More

    ಕಾಂಗ್ರೆಸ್ಸಿನಿಂದ ಸುಳ್ಳಿನ ರಾಜಕಾರಣ

    ದಾವಣಗೆರೆ: ಕಾಂಗ್ರೆಸ್ ಅನುಷ್ಠಾನಗೊಳಿಸಲಾಗದ ಗ್ಯಾರಂಟಿಗಳನ್ನು ಹೇಳುತ್ತ ಸುಳ್ಳಿನ ರಾಜಕಾರಣ ಮಾಡುತ್ತಿದ್ದು, ಜನರು ನಂಬಬಾರದು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಛತ್ತೀಸ್‌ಗಢದಲ್ಲಿ ಯುವಕರಿಗೆ 2500 ರೂ. ನಿರುದ್ಯೋಗಿ ಭತ್ಯೆ ನೀಡುವ ರಾಹುಲ್‌ಗಾಂಧಿ ಭರವಸೆ ಈಡೇರಿಲ್ಲ. ರಾಜಸ್ಥಾನದಲ್ಲಿ ಸಾಲ ಮನ್ನಾ ಆಶ್ವಾಸನೆ ಕೂಡ ಜಾರಿಯಾಗಿಲ್ಲ. 58 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೆ ಬೇರಾವ ಕಾರ್ಯಕ್ರಮಗಳು ಬೇಕಿರಲಿಲ್ಲ. ಚುನಾವಣೆಗಾಗಿ ಗ್ಯಾರಂಟಿಗಳ ಭರವಸೆ ನೀಡುವವರು ಮನೆಗೆ ಮರಳುವುದು ನಿಶ್ಚಿತ ಎಂದರು.

    ದೇಶಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದಿಸಲಾಗದ ಕಾಂಗ್ರೆಸ್ ಇದೀಗ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡುತ್ತಿದೆ. ಮೋದಿ ಸರ್ಕಾರ ಅಗತ್ಯಕ್ಕಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದಿಸಿದೆ. ಹೊಸ ಯೋಜನೆಗಳ ಮೂಲಕ ಬಿಜೆಪಿ, ಜನರನ್ನು ಸಶಕ್ತೀಕರಣಗೊಳಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಪರಿವರ್ತನೆ ದಿನಮಾನದಲ್ಲಿದೆ. ಜನರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

    ದೇಶದ ಜನರಿಗೆ ಬಿಜೆಪಿ, ಉಜಾಲ ಯೋಜನೆಯಡಿ ಎಲ್‌ಇಡಿ ಬಲ್ಬ್ ವಿತರಿಸಿದ್ದರಿಂದ 19 ಸಾವಿರ ಕೋಟಿಯಷ್ಟು ವಿದ್ಯುತ್ ಬಿಲ್ ತಗ್ಗಿದೆ. ಪ್ರತಿ ಮನೆಗೂ ನಲ್ಲಿ, ಹೊಗೆ ಮುಕ್ತ ಅಡುಗೆ ಮನೆಗಾಗಿ ಉಜ್ವಲ ಸಿಲಿಂಡರ್ ಯೋಜನೆ ತರಲಾಗಿದೆ. ಜನಧನ್ ಯೋಜನೆ, ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಜೋಡಣೆ ಮಾಡಿದ್ದರ ಹಿನ್ನಲೆಯಲ್ಲಿ ಫಲಾನುಭವಿಗಳ ಖಾತೆಗೆ ನೇರ ಜಮೆ ಆಗುತ್ತಿದೆ. ಈ ಪ್ರಯತ್ನದಿಂದಾಗಿ ಕಳೆದ ಏಳು ವರ್ಷದಲ್ಲಿ, ಮಧ್ಯವರ್ತಿಗಳ ಪಾಲಾಗುತ್ತಿದ್ದ 2 ಲಕ್ಷ 30 ಸಾವಿರ ಕೋಟಿ ರೂ. ಹಣ ಉಳಿತಾಯವಾಗಿದೆ ಎಂದರು.

    ಮೋದಿ ಪ್ರಧಾನಿಯಾಗುವ ಮುನ್ನ ದೇಶದಲ್ಲಿ 8 ಕೋಟಿ ಜನರ ಮನೆಗೆ ಗ್ಯಾಸ್ ಸಂಪರ್ಕವಿತ್ತು. ನಂತರದಲ್ಲಿ 9 ಕೋಟಿ ರೂ. ಹೊಸ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಯಿತು. 2017ರ ನಂತರದಲ್ಲಿ ನಳ ನೀರಿನ ಸಂಪರ್ಕ ಮನೆಗಳ ಸಂಖ್ಯೆ 3ರಿಂದ 11 ಕೋಟಿ ರೂ.ಗೆ ಏರಿಕೆಯಾಗಿದೆ. ಮಹಿಳೆಯರಿಗೆ ಕೌಶಲ ನೀಡಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಲಾಗುತ್ತಿದೆ ಎಂದರು.

    ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಮಾಹಿತಿ ಕಣಜ ಹಾಗೂ ಸಂಜೀವಿನಿ ಒಕ್ಕೂಟಗಳ ಮಳಿಗೆ ಉದ್ಘಾಟಿಸಿದರು. ಶಾಸಕ ಪ್ರೊ.ಎನ್.ಲಿಂಗಣ್ಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ಬಸವರಾಜನಾಯ್ಕ, ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮೇಯರ್ ಬಿ.ಎಚ್.ವಿನಾಯಕ್, ಉಪಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ಸದಸ್ಯರಾದ ಎಸ್.ಟಿ.ವೀರೇಶ್. ಕೆ.ಎಂ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ ರಿಷ್ಯಂತ್, ಜಿ.ಪಂ. ಸಿಇಒ ಡಾ.ಎ.ಚನ್ನಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಎಸಿ ದುರ್ಗಾಶ್ರೀ, ತಹಸೀಲ್ದಾರ್ ಅಶ್ವತ್ಥ್ ಇತರರಿದ್ದರು.

    ಅಂದಾಜು 10 ಸಾವಿರದಷ್ಟು ಫಲಾನುಭವಿಗಳು ಪಾಲ್ಗೊಂಡಿದ್ದ ಸಮ್ಮೇಳನದಲ್ಲಿ ವಿವಿಧ ಇಲಾಖೆವಾರು 119 ಜನರಿಗೆ ಸಾಂಕೇತಿಕವಾಗಿ ಸೌಲಭ್ಯ ವಿತರಿಸಲಾಯಿತು. ಸರೋಜಮ್ಮ ಪಾಟೀಲ್, ಮರುಳಸಿದ್ದಪ್ಪ ಸೇರಿ ಕೆಲವರು ಅನಿಸಿಕೆ ಹಂಚಿಕೊಂಡರು. ವಿವಿ ಇಲಾಖೆಗಳ ಮಾಹಿತಿ ಒಳಗೊಂಡಂತೆ ಮಳಿಗೆಗಳನ್ನು ತೆರೆಯಲಾಗಿತ್ತು.

    ನೆಮ್ಮದಿಯೇ ನಮ್ಮ ಸಂಕಲ್ಪ: ದಾವಣಗೆರೆ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಬೇಕು. ಜನರು ನೆಮ್ಮದಿ ವಾತಾವರಣದಲ್ಲಿ ಬದುಕಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ಜಿಲ್ಲೆಯ ಬೇಡಿಕೆಯಂತೆ ವಿಮಾನ ನಿಲ್ದಾಣ ಕೂಡ ಶೀಘ್ರವೇ ಕಾರ್ಯಗತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹೇಳಿದರು. ರಾಜ್ಯದ ಎಲ್ಲ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕುಡಿವ ನೀರಿನ ಕೊರತೆ ಆಗಬಾರದು. ಈ ದಿಸೆಯಲ್ಲಿ ದಾಹಮುಕ್ತ ಕರ್ನಾಟಕ ನಿರ್ಮಿಸುವ ಇಂಗಿತವಿದೆ. ಇದಕ್ಕಾಗಿ 9 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ನಮಗೆ ಭದ್ರ ಸರ್ಕಾರ ಬೇಕಿದೆ ಎಂದೂ ಆಶಿಸಿದರು.

    ಕಾಂಗ್ರೆಸ್ ಅವಧಿಲೇ 59 ಪ್ರಕರಣ ದಾಖಲು: ಕಾಂಗ್ರೆಸ್ ಅವಧಿಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, 59 ಪ್ರಕರಣ ದಾಖಲಾಗಿವೆ. ನೆಹರು ಕಾಲದ ಜೀಪ್ ಹಗರಣದಿಂದ 2ಜಿ, ಕಾಮನ್ ವೆಲ್ತ್‌ವರೆಗೂ ಹಗರಣ ನಡೆದಿವೆ ಎಂದು ಪ್ರಲ್ಹಾದ್ ಜೋಶಿ ದೂರಿದರು.

    ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ವರದಿ ನಂತರದಲ್ಲಿ ಕಾನೂನು ಕ್ರಮ ಆಗಲಿದೆ. ಅಗತ್ಯ ಬಿದ್ದರೆ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.

    ನಮ್ಮ ಪಕ್ಷ ಶಾಸಕರ ವಿರುದ್ಧವೇ ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ನಮ್ಮವರನ್ನೇ ಬಿಟ್ಟಿಲ್ಲ. ಇನ್ನು ಉಳಿದವರನ್ನು ಬಿಡುತ್ತೇವೆಯಾ ಎಂದರು.
    ಪ್ರಜಾಪ್ರಭುತ್ವ ಕ್ಕೆ ಅಪಾಯ ಬಂದಿದೆ ಎಂಬ ರಾಹುಲ್‌ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮೋದಿ ಅವರನ್ನು ಟೀಕಿಸುವ ಭರದಲ್ಲಿ ದೇಶದ ಘನತೆಗೆ ಧಕ್ಕೆ ತರಬಾರದು ಎಂದು ಹೇಳಿದರು.

    ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ 871 ಗ್ರಾಮಗಳ 1,55,241 ಮನೆಗಳಿಗೆ ಕುಡಿವ ನೀರೊದಗಿಸಲು 413 ಕೋಟಿ ರೂ. ವ್ಯಯಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಎಲ್ಲರ ಮನೆಗೆ ನೀರು ತಲುಪಲಿದೆ.
    ಜಿ.ಎಂ.ಸಿದ್ದೇಶ್ವರ ಸಂಸದ

    ವಿಪಕ್ಷಗಳು ಮನೆ ಕೊಟ್ಟಿಲ್ಲ ಎಂದು ಟೀಕಿಸುತ್ತಿವೆ. ಆದರೆ, ಜಗಳೂರು ತಾಲೂಕಿನಲ್ಲಿ ಇದುವರೆಗೆ 3988 ಮನೆ ನಿರ್ಮಿಸಿಕೊಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ, ತಾಲೂಕಿನ 45 ಸಾವಿರ ಎಕರೆಗೆ ನೀರಾವರಿ ಕನಸು ಸಾಕಾರವಾಗುತ್ತಿದೆ.
    ಎಸ್.ವಿ.ರಾಮಚಂದ್ರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts