದ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮವಾಗುತ್ತದೆ. ಬುದ್ಧಿಮತ್ತೆಗೆ ಹೊಡೆತ ಬೀಳುತ್ತದೆ. ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ವಿರುದ್ಧ ಜಾಗೃತರಾಗಬೇಕು. ಮಾದಕ ವಸ್ತುಗಳ ಸಾಗಾಣಿಕ ಅಥವಾ ಸೇವನೆ ಮಾಡುವುದು ಕಂಡುಬಂದರೆ ದೂರು ನೀಡಬೇಕು ಎಂದು ಹೇಳಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯು ಪಿಡುಗಾಗಿದ್ದು ವಿದ್ಯಾರ್ಥಿಗಳೇ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಆರೋಗ್ಯವನ್ನು ಹಾಳು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
     ಸಾಮಾಜಿಕ ಅಸಮಾನತೆ, ದೌರ್ಜನ್ಯ ಇನ್ನಿತರ ಕಾರಣಗಳಿಂದ ಹಲವರು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಹಾಸ್ಟೆಲ್ ಇನ್ನಿತರ ಕಡೆಗಳಲ್ಲಿ ಇಂಥ ಚಟುವಟಿಕೆಗಳು ಕಂಡುಬರುತ್ತವೆ. ಅವುಗಳನ್ನು ತಡೆಗಟ್ಟುವಲ್ಲಿ ವ್ಯವಸ್ಥೆ ವಿಫಲವಾಗಿದೆ. ವಿದ್ಯಾರ್ಥಿಗಳು ಇಂಥ ದುಶ್ಚಟಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts