More

    ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆಗೆ ಒತ್ತಾಯ

    ದಾವಣಗೆರೆ : ಅಹಿಂದ ಚೇತನದಿಂದ ನಗರದ ರೋಟರಿ ಬಾಲಭವನದಲ್ಲಿ ನ.19 ರಂದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆಗೆ ಒತ್ತಾಯಿಸಿ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾ ಕಾರ್ಯದರ್ಶಿ ದೀಟೂರು ಚಂದ್ರು ಹೇಳಿದರು.
     ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಹಿಂದ ವರ್ಗದ ಸಮಾಜಗಳ ಮುಖಂಡರು ಭಾಗವಹಿಸಲಿದ್ದು, ಜಾತಿ ಗಣತಿ ಸಮೀಕ್ಷೆ ಬಗ್ಗೆ ಚರ್ಚೆ ಹಾಗೂ ಸಂವಾದ ನಡೆಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಜಾತಿ ಗಣತಿ ಸಮೀಕ್ಷೆ ವರದಿ ಅಂಗೀಕರಿಸಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕೆಂದು ಒಮ್ಮತದ ನಿರ್ಣಯ ಕೈಗೊಂಡು ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
     ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.80ರಷ್ಟಿರುವ ಅಹಿಂದ ವರ್ಗಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ನ್ಯಾಯ ಸಿಗದೆ ಅವಕಾಶಗಳಿಂದ ವಂಚಿತವಾಗಿವೆ. ಎಲ್ಲ ಸಮುದಾಯಗಳ ಸ್ಥಿತಿಗತಿ ತಿಳಿಯಲು 2013 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ನಡೆಸಲಾಗಿದ್ದರೂ ಈವರೆಗೂ ವರದಿ ಅಂಗೀಕರಿಸಿ ಬಿಡುಗಡೆಗೊಳಿಸಿಲ್ಲ ಎಂದು ದೂರಿದರು.
     ಮಡಿವಾಳ ಸಮಾಜದ ಮುಖಂಡ ಎಚ್.ಜಿ. ಉಮೇಶ್ ಮಾತನಾಡಿ, ಸರ್ಕಾರ ಕೂಡಲೇ ಜಾತಿಗಣತಿ ವರದಿ ಬಿಡುಗಡೆ ಮಾಡಿ ಜಾತಿವಾರು ಸಮೀಕ್ಷೆಗೆ ಪೂರಕವಾಗಿ ಎಲ್ಲ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲೂ ಅಹಿಂದ ವರ್ಗದ ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
     ಸರ್ಕಾರ ಅಹಿಂದ ವರ್ಗದ ಹಕ್ಕೊತ್ತಾಯಕ್ಕೆ ಮಣಿಯದಿದ್ದರೆ ರಾಜ್ಯಾದ್ಯಂತ ಜನರನ್ನು ಜಾಗೃತಿಗೊಳಿಸುವ ಮೂಲಕ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದು ಎಚ್ಚರಿಸಿದರು.
     ಅಹಿಂದ ಮುಖಂಡರಾದ ದಾಸರ ತಿಪ್ಪಣ್ಣ, ಸಿ. ವೀರಣ್ಣ, ಮಂಜನಾಯ್ಕ, ರಾಜುಮೌರ್ಯ, ಜಿ. ಷಣ್ಮುಖಪ್ಪ, ಪರಮೇಶ್ವರ್, ಡೈಮಂಡ್ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts