More

    ಮಳೆ ಅವಾಂತರ ನಿಭಾಯಿಸಿ: ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚನೆ

    ದಾವಣಗೆರೆ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಪ್ರಕರಣ ವರದಿಯಾಗುತ್ತಿದ್ದು, ಕೂಡಲೇ ಅವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿದರು.

    ಶನಿವಾರ ಜಿಲ್ಲಾಧಿಕಾರಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿ, ಬಿದ್ದ ವಿದ್ಯುತ್ ಕಂಬಗಳಿಂದಾಗಿ ಹೆಚ್ಚಿನ ಅನಾಹುತ ಸಂಭವಿಸುತ್ತಿವೆ. ಇದಕ್ಕೆ ಆಸ್ಪದ ಕೊಡಬೇಡಿ ಎಂದು ಹೇಳಿದರು.

    ಆದ್ಯತೆ ಮೇರೆಗೆ ಕಂಬಗಳನ್ನು ಸ್ಥಳಾಂತರಿಸಿ ಅಥವಾ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ. ವಿದ್ಯುತ್ ಪರಿವರ್ತಕಗಳನ್ನು ತುರ್ತಾಗಿ ದುರಸ್ತಿ ಮಾಡಿಸಿ, ಜನರು ಗಲಾಟೆ ಮಾಡುವವರೆಗೆ ಕಾಯಬೇಡಿ ಎಂದರು.

    ಕಾಳಜಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ಅಲ್ಲಿ ಗುಣಮಟ್ಟದ ಆಹಾರ ನೀಡಿ, ಮೆನು ಪ್ರಕಾರವೇ ಆಹಾರ ಒದಗಿಸಬೇಕು. ಅಲ್ಲಿಗೆ ಬರದವರ ಮನೆಗೇ ರೇಷನ್ ನೀಡಿ. ಭೂಕುಸಿತ ಸಂಭವಿಸುವ ಕಡೆ ಸ್ಥಳೀಯರ ಮನವೊಲಿಸಿ ಸುರಕ್ಷಿತ ಜಾಗಗಳಿಗೆ ತಲುಪಿಸಿ ಎಂದು ಸಿಎಂ ನಿರ್ದೇಶನ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದೆ. ಜಿಲ್ಲಾಧಿಕಾರಿ ಜತೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದೇನೆ ಎಂದರು.

    7500 ಹೆಕ್ಟೇರ್ ಬೆಳೆ ಹಾನಿ: ದಾವಣಗೆರೆ ಜಿಲ್ಲೆಯಲ್ಲಿ 7500 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಅದರಲ್ಲಿ 4200 ಹೆಕ್ಟೇರ್ ಮೆಕ್ಕೆಜೋಳ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಸಿಎಂ ಗಮನ ಸೆಳೆದರು. ಆಗಸ್ಟ್‌ನಲ್ಲಿ 209 ಮನೆಗಳಿಗೆ ಹಾನಿಯಾಗಿದೆ. 449 ಮನೆಗಳಿಗೆ ನೀರು ನುಗ್ಗಿದ್ದು ಪರಿಹಾರ ನೀಡಲಾಗಿದೆ. ಹಾನಿಯಾದ ಮನೆಗಳ ಬಳಿ ಜಿಪಿಎಸ್ ಸರ್ವೇ ನಡೆಸಿ ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಬಹುತೇಕ ಕಡೆ ರಸ್ತೆ ಮತ್ತು ಸೇತುವೆ ಹಾಳಾಗಿವೆ. ಅಂತಹ ಕಡೆ ಬ್ಯಾರಿಕೇಡ್ ಅಳವಡಿಸಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

    ಜಿಪಂ ಸಿಇಒ ಡಾ.ಎ.ಚನ್ನಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್., ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಡಿಎಚ್‌ಒ ಡಾ.ನಾಗರಾಜ್, ಡಿಡಿಪಿಐ ತಿಪ್ಪೇಶಪ್ಪ ಇತರೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts