More

    ಚೆನ್ನೈನ ಪೂಜಾರಿಯ ಕೊಲೆ ಮಾಡಿದ ಅಪರಾಧಿಗಳಿಗೆ ಸಜೆ

    ದಾವಣಗೆರೆ: ಚೆನ್ನೈನ ದೇವಸ್ಥಾನದ ಪೂಜಾರಿಯ ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಸತೀಶ್ ಕುಮಾರ್, ಮಂಜುನಾಥ್ ಮತ್ತು ನೂರುಲ್ಲಾ ಶಿಕ್ಷೆಗೆ ಗುರಿಯಾದವರು.

    ಚೆನ್ನೈನಲ್ಲಿ ಶಿವ ದೇವಸ್ಥಾನವೊಂದರ ಪೂಜಾರಿಯಾಗಿದ್ದ ಅಶೋಕನ್ ಎಂಬುವರನ್ನು 2017 ರ ಸೆಪ್ಟೆಂಬರ್‌ನಲ್ಲಿ, ಸಮೀಪದ ನಾಗನೂರು ಕಾಲುವೆಯ ಬಳಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು.

    ಈ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಗ್ರಾಮಾಂತರ ಸಿಪಿಐ ಆಗಿದ್ದ ಎಚ್. ಗುರುಬಸವರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಪೂಜಾರಿಯು ಇಲ್ಲಿನ ಒಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಆಗಾಗ ಭೇಟಿಯಾಗಲು ಬರುತ್ತಿದ್ದ. ಆಕೆಯ ಮಗ ಸತೀಶ್ ಕುಮಾರ್ ಇದನ್ನು ವಿರೋಧಿಸಿದ್ದ. ಕೊಲೆಗೆ ಇದೇ ಕಾರಣವಾಗಿತ್ತು.

    ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ನಾಗಶ್ರೀ ಅವರು ಬುಧವಾರ ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕ ಕೆ. ನಾಗರಾಜ ಆಚಾರ್ ವಾದ ಮಂಡಿಸಿದ್ದರು.
    ತನಿಖೆಗೆ ನೆರವಾದ ಎಟಿಎಂ ಸಿಸಿ ಟಿವಿ ದೃಶ್ಯಾವಳಿ: ಅಪರಾಧಿಗಳು ಕೊಲೆ ಮಾಡುವ ಮುನ್ನ ಅಶೋಕನ್ ಅವರ ಖಾತೆಯಿಂದಲೇ 1 ಸಾವಿರ ರೂ. ಹಣ ಪಡೆದಿದ್ದರು. ಅಶೋಕನ್ ಜತೆಗೆ ಇಲ್ಲಿನ ಎಟಿಎಂಗೆ ಹೋಗಿ ಆ ಹಣವನ್ನು ಬಿಡಿಸಿಕೊಂಡಿದ್ದರು. ಈ ದೃಶ್ಯವು ಎಟಿಎಂನ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಅದು ತನಿಖೆಗೆ ನೆರವಾಯಿತು.

    ನಂತರ ಅದೇ ಹಣದಲ್ಲಿ ಮದ್ಯ ಸೇವನೆ ಮಾಡಿ, ಪೂಜಾರಿಗೂ ಕುಡಿಸಿ, ನೂರುಲ್ಲಾ ಅವರ ಆಟೋದಲ್ಲಿ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಗುರುತು ಸಿಗದ ಶವದಲ್ಲಿ ಪರ್ಸ್ ಸಿಕ್ಕಿತ್ತು. ಅದರಲ್ಲಿ ಆ ಮಹಿಳೆಯ ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಇತ್ತು. ಅದರ ಆಧಾರದ ಮೇಲೆ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts