More

    ಪರಿಸರ ಕಾಪಾಡುವುದು ಎಲ್ಲರ ಹೊಣೆ

    ದಾವಣಗೆರೆ : ನಮ್ಮ ಸುತ್ತಲಿನ ಪರಿಸರವನ್ನು ನಾವೆಲ್ಲರೂ ಕಾಪಾಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಡಾ. ರಾಮಲಿಂಗಪ್ಪ ಹೇಳಿದರು.
     ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ‘ಎ.ಆರ್.ಜಿ ವೈಭವ 2023’ ಪರಿಸರ ಸಂರಕ್ಷಣೆಯ ಹಸಿರು ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
     ನಾವು ಮೊದಲು ತಾಯಿ ಗರ್ಭದಿಂದ ಹುಟ್ಟಿ ನಂತರ ಪರಿಸರವನ್ನು ಕಾಣುತ್ತೇವೆ. ಇಂದು ಭೂಮಿ ಬರಡಾಗುತ್ತ ಬರುತ್ತಿದೆ. ಹಸಿರೀಕರಣದ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಕೈಬಿಡುವುದಲ್ಲ, ಅವುಗಳಿಗೆ ನೀರು ಹಾಕಿ ಬೆಳೆಸುವುದು ಮುಖ್ಯ. ಪರಿಸರ ಸಂರಕ್ಷಣೆಗಾಗಿ ಬದುಕನ್ನೇ ಸಮರ್ಪಿಸಿಕೊಂಡ ಸುಂದರಲಾಲ್ ಬಹುಗುಣ, ರಾಜೇಂದ್ರಸಿಂಗ್, ಸಾಲು ಮರದ ತಿಮ್ಮಕ್ಕ ಮುಂತಾದವರನ್ನು ನೆನಪು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಬಿ. ಬೋರಯ್ಯ ಮಾತನಾಡಿ, ಸಸ್ಯಗಳು ನಮಗೆ ಆಮ್ಲಜನಕವನ್ನು ನೀಡುತ್ತವೆ. ಅದನ್ನು ನಾವು ಪ್ರಾಣವಾಯು ಎಂದು ಕರೆಯುತ್ತೇವೆ. ಅದರಿಂದಲೇ ನಾವು ಉಸಿರಾಡುತ್ತೇವೆ. ಒಂದು ಗಿಡ ಮೂರು ವರ್ಷ ಬದುಕಿದ್ದರೆ ಒಂದು ವರ್ಷಕ್ಕೆ 24 ಲಕ್ಷ ರೂ. ಮೌಲ್ಯದ ಆಮ್ಲಜನಕವನ್ನು ಪರಿಸರಕ್ಕೆ ನೀಡುತ್ತದೆ. ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.
     ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ದೇವೇಂದ್ರ ಮಾತನಾಡಿ, ಪರಿಸರವನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
     ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬೊಮ್ಮಣ್ಣ, ಪ್ರೊ. ಲೋಕೇಶ ರೆಡ್ಡಿ, ಪ್ರೊ. ರಶ್ಮಿ, ಪ್ರೊ. ಆನಂದ, ಡಾ. ಚಮನ್‌ಸಾಬ್, ಅಧೀಕ್ಷಕ ಕರಿಬಸಪ್ಪ, ಕವಿತಾ ಪಾಟೀಲ, ಬೇಬಿ ಅಮೀನಾ, ಉಮಾ, ರವಿ ಇದ್ದರು.
     ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಅನಿತ ಕುಮಾರಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನಪ್ಪ ಪರಿಸರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ಎಚ್.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts