ಸವದತ್ತಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ಕಟ್ಟೆ ಮೇಲೆ ಕುಳಿತಿದ್ದಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಬುಧವಾರ ತಹಸೀಲ್ದಾರ್ ಪ್ರಶಾಂತ ಪಾಟೀಲ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕಟ್ಟಿಮನಿ ಮಾತನಾಡಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯದ ಮೇಲೆ ಪದೇ ಪದೆ ಬಹಿಷ್ಕಾರ, ದೌರ್ಜನ್ಯ, ಕೊಲೆಗಳಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ದಲಿತ ಯುವಕನ ಬರ್ಬರವಾಗಿ ಹತ್ಯೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಆರೋಪಿತರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ವಿಭಾಗೀಯ ಅಧ್ಯಕ್ಷ ಶ್ರೀಕಾಂತ ಮಾದರ, ರಮೇಶ ಗಿಡ್ಡಪ್ಪಗೋಳ, ರಾಮವ್ವ ಕರೋಶಿ, ಲಕ್ಷ್ಮೀ ನಾಗಣ್ಣವರ, ಕಾಮಾಕ್ಷಿ ಬಾಜನವರ, ಬಾಳಪ್ಪ ಹರಿಜನ,
ಮೈಲಾರಿ ಬಡಕಲೂರ, ವೈ.ವೈ. ಕಾಳಪ್ಪನವರ ಇತರರು ಇದ್ದರು.