More

    ಕದ್ರಿ ಸರ್ಕೀಟ್ ಹೌಸ್ ಗುಡ್ಡ ಕುಸಿತ ಭೀತಿ

    ಮಂಗಳೂರು: ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತ ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಿ ಭೂಕುಸಿತದಿಂದ ಹಲವಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಂಗಳೂರು ನಗರದ ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ರಸ್ತೆಗೆ ಕುಸಿದು ಬೀಳುವ ಅಪಾಯದಲ್ಲಿದೆ. ಶೀಘ್ರ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇದೆ.
    ಸರ್ಕೀಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ಎಡಭಾಗದ ಗುಡ್ಡದ ಮಣ್ಣು ವರ್ಷದಿಂದ ವರ್ಷಕ್ಕೆ ಶಿಥಿಲವಾಗುತ್ತಿದೆ. ಎರಡು ವರ್ಷಗಳಿಂದ ಮಳೆಗಾಲದಲ್ಲಿ ಮಣ್ಣು ಕುಸಿದು ಬೀಳುತ್ತಿದೆ. ಈ ಹಿಂದೆ ಮಣ್ಣು ಕುಸಿತವಾದ ಸ್ಥಳದಲ್ಲಿ ಮರಳು ಚೀಲ ಅಳವಡಿಸಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ. ಈ ವರ್ಷ ಮತ್ತೆ ಕುಸಿತವಾಗಿದೆ. ನಿರಂತರ ಮಳೆಯಾಗುವ ಸಂದರ್ಭ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ.

    ಕೆಳಭಾಗದಲ್ಲಿ ರಸ್ತೆ: ರಸ್ತೆ ಮೇಲ್ಭಾಗದಲ್ಲಿ ಸರ್ಕೀಟ್ ಹೌಸ್ ಕಟ್ಟಡ ಹಾಗೂ ಆವರಣ ಗೋಡೆ ಇದೆ. ಕೆಲಭಾಗದ ರಸ್ತೆಯಲ್ಲಿ ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ ತನಕ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಗುಡ್ಡದ ಮಣ್ಣು ಕುಸಿದರೆ ಒಂದು ಭಾಗದ ರಸ್ತೆ ಮುಚ್ಚಿ ಹೋಗುವ ಸಾಧ್ಯತೆ ಇದೆ. ಈ ಸಂದರ್ಭ ವಾಹನಗಳು ಅದರಡಿ ಸಿಲುಕಿದರೆ ಅಪಾಯ ಎದುರಾಗಲಿದೆ. ಮೇಲ್ಭಾಗದ ಮಣ್ಣು ಶಿಥಿಲವಾಗಿ ಬಿರುಕು ಕಾಣಿಸಿಕೊಂಡಿರುವ ಕಾರಣ ಎಚ್ಚರಿಕೆ ವಹಿಸುವುದು ಅವಶ್ಯ. ತಿಂಗಳ ಹಿಂದೆ ಇಲ್ಲಿ ಮಣ್ಣು ಕುಸಿತವಾಗಿ ರಸ್ತೆಗೆ ಬಿದ್ದಿದ್ದು, ಅದನ್ನು ತೆರವು ಮಾಡಲಾಗಿದೆ.

    ತಾತ್ಕಾಲಿಕ ಸುರಕ್ಷತಾ ಕ್ರಮ: ರಸ್ತೆಯ ಎಡ ಭಾಗದ ಅಂಚಿನಲ್ಲಿ ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್ ಹಾಗೂ ರಿಬ್ಬನ್ ಕಟ್ಟಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದು ಪೂರ್ಣ ಪ್ರಮಾಣದ ಸುರಕ್ಷತೆಯಲ್ಲ. ಏಕಾಏಕಿ ಮಣ್ಣು ಜರಿದು ಬಿದ್ದರೆ ಇನ್ನೊಂದು ರಸ್ತೆಯ ತನಕ ಬೀಳುವ ಸಾಧ್ಯತೆ ಇದೆ. ಮಣ್ಣು ಶಿಥಿಲವಾಗದಂತೆ ಮಾಡಲು ಮೇಲ್ಭಾಗದಲ್ಲಿದ್ದ ಗಿಡ, ಮರಗಳನ್ನು ಕಡಿಯಲಾಗಿದೆ. ಮಳೆ ನೀರು ಬೀಳದಂತೆ ಟರ್ಪಾಲು ಅಳವಡಿಸಲಾಗಿದೆ.

    ಸಾಯಿಲ್ ನೈಲಿಂಗ್ ಪರಿಹಾರ: ಬೇಸಿಗೆಯಲ್ಲಿ ಸಾಯಿಲ್ ನೈಲಿಂಗ್ ತಂತ್ರಜ್ಞಾನ ಅಳವಡಿಕೆಯೊಂದೇ ಇದಕ್ಕೆ ಶಾಶ್ವತ ಪರಿಹಾರ. ಈ ತಂತ್ರಜ್ಞಾನದ ಮೂಲಕ ಮಣ್ಣು ಕುಸಿಯದಂತೆ ತಡೆಗಟ್ಟಬಹುದು. ಕುಲಶೇಖರ, ಪಡೀಲ್ ಕಡೆಗೆ ಹೋಗುವ ರಸ್ತೆ ಬದಿ ಹಾಗೂ ನ್ಯಾಯಾಲಯಕ್ಕೆ ಹೋಗುವ ಕಾಂಕ್ರೀಟ್ ರಸ್ತೆ ಬದಿ ಈ ತಂತ್ರಜ್ಞಾನ ಅಳವಡಿಸಿ ಮಣ್ಣು ಕುಸಿಯದಂತೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಸರ್ಕೀಟ್ ಹೌಸ್ ಬಳಿಯೂ ಸಾಯಿಲ್ ನೈಲಿಂಗ್ ಮಾಡಲು ಮಹಾನಗರಪಾಲಿಕೆ ಯೋಜನೆ ರೂಪಿಸಿದೆ.

    ಕದ್ರಿ ಸರ್ಕೀಟ್ ಹೌಸ್ ಬಳಿ ಗುಡ್ಡ ಕುಸಿತದ ಭೀತಿಯಲ್ಲಿದೆ. ಇದು ಪಿಡಬ್ಲೂೃಡಿಗೆ ಸೇರಿದ ಜಾಗವಾಗಿದೆ. ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮಹಾನಗರಪಾಲಿಕೆ ವತಿಯಿಂದ ಸಾಯಿಲ್ ನೈಲಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಟೆಂಡರ್ ಕರೆದು ತಕ್ಷಣ ಕಾಮಗಾರಿ ಆರಂಭಿಸಲಾಗುವುದು.
    -ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
    —–
    ಗುಡ್ಡ ಕುಸಿಯದಂತೆ ಸಾಯಿಲ್ ನೈಲ್ಲಿಂಗ್ ತಂತ್ರಜ್ಞಾನ ಅಳವಡಿಸಿ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಶಾಸಕರು, ಮನಪಾ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಯೋಜನಾ ವೆಚ್ಚ ಸಿದ್ಧಪಡಿಸಲಾಗಿದೆ. ನಿರಂತರ ಅದರ ಫಾಲೋಅಪ್ ಮಾಡಲಾಗುತ್ತಿದೆ.
    -ಶಕೀಲಾ ಕಾವ, ಮನಪಾ ಸದಸ್ಯೆ, ಕದ್ರಿ ಉತ್ತರ ವಾರ್ಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts