More

    ಹೊಸ ವರ್ಷಕ್ಕೆ ಜಿಲ್ಲಾ ಬಿಜೆಪಿಗೆ ನೂತನ ಸಾರಥಿ

    ರಮೇಶ ಜಹಗೀರದಾರ್ ದಾವಣಗೆರೆ
     ಎಲ್ಲವೂ ಅಂದುಕೊಂಡಂತೆ ಆದರೆ ಹೊಸ ವರ್ಷದಲ್ಲಿ ಜಿಲ್ಲಾ ಬಿಜೆಪಿಗೆ ನೂತನ ಸಾರಥಿ ಬರಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದ ನಂತರ ಕಮಲ ಪಡೆಯ ಸಂಘಟನೆ ಕಾರ್ಯ ಚುರುಕುಗೊಂಡಿದೆ. ರಾಜ್ಯ ಸಮಿತಿಯ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು ಹೈಕಮಾಂಡ್ ಒಪ್ಪಿಗೆ ಸಿಗುವುದಷ್ಟೇ ಬಾಕಿಯಿದೆ. ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಕ್ಷದೊಳಗೆ ಪೈಪೋಟಿ ಶುರುವಾಗಿದೆ.
     ವೀರೇಶ ಹನಗವಾಡಿ ಅವರ ಅಧಿಕಾರ ಅವಧಿ ಮುಗಿದು 1 ವರ್ಷ ಮೇಲಾಗಿದೆ. ವಿಧಾನಸಭೆ ಚುನಾವಣೆ ಇನ್ನಿತರ ಕಾರಣಗಳಿಂದ ನೂತನ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಶೀಘ್ರವೇ ಆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
     ಕೇಸರಿ ಟೀಮ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ರಾಜನಹಳ್ಳಿ ಶಿವಕುಮಾರ್ ಮತ್ತು ಕೆ.ಎಂ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ಎಚ್.ಎನ್. ಶಿವಕುಮಾರ್ ಇನ್ನಿತರರ ಹೆಸರುಗಳು ಕೇಳಿಬಂದಿವೆ.
     ಜಿಲ್ಲಾಧ್ಯಕ್ಷರ ಆಯ್ಕೆಗೆ ಸಮುದಾಯ, ಪಕ್ಷದಲ್ಲಿ ಹಿರಿತನ, ಸಲ್ಲಿಸಿದ ಸೇವೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇನ್ನಿತರ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಎಲ್ಲವನ್ನೂ ಅಳೆದು, ತೂಗಿ ನಿರ್ಣಯ ಕೈಗೊಳ್ಳಲಾಗುತ್ತದೆ ಎನ್ನುತ್ತವೆ ಪಕ್ಷದ ಮೂಲಗಳು.
     ಪ್ರತಿಯೊಬ್ಬ ಆಕಾಂಕ್ಷಿಯೂ ತಮ್ಮ ಪ್ಲಸ್ ಪಾಯಿಂಟ್‌ಗಳನ್ನು ಮುಂದಿಟ್ಟುಕೊಂಡು ನಾಯಕರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ಸಂಸದ, ಹಾಲಿ ಮತ್ತು ಮಾಜಿ ಶಾಸಕರನ್ನು, ಸಂಘ ಪರಿವಾರದ ಪ್ರಮುಖರನ್ನು ಕಾಣುತ್ತಿದ್ದಾರೆ.
     ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಸಂಘಟನೆಯಲ್ಲಿ ನಿರ್ವಹಿಸಿದ ಜವಾಬ್ದಾರಿ, ಮಾಡಿರುವ ಕೆಲಸಗಳು, ಜಿಲ್ಲಾದ್ಯಂತ ಹೊಂದಿರುವ ಸಂಪರ್ಕ ಇವೆಲ್ಲ ಅಂಶಗಳೂ ಮುಖ್ಯವಾಗುತ್ತವೆ. ಜತೆಗೆ ವೈಯಕ್ತಿಕ ಸಾಮರ್ಥ್ಯ, ಪರಿಶ್ರಮ, ಎಷ್ಟು ಸಮಯವನ್ನು ನೀಡಬಲ್ಲರು, ಪಕ್ಷಕ್ಕೆ ಆಗುವ ಲಾಭ ಎಲ್ಲವನ್ನೂ ಯೋಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ.
     ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ನಂತರ ಹಲವು ತಂಡಗಳನ್ನು ಮಾಡಿ ಜಿಲ್ಲೆಗಳಿಗೆ ಕಳಿಸುತ್ತಾರೆ. ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕೋರ್ ಕಮಿಟಿ ಜತೆಗೆ ಚರ್ಚಿಸಿ ಕೆಲವು ಹೆಸರುಗಳನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡುತ್ತಾರೆ. ಬಹುತೇಕ ಜನವರಿ ತಿಂಗಳಲ್ಲಿ ಹೊಸ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
     ಇನ್ನೇನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ಸಾಲು ಸಾಲು ಚುನಾವಣೆಗಳು ಬರಲಿವೆ. ಜಿಲ್ಲಾದ್ಯಂತ ಪ್ರವಾಸ ಮಾಡಿ, ಸಂಘಟನೆಗೆ ಶಕ್ತಿ ತುಂಬುವ ಮಹತ್ವದ ಜವಾಬ್ದಾರಿ ನೂತನ ಸಾರಥಿಯ ಮೇಲಿರುತ್ತದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದೂ ಅಷ್ಟೇ ಮುಖ್ಯವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts