More

    ಹೋರಾಟದ ಜತೆಗೆ ಸಂಘಟನೆಗೆ ಬಲ

    ದಾವಣಗೆರೆ : ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಜತೆಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು, ನಗರದಲ್ಲಿ ಗುರುವಾರ ನಡೆದ ಬಿಜೆಪಿಯ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸಂಕಲ್ಪ ಮಾಡಲಾಯಿತು.
     ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ವಿಧಾನಸಭಾ ಚುನಾವಣೆಯಲ್ಲಾದ ಸೋಲಿನಿಂದ ಧೃತಿಗೆಡದೆ ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
     ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನವರು ಮನೆ ಮನೆಗೆ ಹೋಗಿ 5 ಗ್ಯಾರಂಟಿ ಯೋಜನೆಗಳ ಪತ್ರವನ್ನು ನೀಡಿದರು. ಅದನ್ನು ನಂಬಿ ಅನೇಕ ಜನ ಬಿಜೆಪಿಯ ಕಾರ್ಯಕರ್ತರೂ ಸಹ ಕಾಂಗ್ರೆಸ್‌ಗೆ ಮತ ಹಾಕಿದರು. ಆದರೆ ಅವರು ಕೊಟ್ಟಿದ್ದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
     ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸುವುದನ್ನು ನಿಲ್ಲಿಸಲಿ. ಕಾಂಗ್ರೆಸ್‌ನ ಸಚಿವರು ಜೋಕರ್‌ಗಳಂತೆ ವರ್ತಿಸುವುದು ಬಿಡಲಿ ಎಂದು ಹೇಳಿದರು.
     ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರಿಂದ ಸೋಲಾಗಲಿಲ್ಲ, ಅದಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಆಡಳಿತದ ಗಂಧಗಾಳಿ ಗೊತ್ತಿಲ್ಲದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ತಂತ್ರಗಾರಿಕೆ, ಮೋಸವನ್ನು ನಾವು ಹಗುರವಾಗಿ ತೆಗೆದುಕೊಂಡು ತಪ್ಪು ಮಾಡಿದೆವು ಎಂದು ಹೇಳಿದರು.
     ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಇನ್ನು 3 ತಿಂಗಳಲ್ಲಿ ಜನರು ಬಡಿಗೆ ಹಿಡಿದು ಬೆನ್ನು ಹತ್ತುತ್ತಾರೆ, ಇವರು ರಸ್ತೆಯಲ್ಲಿ ತಿರುಗಾಡುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.
     ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ವರೆಗೂ ಹೋರಾಟ ಮಾಡಬೇಕು. ಕಾರ್ಯಕರ್ತರು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಜಿ.ಪಂ, ತಾ.ಪಂ. ಚುನಾವಣೆಗಳನ್ನು ಗೆಲ್ಲುವ ಕಡೆ ಗಮನ ಇರಲಿ ಎಂದು ಕರೆ ನೀಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 26 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts