More

    ಹೊಸ ಬಜೆಟ್‌ನಲ್ಲಿ ಹಳೆಯ ಬೇಡಿಕೆಗಳಿಗೆ ಸಿಗುವುದೆ ಮುಕ್ತಿ?

    ರಮೇಶ ಜಹಗೀರದಾರ್ ದಾವಣಗೆರೆ
     ಸರ್ಕಾರ ಬದಲಾಗಿದೆ, ಶುಕ್ರವಾರ ಮತ್ತೊಂದು ಬಜೆಟ್ ಮಂಡನೆಯಾಗಲಿದೆ. ಆದರೆ ಜಿಲ್ಲೆಯ ಜನರ ನಿರೀಕ್ಷೆಗಳು ಮಾತ್ರ ಬದಲಾಗಿಲ್ಲ. ದೊಡ್ಡ ಯೋಜನೆಗಳ ಕೊಡುಗೆ ಸಿಗಬಹುದು ಎಂದು ಪ್ರತಿ ಬಾರಿ ಅಂದುಕೊಂಡರೂ, ಮತ್ತದೇ ನಿರಾಸೆಯ ಅನುಭವ ಆಗುತ್ತಲೇ ಬಂದಿದೆ. ಈ ಮುಂಗಡ ಪತ್ರದಲ್ಲಾದರೂ ಮಧ್ಯ ಕರ್ನಾಟಕದ ಮಂದಿಗೆ ಒಂದಿಷ್ಟು ಖುಷಿಯಾಗುವ ವಿಚಾರಗಳು ಇರಬಹುದೆ ಎಂದು ಕಾದು ನೋಡಬೇಕಿದೆ.
     ದಾವಣಗೆರೆ ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರ. ವಿವಿಧ ರಾಜ್ಯ, ದೇಶಗಳಿಂದ ಜನರು ಬಂದು ಹೋಗುತ್ತಾರೆ. ಇಂಥ ಊರಿಗೆ ವಿಮಾನ ನಿಲ್ದಾಣ ಬೇಕು ಎನ್ನುವ ಬೇಡಿಕೆ ಹಳೆಯದು. ಅದಕ್ಕಾಗಿ ಒಂದೆರಡು ಜಾಗಗಳನ್ನೂ ಗುರುತಿಸಿ, ಕಾರ್ಯಸಾಧ್ಯತಾ ವರದಿಯನ್ನೂ ಪಡೆಯಲಾಗಿದೆ. ಆದರೆ ಅದೇಕೋ ಆ ಯೋಜನೆ ಟೇಕಾಫ್ ಆಗಿಲ್ಲ. ಕೇಂದ್ರದ ಯೋಜನೆಯಾದರೂ ರಾಜ್ಯ ಸರ್ಕಾರ ಭೂಮಿ ಒದಗಿಸಬೇಕಾಗುತ್ತದೆ.
     ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕಿದೆ. ಈ ಮಾರ್ಗ ಪೂರ್ಣಗೊಂಡರೆ ಬೆಂಗಳೂರು-ದಾವಣಗೆರೆ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
     ಜಿಲ್ಲೆಗೆ ದೊಡ್ಡ ಕೈಗಾರಿಕೆಗಳು ಬರಬೇಕು ಎನ್ನುವುದು ಮತ್ತೊಂದು ಹಳೆಯ ಬೇಡಿಕೆ. ಅದರಲ್ಲೂ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು ಇಲ್ಲಿಗೆ ಬಂದರೆ ಸ್ಥಳೀಯ ಯುವಜನರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ಆರ್ಥಿಕತೆಗೂ ಲಾಭವಾಗುತ್ತದೆ.
     ದಾವಣಗೆರೆಯ ಮಾರುಕಟ್ಟೆ ಪ್ರದೇಶಕ್ಕೆ ಪ್ರತಿ ದಿನ ನೂರಾರು ಲಾರಿಗಳು ಬರುತ್ತವೆ. ಸರಕುಗಳ ಲೋಡಿಂಗ್, ಅನ್ ಲೋಡಿಂಗ್ ನಡೆಯುತ್ತದೆ. ಆ ಟ್ರಕ್‌ಗಳು ನಿಲ್ಲಲು ನಿರ್ದಿಷ್ಟ ಜಾಗವನ್ನು ಗುರುತಿಸಿಲ್ಲ. ಟ್ರಕ್ ಟರ್ಮಿನಲ್ ನಿರ್ಮಾಣವಾದರೆ ಶಾಶ್ವತ ವ್ಯವಸ್ಥೆಯಾಗುತ್ತದೆ, ಸಂಚಾರ ಸಮಸ್ಯೆಯೂ ಕಡಿಮೆಯಾಗಲಿದೆ.
     ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆ ಜಾರಿಯ ಕುರಿತು ಬಜೆಟ್‌ನಲ್ಲಿ ಏನಾದರೂ ಪ್ರಸ್ತಾಪವಾಗುವುದೆ ಎಂಬುದು ಆ ಭಾಗದ ರೈತರ ನಿರೀಕ್ಷೆಯಾಗಿದೆ. ಯೋಜನೆ ಜಾರಿಯಾದರೆ ಕೊನೆಯ ಭಾಗದ ಜಮೀನುಗಳಿಗೆ ನೀರುಣಿಸಬಹುದಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಮಂದ ಗತಿಯಲ್ಲಿ ಸಾಗಿದ್ದು ಅದನ್ನು ಚುರುಕುಗೊಳಿಸಬೇಕಿದೆ.
     ದಾವಣಗೆರೆಯಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಇದುವರೆಗೆ ಈಡೇರಿಲ್ಲ. ವ್ಯವಸಾಯ ಪ್ರಧಾನವಾದ ಈ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಕಾಲೇಜು ಇಲ್ಲ. ಈ ಬಗ್ಗೆ ಬಜೆಟ್‌ನಲ್ಲಿ ಉತ್ತರ ದೊರಕುವುದೆ? ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ವಿಚಾರ ಮತ್ತೆ ಮುನ್ನೆಲೆಗೆ ಬರುವುದೆ ಎಂದು ನೋಡಬೇಕಿದೆ.
     …
     (ಕೋಟ್)
     ಆಹಾರ ಉದ್ಯಮಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು ಅದಕ್ಕೆ ಉತ್ತೇಜನ ನೀಡಬೇಕಿದೆ. ಇಲ್ಲಿ ಸಿರಿಧಾನ್ಯ, ಸಾವಯವ ಕೃಷಿ ಮಾಡುವ ರೈತರಿದ್ದಾರೆ. ಮೈಸೂರಿನಲ್ಲಿರುವಂತೆ ಸಿಎಫ್‌ಟಿಆರ್‌ಐ ಸಂಸ್ಥೆಯ ಘಟಕವನ್ನು ದಾವಣಗೆರೆಯಲ್ಲಿ ಮಾಡುವ ಅಗತ್ಯವಿದೆ. ಇದರಿಂದ ಸಂಶೋಧನೆಯ ಜ್ಞಾನ ಮತ್ತು ತರಬೇತಿ ಸ್ಥಳೀಯರಿಗೆ ದೊರೆಯಲಿದೆ. ಜಿಲ್ಲೆಯಲ್ಲಿ ಕಬ್ಬು ಮತ್ತು ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವುದರಿಂದ ಎಥೆನಾಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅವಕಾಶಗಳಿವೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಬೇಕು.
      ತೇಜಸ್ವಿ ಪಟೇಲ್, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts