More

    ಜನ ಹೋರಾಟಗಳಿಂದ ಸಮಸ್ಯೆಗಳ ಪರಿಹಾರ

    ದಾವಣಗೆರೆ : ಬಲಿಷ್ಠ ಜನ ಹೋರಾಟಗಳ ಮೂಲಕ ಕ್ರಾಂತಿಯನ್ನು ಸಂಘಟಿಸಿ ಸಮಾಜವಾದ ಸ್ಥಾಪಿಸಿದರೆ ಮಾತ್ರ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿ ಸದಸ್ಯ ಟಿ.ಎಸ್. ಸುನೀತ್ ಕುಮಾರ್ ಹೇಳಿದರು.
     ನಗರದ ವನಿತಾ ಸಮಾಜ ಸಭಾಂಗಣದಲ್ಲಿ ಶನಿವಾರ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ, ಕಾರ್ಮಿಕ ವರ್ಗದ ನಾಯಕ ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಚುನಾವಣೆಗಳ ಮೂಲಕ ಕೇವಲ ಪಕ್ಷಗಳನ್ನು ಬದಲಾಯಿಸುವುದರಿಂದ ಜನರ ಜೀವನದಲ್ಲಿ ಬದಲಾವಣೆ ಸಾಧ್ಯವಿಲ್ಲ. ಮಾರ್ಕ್ಸ್ ವಾದ ಹಾಗೂ ಶಿವದಾಸ್ ಘೋಷ್ ಅವರ ಚಿಂತನೆಯ ಆಧಾರದಲ್ಲಿ ಜನತೆಯ ಸಂಘಟಿತ ಶಕ್ತಿಯನ್ನು ರೂಪಿಸಬೇಕು. ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ ಸಕ್ರಿಯರಾಗುವುದೇ ಅವರಿಗೆ ನೀಡುವ ಗೌರವವಾಗಿದೆ ಎಂದು ತಿಳಿಸಿದರು.
     ದುಡಿಯುವ ಜನರ ವಿಮುಕ್ತಿಯ ಹೋರಾಟಕ್ಕೆ ತಮ್ಮ ಜೀವನವನ್ನೇ ಅರ್ಪಿಸಿದ ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ದೇಶದೆಲ್ಲೆಡೆ ಅವರ ಜೀವನ ಮತ್ತು ಸಂಘರ್ಷವನ್ನು ಅರಿಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ನಾವು ಕಾರ್ಮಿಕ ವರ್ಗದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಶಿವದಾಸ್ ಘೋಷ್ ಅವರ ಜೀವನ ಪ್ರೇರಣೆಯಾಗಿದೆ ಎಂದು ಹೇಳಿದರು.
     ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, ಮಣಿಪುರದಲ್ಲಿ ಎರಡು ತಿಂಗಳಿನಿಂದ ಜನರ ಜೀವನವು ನರಕ ಸದೃಶವಾಗಿದೆ. ಸಮುದಾಯಗಳ ನಡುವಿನ ಕಲಹವನ್ನು ತಡೆಗಟ್ಟದೆ ಆಳುವ ಸರ್ಕಾರ ಇದಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಜನರನ್ನು ಜಾತಿ, ಪಂಗಡಗಳಲ್ಲಿ ಒಡೆಯುವ ಬಂಡವಾಳಶಾಹಿ ಸರ್ಕಾರಗಳ ವಿರುದ್ಧ ಜನರು ಸಂಘಟಿತ ಹೋರಾಟ ನಡೆಸಬೇಕು. ದುಡಿಯುವ ಜನರೆಲ್ಲ ಒಂದಾಗಿ ದೇಶದ ಸಂಪತ್ತನ್ನು ರಕ್ಷಿಸಿ ರಾಷ್ಟ್ರದ ವಿಮೋಚನೆ ಗೊಳಿಸಬೇಕೆಂಬುದೇ ಶಿವದಾಸ್ ಘೋಷ್ ನಮಗೆ ನೀಡಿದ ಪಾಠವಾಗಿದೆ ಎಂದು ಹೇಳಿದರು.
     ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಗುಂಪು ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ ಸಭೆಯ ಆರಂಭದಲ್ಲಿ ಗೊತ್ತುವಳಿಯನ್ನು ಪಕ್ಷದ ಜಿಲ್ಲಾ ಸಂಘಟನಾ ಸಮಿತಿಯಿಂದ ಮಂಡಿಸಲಾಯಿತು.
     ಆ. 5 ರಂದು ಕೋಲ್ಕತ್ತದಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುವ ಜಿಲ್ಲೆಯ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು ಭಾಗವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಟಿ.ವಿ. ಸುಬ್ಬರಾಜು, ಮಂಜುನಾಥ್ ಕುಕ್ಕವಾಡ, ಪಕ್ಷದ ಸದಸ್ಯರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts