More

    ದ.ಕ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ, ಕೃಷ್ಯುತ್ಪನ್ನ ಒದ್ದೆ, ವರ್ಷಾರಂಭದಲ್ಲೇ ರೈತರಿಗೆ ಅಪಾರ ನಷ್ಟ

    ಮಂಗಳೂರು: ಹೊಸ ವರ್ಷದ ಆರಂಭದಲ್ಲೇ ದ.ಕ.ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಅಕಾಲಿಕ ಮಳೆ ಸುರಿದಿದೆ. ಒಣಗಲು ಹಾಕಿದ್ದ ಅಡಕೆ ಸಹಿತ ವಿವಿಧ ಕೃಷ್ಯುತ್ಪನ್ನಗಳು ಒದ್ದೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಘಟ್ಟದ ತಪ್ಪಲಿನ ತಾಲೂಕುಗಳಾದ ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ ಹಲವೆಡೆ ಮಳೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನ ತನಕ ಉತ್ತಮ ಬಿಸಿಲಿತ್ತು. ಸಾಯಂಕಾಲ ದಟ್ಟ ಮೋಡ ಕವಿದು ಉತ್ತಮ ಮಳೆ ಸುರಿದಿದೆ. ಕೆಲವೆಡೆ ಗುಡುಗು-ಮಿಂಚು ಮಳೆಗೆ ಜತೆಯಾಗಿತ್ತು. ಒಣಗಿದ್ದ ಸಣ್ಣ ತೋಡುಗಳಲ್ಲೂ ಮಳೆ ನೀರು ಹರಿದಿದೆ.

    ನಾಲ್ಕು ದಿನ ಮಳೆ ಸಾಧ್ಯತೆ: ಭಾನುವಾರ ಬೆಳಗ್ಗಿನಿಂದ ಸಾಯಂಕಾಲವರೆಗಿನ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ಅತ್ಯಧಿಕ 57 ಮಿ.ಮೀ, ಶಿಶಿಲದಲ್ಲಿ 46, ಧರ್ಮಸ್ಥಳ 45.5 ಮಿ.ಮೀ, ನಷ್ಟು ಮಳೆ ಸುರಿದಿದೆ. ಅರಸಿನಮಕ್ಕಿ 39.5, ಮುಂಡಾಜೆ 36, ನೆರಿಯ 26, ಉಜಿರೆ 39, ನಡ 37.5, ಕಲ್ಮಂಜ 35.5, ಸುಳ್ಯ 23, ನೂಜಿಬಾಳ್ತಿಲ 24.5, ಕಡ್ಯ ಕೋಣಾಜೆ 25 ಮಿ.ಮೀ. ಸಹಿತ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಕಡಬ ತಾಲೂಕಿನ ಬಲ್ಯ, ಕೋಡಿಂಬಾಳ, ನೂಜಿಬಾಳ್ತಿಲ, ಮೊದಲಾದೆಡೆ ಭಾನುವಾರ ಸಾಯಂಕಾಲ ಅರ್ಧ ಗಂಟೆ ಉತ್ತಮ ಮಳೆಯಾಗಿದೆ. ಮುಂದಿನ ನಾಲ್ಕು ದಿನ ಕರಾವಳಿಯ ಅಲ್ಲಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿನದ ಗರಿಷ್ಠ ತಾಪಮಾನ 34.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಅಡಕೆ ಒದ್ದೆ, ಕೃಷಿಕರಿಗೆ ಚಿಂತೆ: ಬಹುತೇಕ ಮನೆಗಳ ಅಂಗಳ, ತಾರಸಿಯಲ್ಲಿ ಅಡಕೆ ಒಣಗಲು ಹಾಕಲಾಗಿತ್ತು. ಭಾನುವಾರ ಕೆಲಸದವರೂ ರಜೆಯಲ್ಲಿದ್ದುದರಿಂದ, ಸುರಕ್ಷಿತವಾಗಿ ಎತ್ತಿಡಲು, ಟಾರ್ಪಾಲು ಮುಚ್ಚಲು ಸಾಧ್ಯವಾಗದೆ ನೀರು ಬಿದ್ದು ಹಾನಿಯಾಗಿದೆ. ಕಾಳುಮೆಣಸು, ಕೊಬ್ಬರಿ ಕೂಡ ನೀರು ಪಾಲಾಗಿದೆ. ಪ್ರಸ್ತುತ ಗೇರು, ಮಾವು, ಹಲಸು ಮರಗಳಲ್ಲಿ ಹೂ ಬಿಡುತ್ತಿದ್ದು, ನಿರಂತರ ಮಳೆಯಾದರೆ, ಫಸಲಿಗೂ ಸಮಸ್ಯೆಯಾಗಲಿದೆ. ಅಡಕೆ ಹಿಂಗಾರವೂ ಕೊಳೆಯುವ ಸಾಧ್ಯತೆಯಿದೆ ಎನ್ನುತ್ತಾರೆ ರೈತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts