More

    ಸಿನಿಮಾಗಳ ಪ್ರದರ್ಶನಕ್ಕೆ ಮತ್ತೆ ‘ವಿರಾಮ’!

    ಡಿ.ಎಂ.ಮಹೇಶ್, ದಾವಣಗೆರೆ
    ಕೋವಿಡ್ ಮಧ್ಯಂತರದ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾಗಳ ಪ್ರದಶರ್ನಕ್ಕೆ ಕೇಂದ್ರ ಸರ್ಕಾರ ಹಸಿರುನಿಶಾನೆ ತೋರಿದೆ. ಆದರೆ ಜಿಲ್ಲೆಯ ಥಿಯೇಟರ್‌ಗಳು ಸದ್ಯಕ್ಕೆ ಪರದೆ ಸರಿಸುವುದು ಅನುಮಾನ.

    ಪುಷ್ಪಾಂಜಲಿ ಥಿಯೇಟರ್‌ನಲ್ಲಿ ಒಂದೇ ದಿನಕ್ಕೆ ಪ್ರದರ್ಶನ ಮೊಟಕಾಗಿದ್ದ ದಿ.ನಟ ಚಿರು ಸರ್ಜಾ ನಟನೆಯ ಕೊನೆಯ ಚಿತ್ರ ‘ಶಿವಾರ್ಜುನ’ ಮರು ಪ್ರದರ್ಶನವಾಗಲಿಕ್ಕಿದೆ. ಉಳಿದಂತೆ ಜಿಲ್ಲೆಯ 17 ಥಿಯೇಟರ್‌ಗಳು ದಸರೆ ಬಳಿಕ ಅಥವಾ ಡಿಸೆಂಬರ್ ವೇಳೆಗೆ ತೆರೆಯುವ ಇರಾದೆಯಲ್ಲಿವೆ.

    ಆರು ತಿಂಗಳು ಮುಚ್ಚಿದ್ದ ಥಿಯೇಟರ್‌ಗಳು ದೂಳು ಹಿಡಿದಿವೆ. ಪ್ರತಿ ಥಿಯೇಟರ್‌ನಲ್ಲಿ ಆಪರೇಟರ್, ಟಿಕೆಟ್ ನೀಡುವವರು ಮತ್ತು ಹರಿಯುವವರು, ವಾಚ್‌ಮನ್ ಸೇರಿ ಕನಿಷ್ಠ 10ರಿಂದ 15ಮಂದಿ ಕೆಲಸಗಾರರು ಸಂಬಳವೂ ಇಲ್ಲದೆ, ತುತ್ತಿಗೂ ಪೇಚಾಡಿದ್ದಿದೆ. ಕೆಲವರು ಬರಿಗೈಲಿ ಮನೆಗೆ ತೆರಳಿದ್ದಾರೆ.

    ಥಿಯೇಟರ್‌ವೊಂದಕ್ಕೆ ತಿಂಗಳಿಗೆ ಕನಿಷ್ಠ ಎಂದರೂ 50 ಸಾವಿರ ರೂ.ನಂತೆ ಆರು ತಿಂಗಳವಧಿಯ ವಿದ್ಯುತ್ ಬಿಲ್ ಕಟ್ಟಬೇಕಿದೆ. ಯುಎಫ್‌ಒ ಜತೆ ಮಾಡಿಕೊಂಡ ಒಪ್ಪಂದದಂತೆ ಪ್ರೊಜೆಕ್ಟರ್‌ಗಳ ಬಾಡಿಗೆ ಮಾಸಿಕ 35 ಸಾವಿರ ರೂ.ವರೆಗೆ ಭರಿಸಬೇಕಿದೆ. ಇದನ್ನು ಸದ್ಯದವರೆಗೆ ಕೈಬಿಡಬೇಕೆಂದು ಕೆಲವರು ಮುಂಬೈನ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ತೆರಿಗೆ ಭಾರ ಇದೆ.

    ಚಿತ್ರಮಂದಿರಗಳು 3 ವರ್ಷಕ್ಕೊಮ್ಮೆ ಲೈಸೆನ್ಸ್ ಪಡೆಯಬೇಕು. ಕೆಲವು ಅಂಥ ಅವಧಿಯಲ್ಲಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ದಿನಕ್ಕೊಮ್ಮೆ ಪ್ರೊಜೆಕ್ಟರ್ ಹಾಗೂ ಜನರೇಟರ್‌ಗಳನ್ನು ಚಾಲನೆಯಲ್ಲಿರಿಸಿದ್ದರೆ ತಾಂತ್ರಿಕವಾಗಿ ರನ್ ಮಾಡುವುದು ಸುಲಭ.

    ಮೊದಲಿನಂತೆ ಥಿಯೇಟರ್‌ಗಳನ್ನು ಬಾಡಿಗೆ ರೂಪದಲ್ಲಿ ನೀಡಬೇಕೆ? ಗಳಿಕೆ ಆಧರಿಸಿ ಪರ್ಸೆಂಟೇಜ್ ನೀಡಬೇಕೆ ಎಂಬ ವಿಚಾರ ಹಂಚಿಕೆದಾರರು ಮತ್ತು ಮಾಲೀಕರ ನಡುವೆ ಚರ್ಚಾವಸ್ತುವಾಗುಳಿದಿದೆ.

    ಕೈಲಿಲ್ಲ ಹೊಸ ಸಿನಿಮಾಗಳು:ಕೋವಿಡ್‌ನಿಂದಾಗಿ ಕೆಲವೇ ಸ್ಟಾರ್ ನಟರ ಮೂರ್ನಾಲ್ಕು ಚಿತ್ರ ಬಿಟ್ಟರೆ ಹೊಸ ಸಿನಿಮಾಗಳು ತಯಾರಾಗಿಲ್ಲ. ಗಳಿಕೆ ಕಡಿಮೆಯಾಗಬಹುದೆಂಬ ಲೆಕ್ಕಾಚಾರದಡಿ ಕೆಲವು ಚಿತ್ರ ನಿರ್ಮಾಪಕರು ಇನ್ನೆರಡು ತಿಂಗಳ ಹೊಸ ಸಿನಿಮಾಗಳ ಪ್ರದರ್ಶನ ಮಾಡದಿರಬಹುದು. ಹಳೆ ಸಿನಿಮಾ ಹಾಕಿದರೆ ಜನರು ಬರೋದಿಲ್ಲ. ಥಿಯೇಟರ್‌ಗಳ ನಿರ್ವಹಣೆಯೂ ಕಷ್ಟವಾಗಬಹುದೆಂಬುದು ಚಿತ್ರಮಂದಿರ ಮಾಲೀಕರ ಆತಂಕ.

    ಮಾರ್ಗಸೂಚಿ ಪಾಲನೆ ಕಷ್ಟ!: ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಶೇ.50ರ ಸೀಟು ಸಾಮರ್ಥ್ಯದೊಂದಿಗೆ ಪ್ರದರ್ಶನ ನಡೆಸಬೇಕು. ಒಂದು ಸೀಟು ಬಿಟ್ಟು ಮತ್ತೊಂದು ಸೀಟಿನಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಬೇಕು. ಖಾಲಿ ಬಿಟ್ಟ ಸೀಟುಗಳಲ್ಲಿ ಸ್ಟಿಕರ್ ಅಂಟಿಸಬೇಕು.ಥಿಯೇಟರ್‌ಗಳನ್ನು ಸ್ಯಾನಿಟೈಸ್ ಮಾಡಬೇಕು. ಪ್ರೇಕ್ಷಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡಬೇಕು. ಪ್ರೇಕ್ಷಕರು ಕೂತಾಗ ಮಾಸ್ಕ್ ಧರಿಸಲು ಸೂಚಿಸಬೇಕು. ಇದಕ್ಕೆಲ್ಲ ಹೆಚ್ಚು ಸಮಯ ನೀಡಬೇಕಾದ್ದರಿಂದ ಸ್ವಲ್ಪ ತ್ರಾಸು ಎನ್ನುತ್ತಾರೆ ಕೆಲ ಮಾಲೀಕರು.

    ಸರ್ಕಾರ ಅನುಮತಿ ನೀಡಿದ್ದರೂ ಥಿಯೇಟರ್ ನಡೆಸುವುದು ಸರಳವಲ್ಲ. ನವೆಂಬರ್ 1ರಿಂದ ಸಿನಿಮಾಗಳ ಪ್ರದರ್ಶನ ಆರಂಭಿಸುವ ಇರಾದೆ ಇದೆ. ಪ್ರೇಕ್ಷಕರ ಬರುವಿಕೆ ಕೂಡ ಅನುಮಾನದಲ್ಲಿದೆ.
    > ಕಂದನಕೋವಿ ವೀರಣ್ಣ, ತ್ರಿಶೂಲ್, ತ್ರಿನೇತ್ರ ಥಿಯೇಟರ್ ಮಾಲೀಕರು.

    ಥಿಯೇಟರ್‌ಗಳಿಗೆ ಭಾರೀ ಬಜೆಟ್‌ನ ಚಿತ್ರಗಳನ್ನು ನಿರ್ಮಾಪಕರು ಪ್ರದರ್ಶನ ಮಾಡಲು ಹಿಂದೇಟು ಹಾಕಬಹುದು. ಕೋವಿಡ್ ಅವಧಿಯ ವಿದ್ಯುತ್ (ಕನಿಷ್ಠ ಮಾರ್ಗ) ಬಿಲ್‌ಗೆ ವಿನಾಯ್ತಿ ನೀಡಿದರೆ ಚಿತ್ರಮಂದಿರಗಳು ಉಸಿರಾಡಬಹುದು.
    > ಎಚ್.ವಿ.ಮಹದೇವಗೌಡ್ರು, ಗೀತಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕರು.

    ಕೋಟ್ಯಂತರ ಆದಾಯ ತಂದುಕೊಡುವ ಚಿತ್ರೋದ್ಯಮದ ನಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ವಿದ್ಯುತ್ ಬಾಕಿ ಮನ್ನಾ, ಜಿಎಸ್‌ಟಿ ವಿನಾಯ್ತಿ ಅಥವಾ ಚಿತ್ರಮಂದಿರಗಳಿಗೆ ಪ್ರೋತ್ಸಾಹಧನ, ಉಚಿತ ಸ್ಯಾನಿಟೈಸರ್‌ಗಳ ವಿತರಣೆಯತ್ತ ಗಮನ ಹರಿಸಿದರೆ ಒಳಿತು.
    > ಕೆ.ಜಿ. ಚಂದ್ರಪ್ಪ, ಚಲನಚಿತ್ರ ಪ್ರತಿನಿಧಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts