More

    ಕರೊನಾ ಮಣಿಸಿ, ಕೃಷಿ ಕಡೆ ಗಮನಿಸಿ

    ದಾವಣಗೆರೆ: ಕರೊನಾ ನಿಗ್ರಹದ ಜತೆಯಲ್ಲೇ ಕೃಷಿ ಪೂರಕ ಚಟುವಟಿಕೆಗಳತ್ತ ಆದ್ಯತೆ ನೀಡುವಂತೆ ಸಿಎಂ ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

    ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಸಿಎಂ, ಕರೊನಾ ವಿಚಾರದಲ್ಲಿ ಮೈಮರೆಯುವುದು ಬೇಡ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಈಗಿರುವ ಸವಾಲನ್ನು ಎಲ್ಲರೂ ಸೇರಿ ಪರಿಣಾಮಕಾರಿಯಾಗಿ ಎದುರಿಸಬೇಕಿದೆ ಎಂದರು.

    ಕೃಷಿ ಪೂರಕವಾದ ಬಿತ್ತನೆಬೀಜ, ರಸಗೊಬ್ಬರ ಇನ್ನಿತರೆ ಕೊರತೆಯಾಗದಂತೆ ರೈತರಿಗೆ ಎಲ್ಲ ಸವಲತ್ತುಗಳನ್ನು ಸಕಾಲಕ್ಕೆ ಒದಗಿಸಬೇಕು. ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಿ. ಸಮಸ್ಯೆಗಳಿದ್ದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ, ಪರಿಹರಿಸಿಕೊಳ್ಳುವಂತೆ ತಿಳಿಸಿದರು.

    ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 536 ಕೋವಿಡ್ ಪ್ರಕರಣ ದೃಢಪಟ್ಟಿದ್ದು, 410 ಜನರು ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ. 20 ಜನರು ಮೃತಪಟ್ಟಿದ್ದು, 104 ಸಕ್ರಿಯ ಪ್ರಕರಣಗಳಿವೆ ಎಂದು ವಿವರಿಸಿದರು.

    ಒಟ್ಟು 126 ಕಂಟೇನ್ಮೆಂಟ್ ವಲಯಗಳಲ್ಲಿ 46 ಅನ್ನು ಡಿನೋಟಿಫೈ ಮಾಡಲಾಗಿದೆ. ಈವರೆಗೆ 32 ಸಾವಿರ ಗಂಟಲದ್ರವ ಪರೀಕ್ಷೆ ಮಾಡಿಸಲಾಗಿದೆ. 1420 ಕೋವಿಡ್ ಬೆಡ್‌ಗಳ ವ್ಯವಸ್ಥೆ ಇದೆ ಎಂದು ತಿಳಿಸಿದರು.

    ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾತನಾಡಿ, ಜಿಲ್ಲೆಯಲ್ಲಿ ಸುವ್ಯವಸ್ಥಿತ ವೈದ್ಯಕೀಯ ಸೌಲಭ್ಯಗಳಿದ್ದರೂ, ಸಾವಿನ ಪ್ರಮಾಣ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ರ‌್ಯಾಪಿಡ್ ಆಂಟಿಜೆನ್ ಟೆಸ್ಟ್‌ನೊಂದಿಗೆ, ಗಂಟಲ ದ್ರವ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕೆಂದು ಸೂಚಿಸಿದರು.

    ಎಸ್ಪಿ ಹನುಮಂತರಾಯ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೂಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಡಿಎಸ್‌ಒ ಡಾ. ಜಿ.ಡಿ.ರಾಘವನ್, ಇತರೆ ಅಧಿಕಾರಿಗಳಿದ್ದರು.

    ಶಿಷ್ಯವೇತನ ಇತ್ಯರ್ಥಪಡಿಸಿ : ಜೆಜೆಎಂ ವೈದ್ಯಕೀಯ ಕಾಲೇಜಿನ ಗೃಹವೈದ್ಯರಿಗೆ ಶಿಷ್ಯ ವೇತನವನ್ನು ಕಾಲೇಜಿನ ಆಡಳಿತ ಮಂಡಳಿಯೇ ಭರಿಸುವಂತೆ ಸರ್ಕಾರವೇ ತಿಳಿಸಿದೆ. ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಜಿಲ್ಲಾಧಿಕಾರಿಗೆ ಸೂಚಿಸಿದರು. ಶಿಷ್ಯವೇತನ ನೀಡುವ ಸಂಬಂಧ ಲಿಖಿತ ಆದೇಶ ಬರುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದಾಗಿ ಪ್ರತಿಭಟನಾನಿರತ ಗೃಹ ವೈದ್ಯರು ತಿಳಿಸಿದ್ದಾರೆ. ಆಡಳಿತ ಮಂಡಳಿ ಜತೆ ಮಂಗಳವಾರವೇ ಸಭೆ ನಡೆಸುವುದಾಗಿ ಡಿಸಿ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts