More

    ದಾವಣಗೆರೆಯಲ್ಲಿ ರಾಜ್ಯಮಟ್ಟದ ವಾಣಿಜ್ಯೋತ್ಸವ

    ದಾವಣಗೆರೆ : ಭಾರತವನ್ನು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ಸ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ನಿರ್ದೇಶಕ ಡಾ. ಎಂ.ಆರ್. ಶೊಲ್ಲಾಪೂರ್ ಹೇಳಿದರು.
     ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ 5ನೇ ವಾಣಿಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಭಾರತದ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ. ಶೇ. 7.6 ರಷ್ಟು ಬೆಳವಣಿಗೆ ದರವನ್ನು ಹೊಂದಿದ್ದು ಇದು ಜಗತ್ತಿನಲ್ಲೇ ಗರಿಷ್ಠವಾಗಿದೆ. ಚೀನಾದಲ್ಲಿ ಶೇ. 4.9 ಅಭಿವೃದ್ಧಿ ದರವಿದೆ. ಅಮೆರಿಕ, ಜರ್ಮನಿ ನಂತರದ ಸ್ಥಾನದಲ್ಲಿ ಬರುತ್ತವೆ. ಮುಂದಿನ ಶತಮಾನ ಭಾರತದ್ದಾಗಿರಲಿದೆ ಎಂದು ಹೇಳಿದರು.
     ನಮ್ಮ ದೇಶದ ಅರ್ಥ ವ್ಯವಸ್ಥೆಯ ಗಾತ್ರ 4 ಟ್ರಿಲಿಯನ್ ಡಾಲರ್ ಆಗಿದ್ದು 2025ರ ವೇಳೆಗೆ ಅದು 5 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಅದರ ಮುಂದಿನ 5 ವರ್ಷಗಳಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ನಮ್ಮದಾಗುವ ಗುರಿಯಿದೆ. ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಆ ಕನಸನ್ನು ನನಸು ಮಾಡಬೇಕಿದೆ ಎಂದು ತಿಳಿಸಿದರು.
     ವಾಣಿಜ್ಯ ಶಾಸ್ತ್ರ ಕ್ರಿಯಾಶೀಲ ವಿಷಯವಾಗಿದ್ದು ಉನ್ನತ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಜಗತ್ತಿನ ಇತಿಹಾಸದಲ್ಲಿ ನಾಗರಿಕತೆಗಳ ಉತ್ತುಂಗಕ್ಕೆ ವ್ಯಾಪಾರ ಮತ್ತು ವಾಣಿಜ್ಯಗಳು ಸಂಕೇತವಾಗಿವೆ ಎಂದು ಗುಪ್ತರು, ಚೋಳರು, ವಿಜಯನಗರ ಅರಸರ ಕಾಲದ ಆರ್ಥಿಕತೆಯ ಉದಾಹರಣೆ ನೀಡಿದರು. ಈ ವಿಷಯದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯದ ನಿರ್ಮಾತೃಗಳು ಎಂದು ಹೇಳಿದರು.
     ಕೇವಲ ಅಂಕ ಗಳಿಕೆಗೆ ಬೆಲೆ ಇಲ್ಲ, ಜತೆಗೆ ಉತ್ತಮ ಕೌಶಲಗಳೂ ಇದ್ದಾಗ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ಭವಿಷ್ಯದ ಅರ್ಥ ವ್ಯವಸ್ಥೆಯ ನಾಯಕರಾಗಿ ಬೆಳೆಯಬೇಕು ಎಂದು ಹಾರೈಸಿದರು.
     ವಾಣಿಜ್ಯ ಶಾಸ್ತ್ರ ಮತ್ತು ಬ್ಯಾಂಕಿಂಗ್ ನಡುವೆ ನಿಕಟ ಸಂಬಂಧವಿದೆ. ಖಾಸಗಿ ಬ್ಯಾಂಕುಗಳೂ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿವೆ. ಸೇವಾ ವಲಯಕ್ಕೂ ಅಷ್ಟೇ ಮಹತ್ವವಿದೆ ಎಂದರು.
     ವಿದ್ಯಾರ್ಥಿಗಳು ಗ್ರಾಮೀಣ ಭಾರತವನ್ನು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕ ಸಾಕ್ಷರತೆ, ಅದರಲ್ಲೂ ಡಿಜಿಟಲ್ ಹಣಕಾಸು ವ್ಯವಸ್ಥೆಯ ಕುರಿತು ತಿಳಿಯಬೇಕು. ಮುಂದೆ ಏನಾಗಬೇಕು ಎನ್ನುವ ದೊಡ್ಡ ಗುರಿ ಇರಲಿ, ಆಶಾವಾದಿಗಳಾಗಿ ಅದನ್ನು ಸಾಧಿಸಬೇಕು ಎಂದು ಹೇಳಿದರು.
     ಕಾಲೇಜು ಪ್ರಾಚಾರ್ಯ ಡಾ. ಬಿ. ವೀರಪ್ಪ ಮಾತನಾಡಿ, ವಿಜ್ಞಾನ ವಿಷಯಕ್ಕೆ ಹೋಲಿಸಿದರೆ ವಾಣಿಜ್ಯ ಶಿಕ್ಷಣದಲ್ಲಿ ಶುಲ್ಕ ಕಡಿಮೆ. ಅವಕಾಶಗಳೂ ಸಾಕಷ್ಟಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಈ ಕೋರ್ಸ್‌ಗಳಿಗೆ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
     ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ವಿಜ್ಞಾನ ವಿಷಯ ವಿದ್ಯಾರ್ಥಿಗಳಿಗೆ ಮಾದರಿಗಳ ಪ್ರದರ್ಶನ ಸಾಮಾನ್ಯವಾಗಿರುತ್ತದೆ, ಆದರೆ ವಾಣಿಜ್ಯ ಶಾಸ್ತ್ರ ಓದುವ ಮಕ್ಕಳ ಶೈಕ್ಷಣಿಕ ಮತ್ತು ಕೌಶಲಾಭಿವೃದ್ಧಿಗೆ ಈ ಪ್ರದರ್ಶನ ಪೂರಕವಾಗಿದೆ ಎಂದು ಹೇಳಿದರು.
     …
     
     (ಬಾಕ್ಸ್)
     ಗಮನ ಸೆಳೆದ ಮಾದರಿಗಳು
     ವಾಣಿಜ್ಯೋತ್ಸವದಲ್ಲಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಮಾದರಿಗಳು ಗಮನ ಸೆಳೆದವು.
     ವಿವಿಧ ಬಗೆಯ ನೋಟು, ನಾಣ್ಯಗಳು, ಆರ್ಥಿಕ ವಲಯಗಳ ವಿವರಣೆ, ಡಿಜಿಟಲ್ ಆರ್ಥಿಕತೆ, ವಿಮೆಯ ಪ್ರಕಾರಗಳು, ಸಕ್ಕರೆ ಉದ್ಯಮ, ಜವಳಿ ಕ್ಷೇತ್ರ ಇತ್ಯಾದಿ ವಿಷಯಗಳ ಕುರಿತು ಮಾದರಿಗಳನ್ನು ಪ್ರದರ್ಶಿಸಲಾಯಿತು.
     ದಾವಣಗೆರೆ ಅಲ್ಲದೇ ಬಾಗಲಕೋಟೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳ 28 ಕಾಲೇಜುಗಳಿಂದ 510 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts