ಸಿನಿಮಾ

ಅಪ್ಪು ಅಭಿಮಾನಿಯ ಸೈಕಲ್ ಸವಾರಿ

ದಾವಣಗೆರೆ : ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ತಮಿಳುನಾಡಿನ ಯುವಕನೊಬ್ಬ ಒಂದೂವರೆ ವರ್ಷದಿಂದ ದೇಶಾದ್ಯಂತ ಸೈಕಲ್ ಸವಾರಿ ಮಾಡುತ್ತಿದ್ದು ತಮ್ಮ ಈ ಪ್ರಯಾಣವನ್ನು ಅಪ್ಪು ಅವರಿಗೆ ಅರ್ಪಿಸಿದ್ದಾರೆ.
 ಕೊಯಮತ್ತೂರು ಬಳಿಯ ಪೊಳ್ಳಾಚಿ ಗ್ರಾಮದ 26 ವರ್ಷದ ಮುತ್ತು ಸೆಲ್ವನ್, ಯಾನದ ಮಾರ್ಗವಾಗಿ ಎರಡು ದಿನಗಳ ಹಿಂದೆ ದಾವಣಗೆರೆಗೆ ಬಂದಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು.
 ಮುತ್ತು 2021ರ ಡಿ. 21ರಂದು ತಮಿಳುನಾಡಿನಿಂದ ಸೈಕಲ್ ಸವಾರಿ ಆರಂಭಿಸಿದರು. ಒಟ್ಟು 1111 ದಿನಗಳ ಸುದೀರ್ಘ ಅವಧಿಯ ಪ್ರಯಾಣವದು. 34,300 ಕಿ.ಮೀ.ಗಳ ದೂರ ಸಾಗುವ ಗುರಿಯನ್ನು ಹೊಂದಿದ್ದು ಈಗಾಗಲೆ 18,600 ಕಿ.ಮೀ.ಗಳನ್ನು ಅವರು ಕ್ರಮಿಸಿದ್ದಾರೆ. ಇನ್ನೂ 13,700 ಕಿ.ಮೀ. ಸೈಕ್ಲಿಂಗ್ ಮಾಡಬೇಕಿದೆ.
 ಪುನೀತ್ ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ‘ಭಾರತದ ಎಲ್ಲ ನದಿಗಳನ್ನು ಜೋಡಿಸಿ, ದೇಶದ ಎಲ್ಲರನ್ನೂ ಭಾರತೀಯರಾಗಿ ನೋಡಿ’ ಎನ್ನುವ ಸಂದೇಶವನ್ನು ಹೊತ್ತು ಅವರು ಸೈಕ್ಲಿಂಗ್ ಮಾಡುತ್ತಿದ್ದು ಗಿನ್ನೀಸ್ ದಾಖಲೆ ನಿರ್ಮಿಸುವ ಕಡೆಗೆ ದೃಷ್ಟಿ ನೆಟ್ಟಿದ್ದಾರೆ.
 ಹೋದ ಕಡೆಯಲ್ಲೆಲ್ಲ ಅಪ್ಪು ಅಭಿಮಾನಿಗಳನ್ನು ಭೇಟಿಯಾಗುವುದು, ಶಾಲೆ, ಕಾಲೇಜುಗಳಿಗೆ ಹೋಗಿ ಅರಿವು ಮೂಡಿಸುವುದು, ಪೊಲೀಸ್ ಠಾಣೆಗಳಿಗೆ ಹೋಗುವುದು ಮಾಡುತ್ತಿದ್ದಾರೆ. ಮುತ್ತು ಅವರ ಸೈಕಲ್ ಮೇಲೆ ಅಪ್ಪು ಅವರ ಭಾವಚಿತ್ರ, ಅವರ ಬಗ್ಗೆ ಕಿರು ಬರಹವಿದೆ. ಸೈಕಲ್‌ಗೆ ರಾಷ್ಟ್ರಧ್ವಜವನ್ನು ಕಟ್ಟಿದ್ದಾರೆ.
 ದಿನಕ್ಕೆ 50 ಕಿ.ಮೀ.ಗಳಂತೆ ಈಗಾಗಲೆ ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು, ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ. ದೇಶದ 733 ಜಿಲ್ಲೆಗಳ ಪೈಕಿ 422 ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
 ಗೇರ್ ರಹಿತ ಸೈಕಲ್ ಸವಾರಿ ಇವರ ವಿಶೇಷ. ಪ್ರಯಾಣದ ವೇಳೆ 4 ಅಪಘಾತಗಳಾಗಿವೆ. 81 ಬಾರಿ ಟೈರ್ ಮತ್ತು ಟ್ಯೂಬ್ ಬದಲಾವಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
 ಮುತ್ತು ಸೆಲ್ವನ್ ಎಂಬಿಎ ಪದವೀಧರ. ಸೇಲ್ಸ್ ಮತ್ತು ಸರ್ವೀಸ್ ವಿಭಾಗದಲ್ಲಿ 2 ವರ್ಷ ಕೆಲಸ ಮಾಡಿದ್ದಾರೆ. ಅಪ್ಪು ಅಭಿಮಾನಿಯಾದ ಕರ್ನಾಟಕದ ತಮ್ಮ ಗೆಳೆಯ ರಂಜೀತ್ ಅವರ ಮೂಲಕ ಪುನೀತ್ ರಾಜಕುಮಾರ ಅವರ ವ್ಯಕ್ತಿತ್ವದ ಪರಿಚಯವಾಯಿತು ಎಂದು ಮುತ್ತು ತಿಳಿಸಿದರು.
 ಮೇ 28ಕ್ಕೆ ಬೆಂಗಳೂರು ತಲುಪಲಿರುವ ಮುತ್ತು, ಅಲ್ಲಿ ನಟ ಶಿವರಾಜಕುಮಾರ್, ಅಶ್ವಿನಿ ಅವರನ್ನು ಭೇಟಿಯಾಗಲಿದ್ದಾರೆ. ಮೇ 29ರಂದು ಅಪ್ಪು ಸಮಾಧಿಯ ದರ್ಶನ ಪಡೆಯಲಿದ್ದಾರೆ.

Latest Posts

ಲೈಫ್‌ಸ್ಟೈಲ್