More

    ದ.ಕ. ಜಿಲ್ಲಾ ರಸ್ತೆಗಳು ಮೇಲ್ದರ್ಜೆಗೆ : ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ

    ನಿಶಾಂತ್ ಬಿಲಂಪದವು, ವಿಟ್ಲ
    ರಸ್ತೆಗಳ ಉದ್ದ ಹಾಗೂ ಸಧೃಡ ಮೂಲಸೌಕರ್ಯ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಹಲವು ರಸ್ತೆಗಳನ್ನು ಸರ್ಕಾರ ಮೇಲ್ದರ್ಜೆಗೇರಿಸಿದೆ. ರಾಜ್ಯದ ಗ್ರಾಮೀಣ ಭಾಗದ 1,329 ರಸ್ತೆಗಳನ್ನು 15,510 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಯಾಗಿಯೂ, 226 ರಸ್ತೆಗಳನ್ನು 9,601 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ.

    ವಾಹನಗಳ ಸಾಂದ್ರತೆ, ಮಾರುಕಟ್ಟೆಗಳ ಕೂಡುವಿಕೆ, ಪ್ರೇಕ್ಷಣೀಯ ಸ್ಥಳಗಳ ಕೂಡುವಿಕೆ, ಕೈಗಾರಿಕಾ ಪ್ರದೇಶಗಳ ಲಭ್ಯತೆಗೆ ಅನುಗುಣವಾಗಿ ಗ್ರಾಮೀಣ ಭಾಗದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಶಾಸಕರ ಒನ್ ಟೈಮ್ ಇಂಪ್ರೂವ್‌ಮೆಂಟ್ ಹಾಗೂ ಪಿಎಂಜಿಎಸ್‌ವೈ ಯೋಜನೆಯಡಿ ನಿರ್ಮಾಣವಾದ ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

    ಈ ಮೂಲಕ ಹಲವಾರು ಜಿಲ್ಲಾ ಪಂಚಾಯಿತಿ ಸೇರಿ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ಸಿಗಲಿದೆ. ಈಗಾಗಲೇ ಅನುದಾನಗಳನ್ನು ತರಿಸಿಕೊಂಡು ಕೆಲಸವನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆಯಾದರೂ ತಾಂತ್ರಿಕ ಒಪ್ಪಿಗೆ ಸಿಗಬೇಕಾಗಿದೆ. ಅಭಿವೃದ್ಧಿಯಿಂದ ಮರೀಚಿಕೆಯಾದ ರಸ್ತೆಗಳೂ ಶಾಶ್ವತವಾಗಿ ದುರಸ್ತಿ ಕಾಣುವ ಕಾರ್ಯ ಮೇಲ್ದರ್ಜೆಗೇರಿದ ಕಾರಣದಿಂದ ನಡೆಯಲಿದೆ.

    ಮುರುವದಿಂದ ಪಕಳಕುಂಜ ಓಡಾಟ ಕಷ್ಟ: ಕುದ್ದುಪದವು- ಪಕಳಕುಂಜ ರಸ್ತೆಯಲ್ಲಿ ಕುದ್ದುಪದವಿನಿಂದ ಪೆರುವಾಯಿವರೆಗೆ ರಸ್ತೆ ವಿಸ್ತರಣೆಯಾಗಿದೆ. ಬಳಿಕ ಮುರುವ ತನಕ ಮರು ಡಾಂಬರುಗೊಂಡಿದೆ. ಆದರೆ ಅತೀ ಅಗತ್ಯವಿರುವ ತಾರಿದಳದಲ್ಲಿ ರಸ್ತೆ ಕುಸಿಯುವ ಹಂತಕ್ಕೆ ಹೋದರೂ ಅದಕ್ಕೆ ಕಾಯಕಲ್ಪ ಕೊಡುವ ಕಾರ್ಯ ನಡೆದಿಲ್ಲ. ಮುರುವ ಪಕಳಕುಂಜ ನಡುವೆ ಹಲವು ವರ್ಷಗಳಿಂದ ತೇಪೆ ಕಾರ್ಯ ಮಾಡದೆ ಹಳ್ಳಗಳನ್ನು ಹಾಗೇ ಬಿಡಲಾಗಿದೆ.

    ಯಾವೆಲ್ಲ ಮಾರ್ಗ: ಮಂಗಳೂರು ಭಾಗದ 6 ರಸ್ತೆ, ಬಂಟ್ವಾಳ ತಾಲೂಕಿನ 13 ರಸ್ತೆ, ಪುತ್ತೂರು ತಾಲೂಕಿನ 7 ರಸ್ತೆ, ಕಡಬ ತಾಲೂಕಿನ 4 ರಸ್ತೆ, ಬೆಳ್ತಂಗಡಿ ಭಾಗದ 16 ರಸ್ತೆ, ಸುಳ್ಯ ಭಾಗದ 13 ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಂಗಳೂರು ಭಾಗದ 3, ಪುತ್ತೂರು ಭಾಗದ 2, ಕಡಬ ಭಾಗದ ಒಂದು ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ.

    ಮಾನದಂಡಗಳ ಪರಿಗಣನೆ: ಡಾ.ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿಸಿದಂತೆ ಅತ್ಯಂತ ಹಾಗೂ ಅತೀ ಹಿಂದುಳಿದ ತಾಲೂಕುಗಳಲ್ಲಿ ರಸ್ತೆ ಜಾಲ ವಿಸ್ತರಣೆ, ರಾಜ್ಯ ಮಟ್ಟದ ಲೋಕೋಪಯೋಗಿ ರಸ್ತೆಗಳು 40 ಕಿ.ಮೀ./100 ಸ್ಕ್ವಾರ್ ಕಿ.ಮೀ. ವಿಸ್ತೀರ್ಣಕ್ಕಿಂತ ಕಡಿಮೆ ಇರುವ ತಾಲೂಕುಗಳಿಗೆ ಪ್ರಾತಿನಿಧ್ಯ ನೀಡಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಲಾಗಿದೆ.

    ಅನುದಾನ ಹಂಚಿಕೆ ವಿಚಾರದಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆ ಅಡಿಯಲ್ಲಿರುವ ರಸ್ತೆಗಳಿಗೆ ಮೊದಲ ಆದ್ಯತೆ ಇರುತ್ತದೆ. ಹೊಸದಾಗಿ ಇಲಾಖೆ ಸೇರ್ಪಡೆಯಾದ ರಸ್ತೆಗಳಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ತುರ್ತಾಗಿ ರಸ್ತೆಯಲ್ಲಿ ನೀರು ನಿಲ್ಲದ ಹಾಗೆ ಮಾಡಲಾಗುವುದು. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.
    -ಯಶವಂತ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts