More

    ಆಧ್ಯಾತ್ಮಿಕ, ನೈತಿಕ ನೆಲೆಗಟ್ಟಿನ ಶಿಕ್ಷಣ ಇಂದಿನ ಅಗತ್ಯ

    ದಾವಣಗೆರೆ : ಆಧ್ಯಾತ್ಮಿಕ, ನೈತಿಕ ನೆಲೆಗಟ್ಟಿನ ಶಿಕ್ಷಣವನ್ನು ಶೈಕ್ಷಣಿಕ ಕೇಂದ್ರಗಳಲ್ಲೇ ನೀಡುವ ದಿನಗಳು ಬರಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಹೇಳಿದರು.
     ಇಲ್ಲಿನ ವಿದ್ಯಾನಗರದಲ್ಲಿ ಶುಕ್ರವಾರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಸಂಕಲ್ಪ ಭವನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
     ದೇಶದಲ್ಲಿ ಸನಾತನ ಗುರುಕುಲಗಳಿದ್ದವು. ಅಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತಿದ್ದರು. ಭಾರತದ ಸನಾತನ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯ, ಆಧ್ಯಾತ್ಮಿಕ ಮೌಲ್ಯಗಳಿದ್ದವು. ಈಗಿನ ಶಿಕ್ಷಣದಲ್ಲಿ ಕೆಲವು ದೋಷಗಳಿವೆ ಎಂದು ತಿಳಿಸಿದರು.
     ಮಾನವೀಯ, ನೈತಿಕ ಮೌಲ್ಯಗಳು ಹಾಳಾಗುತ್ತಿವೆ. ಹಳ್ಳಿ ಹಳ್ಳಿಗೂ ಮದ್ಯದ ಅಂಗಡಿಗಳಿವೆ. ಸರ್ಕಾರವೇ ಕುಡುಕರನ್ನು ಹುಟ್ಟುಹಾಕುತ್ತಿದೆ. ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಹೇಳಿವೆ. ಅವುಗಳನ್ನು ಅರ್ಥೈಸಿಕೊಳ್ಳುವಲ್ಲಿ ಎಡುವುತ್ತಿದ್ದೇವೆ ಎಂದರು.
     ಆಸ್ಪತ್ರೆಗಳು ಇಲ್ಲದಿದ್ದರೂ ಹಿಂದಿನವರು ನೂರಾರು ವರ್ಷ ಬದುಕುತ್ತಿದ್ದರು. ಈಗಿನ ಪೀಳಿಗೆಯಲ್ಲಿ ಚಿಕ್ಕ ವಯಸ್ಸಿಗೆ ನೂರಾರು ಕಾಯಿಲೆಗಳು ಬರುತ್ತಿವೆ. ವಿಷ (ರಾಸಾಯನಿಕ) ಬಳಸಿ ಆಹಾರ ಬೆಳೆಯುತ್ತಿದ್ದೇವೆ. ಈ ಪದ್ಧತಿ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.
     ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ನಾವಿಂದು ಭೌತಿಕ ಜೀವನದತ್ತ ಮುಖ ಮಾಡಿದ್ದೇವೆ. ಇದರಿಂದ ಜೀವನ ಯಾಂತ್ರೀಕರಣವಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಅದರಿಂದ ಹೊರ ಬರಲು ಯೋಗ, ಅಧ್ಯಾತ್ಮ ಹಾಗೂ ಧ್ಯಾನ ಅಗತ್ಯ ಎಂದರು.
     ಅಧ್ಯಾತ್ಮ ಹೆಚ್ಚಾದಷ್ಟೂ ಧನಾತ್ಮಕ ಚಿಂತನೆಗಳು ಬೆಳೆಯುತ್ತವೆ. ಇದರಿಂದ ಸಮಾಜದ ಉನ್ನತಿಯಾಗುತ್ತದೆ. ಇಂತಹ ಪ್ರಗತಿಗಾಗಿ ಆಧ್ಯಾತ್ಮಿಕ ಕೇಂದ್ರಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
     ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ನಾವೆಲ್ಲ ಹಿರಿಯರನ್ನು ನೋಡಿ ಕಲಿತಿದ್ದೇವೆ. ಆದರೆ ಇಂದಿನ ಯುವ ಜನಾಂಗದ ಸ್ಥಿತಿ ಹಾಗಿಲ್ಲ. ಧಾರ್ಮಿಕ ಪರಂಪರೆ, ಸಂಸ್ಕಾರಗಳ ಕೊರತೆ ಅವರಲ್ಲಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅಗತ್ಯವಿದೆ. ಈಶ್ವರೀಯ ವಿವಿ ಅದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
     ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ, ಅದು ಒಳ್ಳೆಯದೇ. ಆದರೆ ವಿದ್ಯೆಯ ಜತೆಗೆ ಸಂಸ್ಕಾರವನ್ನೂ ಕಲಿಸಿದರೆ ಮನೆತನ ಹಾಗೂ ದೇಶ ಉಳಿಯುತ್ತದೆ. ಮಕ್ಕಳಿಗೆ ಮೊಬೈಲ್ ಗೀಳು ತಪ್ಪಿಸಿ ಯೋಗ, ಧ್ಯಾನದ ಆಸಕ್ತಿಯನ್ನು ಬೆಳೆಸಬೇಕು ಎಂದು ತಿಳಿಸಿದರು.
     ಈಶ್ವರೀಯ ವಿಶ್ವವಿದ್ಯಾಲಯವು 140 ದೇಶಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕಿದೆ. ಒತ್ತಡಮುಕ್ತ ಸಮಾಜ ನಿರ್ಮಾಣದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ ಎಂದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಷಣ್ಮುಖಪ್ಪ ಮಾತನಾಡಿ, ಒತ್ತಡ ಎಲ್ಲರಿಗೂ ಇದೆ. ಅದಕ್ಕೆ ವೈದ್ಯಕೀಯ ಚಿಕಿತ್ಸೆಯೊಂದೇ ಪರಿಹಾರವಲ್ಲ. ಧ್ಯಾನ, ರಾಜಯೋಗ ಹಾಗೂ ಆಧ್ಯಾತ್ಮಿಕ ತರಗತಿಗಳ ಮೂಲಕ ಔಷಧ ರಹಿತ ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಿದರು.
     ಶಿವಸಂಕಲ್ಪ ಭವನದ ಭೂದಾನಿ ಶಾಬನೂರು ಲಕ್ಕಮ್ಮ ದ್ಯಾಮಪ್ಪನವರು, ಪಾಲಿಕೆ ಸದಸ್ಯೆ ವೀಣಾ, ಆಯುಕ್ತೆ ರೇಣುಕಾ, ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ, ದಾವಣಗೆರೆ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಲೀಲಾಜಿ, ವಿದ್ಯಾನಗರ ಶಾಖೆಯ ಸಂಚಾಲಕಿ ಗೀತಾ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಉದ್ಯಮಿ ಮೋಹನ್ ಕುಮಾರ್, ಇಂಜಿನಿಯರ್ ಇಂದ್ರಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ ಇದ್ದರು. ಮಂಜುಳಾ ಸ್ವಾಗತಿಸಿದರು. ನಮ್ರತಾ ಪ್ರಾರ್ಥಿಸಿದರು, ಭೂಮಿಕಾ ಸ್ವಾಗತ ನೃತ್ಯ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts