More

    ಮೂಢನಂಬಿಕೆ ಹೋಗಲಾಡಿಸಿದ ದಾಸರ ಕೀರ್ತನೆಗಳು

    ಪಾಂಡವಪುರ: ಕನಕದಾಸರ ಕೀರ್ತನೆಗಳು ಸಮಾಜದಲ್ಲಿ ಸಮಾನತೆಯ ಮಹತ್ವವನ್ನು ಸಾರುವ ಜತೆಗೆ ಜನರಲ್ಲಿ ಬೇರೂರಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿದವು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

    ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

    ಸರಳ ಜೀವನ, ಆದರ್ಶ ವ್ಯಕ್ತಿತ್ವ ಹಾಗೂ ಶ್ರೇಷ್ಠ ದಾರ್ಶನಿಕರಾದ ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲೀರಾ ಎಂದು ಸಾರುವ ಮೂಲಕ ಜಾತಿ ಜಾತಿಗಳ ನಡುವಿನಲ್ಲಿದ್ದ ವೈಮನಸ್ಸು ಹೋಗಲಾಡಿಸಲು ಪ್ರಯತ್ನಪಟ್ಟರು. ತಮ್ಮ ಕೀರ್ತನೆಗಳ ಮೂಲಕವೇ ಜನರ ಮನಸ್ಸಿನಲ್ಲಿದ್ದ ಮೂಢನಂಬಿಕೆಗಳನ್ನು ನಿರ್ಮೂಲನೆಗೆ ಪ್ರಯತ್ನಿಸಿ ಜಾಗೃತಿ ಮೂಡಿಸಿದ್ದರು. ಇಂತಹ ದಾಸ ಶ್ರೇಷ್ಠರನ್ನು ನೆನೆದು ಅವರ ಆದರ್ಶಗಳನ್ನು ಪಾಲನೆ ಮಾಡುವುದು ನಮ್ಮ ಆದ್ಯತೆಯಾಗಬೇಕು ಎಂದರು.

    ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಮಾತನಾಡಿ, 15-16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಾತಿ ಮತ್ತು ಮೂಢನಂಬಿಕೆ ವಿರುದ್ಧ ಹೋರಾಟ ನಡೆಸಿ ಮಾನವೀಯ ಮೌಲ್ಯಗಳನ್ನು ಕನಕದಾಸರು ಬಿತ್ತಿ ಬೆಳೆಸಿದ್ದಾರೆ. ಪ್ರಸ್ತುತ ಸಮಾಜಕ್ಕೆ ಇಂತಹ ಮಹನೀಯರ ಅವಶ್ಯಕತೆ ಇದೆ. ಇವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ನಾವೆಲ್ಲ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

    ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ಬಿ.ಚಂದ್ರಶೇಖರ್, ಸಿಡಿಪಿಒ ಪೂರ್ಣಿಮಾ, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಉಪವಿಭಾಗೀಯ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಜಯಲಕ್ಷ್ಮಮ್ಮ, ಉಪನ್ಯಾಸಕ ರಾಜೇಶ್, ಕುರುಬರ ಸಂಘದ ಅಧ್ಯಕ್ಷ ಹುಚ್ಚೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts