More

    ಡೋಲಿಯವರು ಅವಸರ ಮಾಡಿದ್ದರಿಂದ ಸುರಕ್ಷಿತವಾಗಿ ಬಂದೆವು

    ದಾವಣಗೆರೆ : ಡೋಲಿಯವರು ಅವಸರ ಮಾಡಿದ್ದರಿಂದ ನಾವು ಸುರಕ್ಷಿತವಾಗಿ ವಾಪಸಾಗಿದ್ದೇವೆ. ಅವರಿಗೆ ಥ್ಯಾಂಕ್ಸ್ ಹೇಳಬೇಕು. ಸ್ವಲ್ಪ ತಡ ಮಾಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ.
     ಅಮರನಾಥ ಯಾತ್ರೆಯಿಂದ ಸುರಕ್ಷಿತವಾಗಿ ಮರಳಿರುವ ದಾವಣಗೆರೆಯ ಶಾಮನೂರು ನಿವಾಸಿ, ಪ್ರೌಢಶಾಲಾ ಶಿಕ್ಷಕಿ ಗೀತಾ ಅವರ ಪ್ರತಿಕ್ರಿಯೆ ಇದು. ದುರ್ಗಮವಾದ ದಾರಿಯಲ್ಲಿ ಮಾಡಿದ ಪ್ರಯಾಣ, ಅಲ್ಲಿ ತಮಗಾದ ಅನುಭವವನ್ನು ಅವರು ವಿಜಯವಾಣಿಯೊಂದಿಗೆ ಸೋಮವಾರ ಹಂಚಿಕೊಂಡರು.
     ಗೀತಾ ಅವರು ತಮ್ಮ ಸ್ನೇಹಿತೆಯರಾದ ಬಿ.ಜಿ. ಪುಷ್ಪಾ, ಸಿ.ಎಚ್. ಚಂದ್ರಿಕಾ ಮತ್ತು ಉಷಾ ಪ್ರಭಾಕರ್ ಅವರೊಂದಿಗೆ ಜೂನ್ 30 ರಂದು ಪ್ರಯಾಣ ಆರಂಭಿಸಿದರು. ಜುಲೈ 1ರಂದು ಜಮ್ಮು ತಲುಪಿದ ಅವರು ಅಂದು ವೈಷ್ಣೋದೇವಿಯ ದರ್ಶನ ಪಡೆದರು.
     ಮರು ದಿನ ಶ್ರೀನಗರದತ್ತ ಪ್ರಯಾಣ ಬೆಳೆಸಿದರು. ಮಾರ್ಗಮಧ್ಯೆ ರಾಮ್‌ಬನ್ ಎಂಬಲ್ಲಿ ಸಿ.ಆರ್.ಪಿ.ಎಫ್.ನ ಶಿಬಿರ (ಬೇಸ್ ಕ್ಯಾಂಪ್)ದಲ್ಲಿ ತಂಗಿದರು. ದಾರಿಯುದ್ದಕ್ಕೂ ಪ್ರತಿ ನೂರು ಮೀಟರ್ ಅಂತರದಲ್ಲಿ ಭದ್ರತಾ ಪಡೆಗಳ ಕಣ್ಗಾವಲು ಇತ್ತು ಎಂದು ಅಲ್ಲಿನ ಚಿತ್ರಣವನ್ನು ವಿವರಿಸಿದರು.
     ಜುಲೈ 3ರಂದು ಶ್ರೀನಗರ ತಲುಪಿದರು. ಅಲ್ಲಿಂದ ಮುಂದೆ ಅಮರನಾಥಕ್ಕೆ ತೆರಳಲು ಪರವಾನಗಿ ಸಿಗುವುದಕ್ಕೆ 3 ದಿನಗಳು ಬೇಕಾದವು. ಹೆಲಿಕಾಪ್ಟರ್ ಸಿಗದ ಕಾರಣ ಬಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೋದರು. ಅಲ್ಲಿಂದ 14 ಕಿ.ಮೀ. ದೂರದ ಅಮರನಾಥ ವರೆಗಿನ ಪ್ರಯಾಣ ದುರ್ಗಮವಾದುದು. ಸ್ನೇಹಿತರ ಸಲಹೆಯಂತೆ ಡೋಲಿಯಲ್ಲಿ ತೆರಳಿದ್ದಾಗಿ ತಿಳಿಸಿದರು.
     ದೇವರ ದರ್ಶನ ಪಡೆದ ನಂತರ ವಾಪಸ್ ಹೊರಡಲು ಡೋಲಿಯವರು ಅವಸರ ಮಾಡತೊಡಗಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಮಳೆಯ ಮುನ್ಸೂಚನೆ ದೊರಕಿದಂತಿತ್ತು. ಬಾರಿಶ್ ಆತಿ ಹೈ, ಜಲ್ದೀ ಕರೋ ಮೇಡಮ್ ಎಂದು ಹೇಳಿದ್ದರಿಂದ ತಡ ಮಾಡದೇ ಅಲ್ಲಿಂದ ಹೊರಟೆವು. ಬಲ್ಟಾಲ್ ಬೇಸ್ ಕ್ಯಾಂಪ್‌ಗೆ ಬರುತ್ತಿದ್ದಂತೆ ಮಳೆ ಆರಂಭವಾಯಿತು. ಒಂದೆರಡು ಗಂಟೆ ವಿಳಂಬ ಮಾಡಿದ್ದರೂ ಸಂಕಷ್ಟಕ್ಕೆ ಸಿಲುಕುತ್ತಿದ್ದೆವು ಎಂದು ವಿವರಿಸಿದರು.
     ಅಮರನಾಥ ಯಾತ್ರಿಗಳಿಗೆ ಅಲ್ಲಿ ಊಟ, ವಸತಿ ಮತ್ತು ಭದ್ರತೆಯ ವ್ಯವಸ್ಥೆ ಅತ್ಯುತ್ತಮವಾಗತ್ತು. ನಮಗೆ ಯಾವುದೇ ಸಮಸ್ಯೆಯಾಗಲಿಲ್ಲ. ಶಿವನ ದರ್ಶನವಾಗುತ್ತಿದ್ದಂತೆ ಪ್ರಯಾಣದ ಎಲ್ಲ ಆಯಾಸ ದೂರವಾಯಿತು ಎಂದು ಗೀತಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts