More

    ದಾವಣಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

    ದಾವಣಗೆರೆ : ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೂರು ದಿನ ನೀರು ಹರಿಸಲು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ, ಬಿಜೆಪಿ ಮತ್ತು ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
     ನಗರದಲ್ಲಿ ಪ್ರಮುಖವಾಗಿ ವ್ಯಾಪಾರ, ವಹಿವಾಟು ನಡೆಯುವ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಕಾಳಿಕಾದೇವಿ ರಸ್ತೆ, ಎಂ.ಜಿ. ರಸ್ತೆ, ಪಿಬಿ ರಸ್ತೆ, ಅಶೋಕ ರಸ್ತೆಯಲ್ಲಿ ವಾಣಿಜ್ಯ ಮಳಿಗೆ, ಅಂಗಡಿ, ಮುಂಗಟ್ಟು, ಹೋಟೆಲ್‌ಗಳು ಬಂದ್ ಆಗಿದ್ದವು. ಕೆಲವು ಅರ್ಧ ಬಾಗಿಲು ಮುಚ್ಚಿದ್ದವು. ಹೊರ ವಲಯದ ಬಡಾವಣೆಗಳಲ್ಲಿ ಜನಜೀವನ ಎಂದಿನಂತಿತ್ತು. ಪೆಟ್ರೋಲ್ ಬಂಕ್‌ಗಳು ಕಾರ್ಯ ನಿರ್ವಹಿಸಿದವು.
     ಕೆಲವು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆಟೋ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬೆಳಗ್ಗೆ 8 ರ ನಂತರ ಬಸ್‌ಗಳು ಬರಲಿಲ್ಲ. ನಿಲ್ದಾಣ ಖಾಲಿ ಖಾಲಿಯಿತ್ತು. ಹಳ್ಳಿಗಳಿಂದ ಬಂದವರು, ವಿದ್ಯಾರ್ಥಿಗಳು ಬಸ್‌ಗಾಗಿ ವಿಚಾರಿಸುವುದು ಕಂಡುಬಂದಿತು. ಬಸ್ ಬರಬಹುದು ಎಂದು ಹಲವಾರು ಪ್ರಯಾಣಿಕರು ಕಾದು ಕುಳಿತಿದ್ದರು.
     ಬಸ್‌ಗಳ ಮಾರ್ಗಗಳನ್ನು ಬದಲಿಸಲಾಗಿತ್ತು. ಬಾಡಾ ಕ್ರಾಸ್, ಶಾಮನೂರು, ಪಿಬಿ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಬಳಿಯಿಂದ ಬಸ್‌ಗಳು ಸಂಚರಿಸಿದವು. ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿದ್ದವು.
     ಭದ್ರತೆಗಾಗಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ಬೈಕುಗಳಲ್ಲಿ ನಗರ ಪ್ರದಕ್ಷಿಣೆ ಮಾಡಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಕೆಲವು ಬಸ್‌ಗಳನ್ನು ತಡೆದು ನಿಲ್ಲಿಸಿದರು.
     ಬೆಳಗ್ಗೆ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಲೆಗಳಿಗೆ ನೀರು ಸ್ಥಗಿತಗೊಳಿಸಿದ್ದರಿಂದ ಭತ್ತದ ಬೆಳೆ ನಾಟಿ ಮಾಡಿರುವ ರೈತರು ಆತಂಕದಲ್ಲಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸಂಕಷ್ಟ ಎದುರಾಗುತ್ತದೆ. ಈ ಮೊದಲು ತಿಳಿಸಿದಂತೆ ನೂರು ದಿನ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
     ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು, ಬೆಳವನೂರು ನಾಗೇಶ್ವರರಾವ್ ಮತ್ತಿತರ ಮುಖಂಡರು ಮಾತನಾಡಿದರು. ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ರೈತ ಮೋರ್ಚಾದ ಲೋಕಿಕೆರೆ ನಾಗರಾಜ, ಮುಖಂಡರಾದ ಬಿ.ಎಂ. ಸತೀಶ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಜಿ.ಎಸ್. ಶ್ಯಾಮ್, ಉಪ ಮೇಯರ್ ಯಶೋದಾ ಹೆಗ್ಗಪ್ಪ, ವೀಣಾ ನಂಜಪ್ಪ, ಭಾಗ್ಯಾ ಪಿಸಾಳೆ, ಎಚ್.ಎನ್. ಗುರುನಾಥ್ ಇತರರು ಪಾಲ್ಗೊಂಡಿದ್ದರು. ಆಮ್ ಆದ್ಮಿ ಪಾರ್ಟಿ ಮತ್ತು ಕೆಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
     ನಂತರ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಟೈರ್ ಸುಟ್ಟು, ಸಚಿವ ಮಧು ಬಂಗಾರಪ್ಪ ಅವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೇಕೇ ಬೇಕು, ನೀರು ಬೇಕು ಎಂದು ಘೋಷಣೆ ಹಾಕಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts