More

    ದ.ಕ. ಜಿಲ್ಲೆಯಲ್ಲಿ ಕರೊನಾ ಪರಿಸ್ಥಿತಿ ಕೈಮೀರಿಲ್ಲ, ಹೆದರಬೇಕಿಲ್ಲ: ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

    ವೇಣುವಿನೋದ್ ಕೆ.ಎಸ್. ಮಂಗಳೂರು

    ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿರುವುದರಿಂದ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಶೇ.50ರಷ್ಟು ಮಂದಿಗೆ ರೋಗ ಲಕ್ಷಣಗಳಿಲ್ಲ, ಹಾಗಾಗಿ ಚಿಕಿತ್ಸೆ ನಿರ್ವಹಣೆ ಕಷ್ಟವಿಲ್ಲ, ಯಾರೂ ಭಯ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ಕೈ ಮೀರುವ ಹಂತವನ್ನೇನೂ ತಲುಪಿಲ್ಲ. ಮಕ್ಕಳು, ವೃದ್ಧರು ಹಾಗೂ ಬೇರೆ ಕಾಯಿಲೆ ಇರುವವರಿಗೆ ಕೋವಿಡ್ ಹರಡದಂತೆ ನೋಡಿಕೊಳ್ಳುವುದು ಮುಖ್ಯವಾಗಿ ಆಗಬೇಕಾಗಿದೆ.
    ಇದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟನುಡಿ. ಜಿಲ್ಲೆಯಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿ ಮೂರು ತಿಂಗಳು ಕಳೆದಿದ್ದು, ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವ ಸಂದರ್ಭ ಹೋರಾಟದ ಮುಂಚೂಣಿಯಲ್ಲಿರುವ ಡಿಸಿ ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡ ಪ್ರಮುಖ ಅಂಶಗಳು ಇಲ್ಲಿವೆ.

    * ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ?
    – ಜೂನ್‌ನಿಂದ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನಮ್ಮಲ್ಲಿ ಟೆಸ್ಟಿಂಗ್ ಜಾಸ್ತಿ ಆಗಿರುವುದು ಕಾರಣ. ಕಡ್ಡಾಯವಾಗಿ ನಾವು ಎಸ್‌ಎಆರ್‌ಐ(ತೀವ್ರ ಉಸಿರಾಟ ತೊಂದರೆ), ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ), ವಿದೇಶದಿಂದ ಮರಳಿದವರನ್ನು ಟೆಸ್ಟ್ ಮಾಡುತ್ತಿದ್ದೇವೆ. ಲಕ್ಷಣಗಳಿರುವವರನ್ನೇ ಟೆಸ್ಟ್ ಮಾಡುತ್ತಿರುವುದರಿಂದ ಪ್ರಕರಣ ಸಂಖ್ಯೆ ಏರಿರುವುದು ಸಹಜ. ಗಲ್ಫ್‌ನಿಂದ ಹಿಂದಿರುಗಿದವರಲ್ಲಿ ಶೇ.8-10ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ. ಅವರು ಬರುವುದು ಜಾಸ್ತಿಯಾದಂತೆ ಪ್ರಾಥಮಿಕ ಸಂಪರ್ಕ ಕೂಡ ಹೆಚ್ಚುತ್ತದೆ, ಹಾಗಾಗಿ ಪ್ರಕರಣ ಹೆಚ್ಚಿದೆ.

    * ಪರಿಸ್ಥಿತಿ ಕೈ ಮೀರಿದ ಹಾಗೆ ಉಂಟೇ?
    ಹಾಗೇನೂ ಇಲ್ಲ. ಗಾಬರಿಯಾಗಬೇಕಿಲ್ಲ. ಶೇ.50ರಷ್ಟು ಮಂದಿಗೆ ರೋಗ ಲಕ್ಷಣವಿಲ್ಲ, ಆರೋಗ್ಯವಾಗಿಯೇ ಇರುತ್ತಾರೆ. ಅಂತಹವರಿಗೆ ಹೋಮ್ ಐಸೋಲೇಶನ್ ಮಾಡಲಾಗುತ್ತಿದೆ. ನಮ್ಮಲ್ಲಿ ಕೋವಿಡ್ ಪ್ರತಿ ಸಾವನ್ನೂ ಆಡಿಟ್ ಮಾಡಲಾಗುತ್ತದೆ. ಸದ್ಯದ ವರದಿ ಪ್ರಕಾರ 28ರಲ್ಲಿ 5 ಕೇಸ್ ಮಾತ್ರ ಕೋವಿಡ್‌ನಿಂದಲೇ ಸತ್ತಿರುವುದು. ಉಳಿದೆಲ್ಲವೂ ಅಸೋಸಿಯೇಟೆಡ್ ಕೋವಿಡ್ ಸಾವು ಅಷ್ಟೇ. ನಮ್ಮದು ರೆಫರೆಲ್ ನಗರವಾದ್ದರಿಂದ ಹೊರಜಿಲ್ಲೆಗಳಿಂದ ಕೊನೇ ಹಂತದಲ್ಲಿ ಕರೆದುಕೊಂಡು ಬರುತ್ತಾರೆ, ಇಲ್ಲಿಗೆ ಬರುವಾಗ ರೋಗಿ ಸತ್ತಿರುತ್ತಾರೆ.

    * ಹಾಗಾದರೆ ನಮಗೆ ಸವಾಲೇನು?
    ಮುಖ್ಯವಾಗಿ ರೋಗ ಲಕ್ಷಣ ಇರುವವರು ತಕ್ಷಣ ಫೀವರ್ ಕ್ಲಿನಿಕ್ ಅಥವಾ ಆಸ್ಪತ್ರೆಗಳಿಗೆ ಬರುವಂತಾಗಬೇಕು. ಬೇಗ ರೋಗ ಪತ್ತೆಯಾದರೆ, ಟೆಸ್ಟ್ ಆದರೆ ಚಿಕಿತ್ಸೆ ನೀಡುವುದು ಸುಲಭ. ಸಾಯುವ ಪ್ರಮಾಣವೂ ಕಡಿಮೆಯಾಗಬಹುದು. ಇದಕ್ಕೆ ಜನರೇ ಸ್ಪಂದಿಸಬೇಕು. ಇನ್ನೊಂದು ವಿಚಾರವೆಂದರೆ ಯುವಜನರಿಂದ ವಯಸ್ಸಾದವರಿಗೆ, ಕಾಯಿಲೆ ಇರುವವರಿಗೆ ಹರಡದಂತೆ ನೋಡಬೇಕು.

    * ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ?
    ಲಾಕ್‌ಡೌನ್ ಹಿಂದೆ ಅಗತ್ಯವಿತ್ತು, ಈಗ ಇಲ್ಲ. ಯಾಕೆಂದರೆ ಲಾಕ್‌ಡೌನ್ ಮಾಡಿ ತೆರವು ಮಾಡಿದ ಕೂಡಲೆ ಗುಂಪು ಸೇರಿದರೆ ಮತ್ತೆ ಪಾಸಿಟಿವ್ ಸಂಖ್ಯೆ ಹೆಚ್ಚುತ್ತದೆ. ಜನರು ಇನ್ನು ಕೋವಿಡ್ ಜೊತೆಗೆ ಬದುಕಲು ಕಲಿಯಬೇಕು, ಕಟ್ಟುನಿಟ್ಟಾಗಿ ಮಾಸ್ಕ್, ಅಂತರ ಕಾಪಾಡುವುದು, ವಯಸ್ಸಾದವರನ್ನು ರಕ್ಷಿಸಿಕೊಳ್ಳಲು ಕಲಿತರೆ ಉತ್ತಮ.

    * ಮುಂದಿನೆರಡು ತಿಂಗಳು ಹೇಗೆ ನಿರ್ವಹಣೆ?
    ಮುಖ್ಯವಾಗಿ ರೋಗ ಲಕ್ಷಣ ಇರುವವರಿಗೆ ಬೇಕಾದಷ್ಟು ಬೆಡ್ಸ್, ಮೂಲಸೌಕರ್ಯ ಅಗತ್ಯವಿದೆ. ಆಗಸ್ಟ್ ವೇಳೆಗೆ ನಮಗೆ 1000 ಆಕ್ಸಿಜನ್ ಸಪೋರ್ಟ್ ಸಹಿತ ಹಾಸಿಗೆ, 500ರಷ್ಟು ಐಸಿಯು ಬೆಡ್ಸ್ ಬೇಕಾಗಬಹುದು, ಅದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅದೃಷ್ಟವಶಾತ್ ರೋಗಲಕ್ಷಣ ಇಲ್ಲದವರು ಬಂದರೆ ಆಸ್ಪತ್ರೆವಾಸ ಇರುವುದಿಲ್ಲ, ಅವರು ಮನೆ ಅಥವಾ ಕೋವಿಡ್ ಕೇರ್ ಹಾಸ್ಟೆಲ್‌ಗಳಲ್ಲಿ ಇರಬಹುದು.

    ಹೋಂ ಐಸೊಲೇಶನ್ ಆರಂಭ:  ಪಾಸಿಟಿವ್ ಬಂದು ಆರೋಗ್ಯವಾಗಿದ್ದವರಿಗೆ ಜಿಲ್ಲೆಯಲ್ಲೂ ಹೋಮ್ ಐಸೊಲೇಶನ್ ಶುರು ಮಾಡಿದ್ದೇವೆ. ಮನೆಯಲ್ಲಿ ಪ್ರತ್ಯೇಕ ಬಾತ್‌ರೂಂ, ಶೌಚಗೃಹ, ಟ್ರಾೃಕಿಂಗ್ ವ್ಯವಸ್ಥೆಗೆ ಒಪ್ಪುವುದು, ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವರನ್ನು ಷರತ್ತುಗಳಿಗೆ ಒಳಪಟ್ಟು ಹೋಂ ಐಸೊಲೇಶನ್ ಮಾಡಲಾಗುತ್ತದೆ. ಸದ್ಯ ನಮ್ಮಲ್ಲಿ ಸುಮಾರು 100 ಮಂದಿ ಈ ವ್ಯವಸ್ಥೆ ಬಳಸಿಕೊಂಡಿದ್ದಾರೆ. ಉಳಿದಂತೆ ತಾಲೂಕು ಮಟ್ಟದಲ್ಲಿ, ಹಾಸ್ಟೆಲ್‌ಗಳಲ್ಲೂ ಕೋವಿಡ್ ಕೇರ್ ಸೆಂಟರ್(ಸಿಸಿಸಿ) ಶುರು ಮಾಡಿದ್ದೇವೆ. ಮಂಗಳೂರಿನ ಕೆಪಿಟಿ ಹಾಸ್ಟೆಲ್, ಕೊಣಾಜೆ ಹಾಸ್ಟೆಲ್‌ಗಳನ್ನು ಸಿಸಿಸಿ ಮಾಡಲಾಗಿದ್ದು, ಎನ್‌ಐಟಿಕೆ ಹಾಸ್ಟೆಲ್ ಕೂಡ ಶೀಘ್ರ ಆಗುತ್ತದೆ. ಹಿಂದೆ ಪಾಸಿಟಿವ್ ಬಂದ ಎಲ್ಲರನ್ನೂ ಮಂಗಳೂರಿಗೆ ಕರೆತರಲಾಗುತ್ತಿತ್ತು. ಈಗ ವಿಕೇಂದ್ರೀಕರಣ ಮಾಡಲಾಗಿದ್ದು, ತಾಲೂಕು ಆರೋಗ್ಯಾಧಿಕಾರಿಗಳೇ ಅವರನ್ನು ಸ್ಥಳೀಯವಾಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ನೋಡಿಕೊಳ್ಳುತ್ತಾರೆ.

    ಸಮುದಾಯ ನೇತೃತ್ವದ ಅಭಿಯಾನ
    ಕೋವಿಡ್ ಮುಂದೆ ಹೆಚ್ಚಾದರೆ ಮನೆಗಳಲ್ಲೇ ಹೆಚ್ಚು ಮಂದಿ ಐಸೋಲೇಟ್ ಆಗಬೇಕಾದ ಪರಿಸ್ಥಿತಿ ಬರಬಹುದು. ಆಗ ಸ್ಥಳೀಯವಾಗಿ ಕಮ್ಯುನಿಟಿ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ರೀತಿ ನಗರದಲ್ಲೂ ವಾರ್ಡ್, ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ಈಗಾಗಲೇ ಸೂಚನೆ ಬಂದಿದೆ. ಸಮುದಾಯದ ನೇತೃತ್ವ ಪಡೆದರೆ ಕೋವಿಡ್ ನಿರ್ವಹಣೆ ಸುಲಭವಾಗುತ್ತದೆ.

    ಸಮುದಾಯಕ್ಕೆ ಬಂದಿದ್ದು ತಜ್ಞರು ಹೇಳಬೇಕು
    ಸಮುದಾಯಕ್ಕೆ ಹಬ್ಬಿದೆಯೇ ಎನ್ನುವುದನ್ನು ಸೋಂಕು ಶಾಸ್ತ್ರಜ್ಞರು ಗುರುತಿಸಬೇಕಾಗುತ್ತದೆ. ಅದಕ್ಕೆ ಹಲವು ಮಾನದಂಡಗಳಿವೆ. ನಮಗೆ ಹೇಳುವುದು ಕಷ್ಟ. ನಮ್ಮಲ್ಲಿ ರ‌್ಯಾಂಡಮ್ ಸ್ಯಾಂಪ್ಲಿಂಗ್ ಮಾಡುವಾಗ ಸಿಗುವ ಪಾಸಿಟಿವ್ ಕೇಸುಗಳ ಸಂಪರ್ಕದ ವಿಶ್ಲೇಷಣೆ ತುಸು ಕಷ್ಟವಾಗುತ್ತಿದೆ. ಅದಕ್ಕಾಗಿ ಈಗ ಖಾಸಗಿ ಮೆಡಿಕಲ್ ಕಾಲೇಜುಗಳಿಂದ ಸಮುದಾಯ ಔಷಧ ವಿಭಾಗದ ಇಂಟರ್ನ್ ವೈದ್ಯರು ಸ್ವಯಂಸೇವಕರಾಗಿ ನೆರವು ನೀಡುತ್ತಿದ್ದಾರೆ. ಪ್ರತಿ ಪ್ರಕರಣದ ಹಿಸ್ಟರಿ, ಫ್ಲೋಚಾರ್ಟ್ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts