More

    ಕೊಂಡುಕುರಿ ವಿಶೇಷತೆ ಪರಿಚಯಿಸಲು ಯೋಜನೆ

    ರಮೇಶ ಜಹಗೀರದಾರ್ ದಾವಣಗೆರೆ
     ದೇಶದಲ್ಲೇ ಮತ್ತೆಲ್ಲೂ ಕಾಣಸಿಗದ ಕೊಂಡುಕುರಿಗಳು ಜಗಳೂರು ತಾಲೂಕು ರಂಗಯ್ಯನದುರ್ಗ ಅಭಯಾರಣ್ಯದಲ್ಲಿವೆ. ಅಳಿವಿನ ಅಂಚಿನಲ್ಲಿರುವ ಈ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅಷ್ಟಾಗಿ ನಡೆದಿಲ್ಲ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಪ್ರಯತ್ನವೊಂದು ಆರಂಭವಾಗಿದೆ.
     ಸುಮಾರು 20 ಸಾವಿರ ಎಕರೆ ವಿಸ್ತೀರ್ಣದಲ್ಲಿ 120 ಕೊಂಡುಕುರಿಗಳಿವೆ. ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಪ್ರಾಣಿಗಳ ಸಂರಕ್ಷಣೆಯ ಜತೆಗೆ ಅಧ್ಯಯನವೂ ಆಗಬೇಕಿದೆ. ಅವುಗಳ ವಿಶೇಷತೆಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ.
     ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನದಂದು ‘ಕೊಂಡುಕುರಿ ಉತ್ಸವ’ ಆಚರಿಸುವ ಮೂಲಕ ಈ ಪ್ರಾಣಿ ಪ್ರಭೇದದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಆಗಬೇಕು ಎನ್ನುವ ಅಭಿಪ್ರಾಯವಿದೆ.
     ಕೊಂಡುಕುರಿಯ ಮೂರ್ತಿಗಳನ್ನು ಮಾಡಿಸಿ ದಾವಣಗೆರೆ ಹಾಗೂ ಜಗಳೂರಿನಲ್ಲಿ ಅವುಗಳನ್ನು ಸ್ಥಾಪಿಸಿ ಸಾರ್ವಜನಿಕರು ವೀಕ್ಷಿಸುವಂತೆ ಮಾಡುವ ಉದ್ದೇಶವಿದೆಯಂತೆ. ಈ ವನ್ಯಜೀವಿಯ ಸಂತತಿಯ ಬಗ್ಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಧ್ಯಯನ ವಿಭಾಗ ತೆರೆಯುವ ಮೂಲಕ ಇನ್ನಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳು ಆಗಬೇಕು ಎನ್ನುವ ಸಲಹೆ ಕೇಳಿಬಂದಿದೆ.
     ಈ ಪ್ರಾಣಿಯ ಇತಿಹಾಸ, ವಿಶೇಷತೆಗಳ ಕುರಿತು ವಿವರಿಸುವ ಪುಸ್ತಕವೊಂದನ್ನು ತರುವ ಯೋಚನೆಯೂ ಇದೆಯಂತೆ. ಶಾಲಾ ಪಠ್ಯಪುಸ್ತಕದಲ್ಲಿ ಈ ಜೀವಿಗಳ ಬಗ್ಗೆ ವಿವರಿಸುವ ಮಾಹಿತಿ ಆಧಾರಿತ ಪಠ್ಯವನ್ನು ಸೇರ್ಪಡೆ ಮಾಡಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.
     ಕೊಂಡುಕುರಿಯನ್ನು ‘ದಾವಣಗೆರೆ ಜಿಲ್ಲಾ ಪ್ರಾಣಿ’ ಎಂದು ಘೋಷಣೆ ಮಾಡುವ ಮೂಲಕ ವಿಶೇಷವಾಗಿ ಗುರುತಿಸಬೇಕಿದೆ. ಅದರ ಬೆಳವಣಿಗೆಗೆ ಪ್ರಯತ್ನಿಸಬೇಕಿದೆ.
     ರಾಜ್ಯದ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ‘ಕೊಂಡುಕುರಿ-ನಮ್ಮನ್ನು ನೋಡಲು ಜಗಳೂರಿಗೆ ಬನ್ನಿ’ ಎಂಬ ಶೀರ್ಷಿಕೆಯೊಂದಿಗೆ ಮಾಹಿತಿ ಫಲಕಗಳನ್ನು ಅಳವಡಿಸುವುದು. ಇದರಿಂದ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಲಿದೆ ಎನ್ನುತ್ತವೆ ಮೂಲಗಳು.
     ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿ ರೂಪುರೇಶೆಗಳನ್ನು ಸಿದ್ಧಪಡಿಸಬೇಕಿದೆ. ಇದಕ್ಕಾಗಿ ಪ್ರಾಯೋಜಕರ ನೆರವನ್ನು ಪಡೆಯುವ ಚಿಂತನೆಯೂ ಇದೆ ಎನ್ನಲಾಗಿದೆ.
     …
     (ಕೋಟ್)
     ಕೊಂಡುಕುರಿ ಏಷ್ಯಾದಲ್ಲೇ ಅಪರೂಪದ ಪ್ರಾಣಿ. ಅವುಗಳ ಸಂರಕ್ಷಣೆ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಏನೆಲ್ಲ ಮಾಡಬಹುದು ಎನ್ನುವ ಕುರಿತು ಅಧಿವೇಶನ ಮುಗಿದ ನಂತರ ಸಂಬಂಧಿಸಿದ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿ ಅಗತ್ಯ ರೂಪುರೇಶೆ ಸಿದ್ಧಪಡಿಸಲಾಗುವುದು.
      ಬಿ. ದೇವೇಂದ್ರಪ್ಪ, ಜಗಳೂರು ಶಾಸಕ

     …
     
     (ಕೋಟ್)
     ಕೊಂಡುಕುರಿ ಒಂದು ವಿಶೇಷ ತಳಿಯಾಗಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಲು ದಾವಣಗೆರೆಯ ದಶ್ಯಕಲಾ ಕಾಲೇಜು ಮತ್ತು ಗಾಜಿನ ಮನೆಯಲ್ಲಿ ಕೊಂಡುಕುರಿಯ ಮೂರ್ತಿಗಳನ್ನು ಸ್ಥಾಪಿಸುವ ಉದ್ದೇಶವಿದೆ. ಈ ವನ್ಯಜೀವಿಯ ಇತಿಹಾಸ, ವಿಶೇಷತೆಯ ಕುರಿತು ಅರಣ್ಯ ಇಲಾಖೆ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಪುಸ್ತಕವೊಂದನ್ನು ಹೊರ ತರುವ ಚಿಂತನೆಯೂ ಇದೆ.
      ಡಾ. ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ

     …
     
     (ಕೋಟ್)
     ಕೊಂಡುಕುರಿಯಂಥ ತಳಿ ಭಾರತದಲ್ಲೇ ಕೇವಲ ಜಗಳೂರು ತಾಲೂಕು ರಂಗಯ್ಯನದುರ್ಗ ಅಭಯಾರಣ್ಯದಲ್ಲಿದೆ ಎನ್ನುವ ಸಂಗತಿಯೇ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಇದು ದಾವಣಗೆರೆಯವರಿಗೆ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಜಾಗೃತಿ ಮೂಡಿ ಹೆಚ್ಚು ಜನರು ಭೇಟಿ ನೀಡುವಂತಾಗಬೇಕು.
      ಡಾ. ಎಚ್. ಲಕ್ಷ್ಮೀಕಾಂತ್, ಮಾಲಿನ್ಯ ನಿಯಂತ್ರಣ ಮಂಡಳಿಯ ದಾವಣಗೆರೆ ಪ್ರಾದೇಶಿಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts