More

    ಎದ್ದಿವೆ ಅಪಾಯಕಾರಿ ಹಂಪ್ಸ್!

    ಭರತ್ ಶೆಟ್ಟಿಗಾರ್ ಮಂಗಳೂರು
    ನಗರದ ಎಲ್ಲೆಂದರಲ್ಲಿ ಕಿತ್ತು ಹೀಗಿದ್ದ ಹಂಪ್‌ಗಳನ್ನು ಸರಿಪಡಿಸುವ ಕೆಲಸ ಮಹಾನಗರ ಪಾಲಿಕೆಯಿಂದ ನಡೆದಿದೆ. ಇದರಿಂದ ವಾಹನ ಸವಾರರಿಗಿದ್ದ ಅಪಾಯ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಹೊಸ ಸಮಸ್ಯೆ ಉದ್ಭವಿಸಿದೆ.

    ಹೊಸದಾಗಿ ಹಂಪ್‌ಗಳನ್ನು ನಿರ್ಮಿಸಿ ವಾರ ಕಳೆದರೂ ಅವುಗಳಿಗೆ ಪ್ರತಿಫಲನವಾಗುವ ಬಿಳಿ ಬಣ್ಣ ಬಳಿದಿಲ್ಲ. ಕಾಂಕ್ರೀಟ್ ರಸ್ತೆಗಳಿಗೆ ನಿರ್ಮಿಸಲಾಗಿರುವ ಹಂಪ್‌ಗಳು ರಾತ್ರಿ ವೇಳೆ ಮಾತ್ರವಲ್ಲದೆ ಹಗಲು ವೇಳೆಯಲ್ಲೂ ಕಾಣಿಸುವುದಿಲ್ಲ. ಇದು ವಾಹನ ಸವಾರರಿಗೆ ಭಾರಿಯಾಗಿ ಪರಿಣಮಿಸಿದ್ದು, ವೇಗವಾಗಿ ಬರುವ ವಾಹನಗಳು ಒಮ್ಮೆಲೇ ಹಂಪ್ ಮೇಲೆ ಹಾದುಹೋದರೆ, ಇನ್ನು ಕೆಲವು ವಾಹನಗಳು ಹಂಪ್ ಬಳಿ ಹಠಾತ್ ಬ್ರೇಕ್ ಹಾಕುತ್ತವೆ. ರಾತ್ರಿ ವೇಳೆ ಹಂಪ್ ಗೋಚರಿಸದೆ ಸಂಚಾರ ಮಾಡುವುದೇ ಅಪಾಯ ಎಂಬಂತಾಗಿದೆ. ಆದ್ದರಿಂದ ಹೊಸ ಹಂಪ್‌ಗಳಿಗೆ ಬಿಳಿ ಬಣ್ಣದ ಪಟ್ಟಿಗಳನ್ನು ಅಳವಡಿಸಬೇಕು. ಜತೆಗೆ ಹಳೇ ಹಂಪ್‌ಗಳಿಗೆ ಹಾಕಿದ್ದ ಬಣ್ಣವೂ ಮಾಸಿದ್ದು, ಅವುಗಳಿಗೆ ಬಿಳಿ ಬಣ್ಣದ ಪಟ್ಟಿ ಅಳವಡಿಸಬೇಕಾಗಿದೆ.

    ವಿಜಯವಾಣಿ ಎಚ್ಚರಿಕೆ: ನಗರದಲ್ಲಿ ಹಂಪ್‌ಗಳು ಎದ್ದು ಹೋಗಿ ವಾಹನ ಸವಾರರಿಗೆ ಅಪಾಯಕಾರಿಯಾಗಿರುವ ಕುರಿತು ವಿಜಯವಾಣಿ ವರದಿ ಮಾಡಿ ಮಹಾನಗರ ಪಾಲಿಕೆಯನ್ನು ಎಚ್ಚರಿಸಿತ್ತು. ತಿಂಗಳ ಬಳಿಕ ಹಂಪ್‌ಗಳ ದುರಸ್ತಿ ಮಾಡುವ ಕೆಲಸ ಆರಂಭವಾಗಿತ್ತು. ಪ್ರಸ್ತುತ ಹೆಚ್ಚಿನ ಹಂಪ್‌ಗಳು ದುರಸ್ತಿಯಾಗಿದ್ದು, ಅವಶ್ಯಕತೆ ಇರುವಲ್ಲಿ ಹೊಸ ಡಾಂಬರು ಹಂಪ್‌ಗಳನ್ನು ನಿರ್ಮಿಸಲಾಗಿದೆ. ಪಾಲಿಕೆ ಮಾಹಿತಿಯಂತೆ ನಗರದಲ್ಲಿ 40 ಹೊಸ ಹಂಪ್ಸ್ ಅಳವಡಿಕೆಯಾಗಲಿದೆ. ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಮತ್ತು ವೆನ್ಲಾಕ್ ಆಸ್ಪತ್ರೆ ನಡುವಿನ ಹಂಪ್ ಇನ್ನೂ ದುರಸ್ತಿಯಾಗಿಲ್ಲ.

    ತೆರವಾಗದ ರಬ್ಬರ್ ಹಂಪ್: 
    ಮಂಗಳೂರು ನಗರದಲ್ಲಿ ರಬ್ಬರ್ ಹಂಪ್‌ಗಳನ್ನು ಕೆಲವು ಸಮಯದ ಹಿಂದೆ ಅಲ್ಲಲ್ಲಿ ಅಳವಡಿಸಲಾಗಿತ್ತು. ಮುಖ್ಯರಸ್ತೆಗಳು ಒಳ ರಸ್ತೆಗಳಲ್ಲೂ ರಬ್ಬರ್ ಹಂಪ್‌ಗಳೇ ಕಾಣಸಿಗುತ್ತಿದ್ದವು. ವಾಹನಗಳ ನಿರಂತರ ಓಡಾಟ ಹಾಗೂ ಬಿಸಿಲಿನ ಹೊಡೆತಕ್ಕೆ ಇವುಗಳನ್ನು ಅಳವಡಿಸಿದ ಆರು ತಿಂಗಳಲ್ಲಿ ಎದ್ದು ಹೋಗುತ್ತಿತ್ತು. ಬಿಡಿಬಿಡಿಯಾಗಿ ಅಳವಡಿಸುವುದರಿಂದ ಕೆಲವು ಸ್ಥಳಗಳಲ್ಲಿ ಸಾರ್ವಜನಿಕರೇ ಅದನ್ನು ರಸ್ತೆಯಿಂದ ಕಿತ್ತು ತೆಗೆಯುತ್ತಿದ್ದರು. ಹೀಗಾಗಿ ಅಳವಡಿಸಿದರೂ ವ್ಯರ್ಥವಾಗುತ್ತಿತ್ತು. ಈ ರೀತಿಯ ಹಂಪ್‌ಗಳು ವಾಹನಗಳ ಬಾಳ್ವಿಕೆ ಹಾಗೂ ಸವಾರಿಗೂ ಹೊಡೆತ ಬೀಳುತ್ತದೆ ಎಂದು ಆಕ್ಷೇಪ ವ್ಯಕ್ತವಾದ ಬಳಿಕ ಪೊಲೀಸ್ ಇಲಾಖೆ ಮುಖ್ಯರಸ್ತೆಗಳಿಂದ ಇಂಥ ಹಂಪ್‌ಗಳನ್ನು ತೆರವುಗೊಳಿಸಿತ್ತು. ಆದರೂ ಕೆಲವು ಮುಖ್ಯರಸ್ತೆ ಹಾಗೂ ಒಳರಸ್ತೆಗಳಲ್ಲಿ ರಬ್ಬರ್ ಹಂಪ್‌ಗಳು ಇನ್ನೂ ಇವೆ.

    ಹೊಸ ಹಂಪ್ ಆಗಿರುವುದರಿಂದ ಅದು ಸೆಟ್ ಆಗಬೇಕಿದ್ದು, ಅದಕ್ಕಾಗಿ ಸ್ವಲ್ಪ ಕಾಲ ಹಾಗೆಯೇ ಬಿಡಲಾಗಿದೆ. ಶೀಘ್ರ ಬಿಳಿ ಪೇಂಟ್ ಬಳಿಯಲಾಗುವುದು. ಹಂಪ್ ಅಳವಡಿಕೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಪಾಲಿಕೆಯಿಂದ 40 ಕಡೆಗಳಲ್ಲಿ ಹಂಪ್ಸ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ.

    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ  ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts