More

    ದ.ಕ., ಉಡುಪಿ ತಲಾ 16 ಸ್ಯಾಂಪಲ್ ನೆಗೆಟಿವ್

    ಮಂಗಳೂರು: ಕರೊನಾ ಸಂಬಂಧಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರವೂ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡಬಂದಿಲ್ಲ. ಈ ನಿಟ್ಟಿನಲ್ಲಿ ಅವಿಭಜಿತ ದ.ಕ. ಜಿಲ್ಲೆ ನಿರಾಳವಾಗಿದೆ. ಆದರೆ ಪಕ್ಕದ ಕಾಸರಗೋಡಿನಲ್ಲಿ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
    ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 43 ಪ್ರಕರಣಗಳ ಗಂಟಲ ದ್ರವದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುರುವಾರ ಕಳುಹಿಸಿದ್ದ ಎಲ್ಲ 16 ಸ್ಯಾಂಪಲ್‌ಗಳೂ ನೆಗೆಟಿವ್ ವರದಿ ಬಂದಿದೆ.

    ಜಿಲ್ಲೆಯಲ್ಲಿ ಇದುವರೆಗೆ 282 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 230 ನೆಗೆಟಿವ್ ವರದಿ ಬಂದಿದ್ದು, 9 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರ 72 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 21 ಮಂದಿಯನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
    ದ.ಕ. ಜಿಲ್ಲೆಯಲ್ಲಿ ಇದುವರೆಗೆ ತಪಾಸಣೆಗೆ ಒಳಪಟ್ಟವರ ಸಂಖ್ಯೆ 38,518. ಈ ಪೈಕಿ 4727 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಶುಕ್ರವಾರ 630 ಮಂದಿ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿ ಮುಗಿಸಿದ್ದು, ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಸೌಜನ್ಯದಿಂದ ವರ್ತಿಸಿ
    ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಸಮಾಜದ ಆರೋಗ್ಯದ ಸಲುವಾಗಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಸಾರ್ವಜನಿಕರು ಅವರೊಂದಿಗೆ ಸೌಜನ್ಯ ಹಾಗೂ ಗೌರವದಿಂದ ಸಹಕರಿಸಬೇಕು. ಕಾರ್ಯಕರ್ತೆಯರಿಗೆ ಬೆದರಿಕೆ ನೀಡುವುದು, ಹಲ್ಲೆ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಹಾಲು ಉಚಿತ ವಿತರಣೆ
    ಸರ್ಕಾರದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರ ಕುಟುಂಬಕ್ಕೆ ಶುಕ್ರವಾರದಿಂದ ದ.ಕ. ಹಾಲು ಒಕ್ಕೂಟದಿಂದ ಉಚಿತವಾಗಿ ಹಾಲು ವಿತರಿಸಲು ಆರಂಭಿಸಲಾಗಿದೆ. ಆಯಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಮತ್ತು ಕೆಎಂಎಫ್ ಅಧಿಕಾರಿಗಳ ಸಮನ್ವಯದೊಂದಿಗೆ ಹಾಲು ಹಂಚಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಆಹಾರ ಪೂರೈಕೆಗೆ ಸಂಬಂಧಿಸಿ ಯಾರಾದರೂ ದೇಣಿಗೆ ನೀಡಲು ಇಚ್ಛಿಸಿದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್ ಜಿ.ಟಿ. (9739577979) ಅವರನ್ನು ಸಂಪರ್ಕಿಸಬಹುದು.

    ಉಡುಪಿಯಲ್ಲಿ 10 ಮಂದಿ ಡಿಸ್ಚಾರ್ಜ್
    ಉಡುಪಿ: ಜಿಲ್ಲಾಡಳಿತ ಶುಕ್ರವಾರ ಸ್ವೀಕರಿಸಿದ ಎಲ್ಲ 16 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಇಬ್ಬರು ಮಹಿಳೆಯರು ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. 10 ಮಂದಿ ವಾರ್ಡ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 15 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

    ಕೇರಳದಲ್ಲಿ ಒಂಬತ್ತು ಮಂದಿಗೆ ಖಚಿತ
    ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಮತ್ತೆ ಒಂಬತ್ತು ಮಂದಿಯಲ್ಲಿ ಕರೊನಾ ವೈರಸ್ ಖಚಿತಗೊಂಡಿದೆ. ಇವರಲ್ಲಿ ಕಾಸರಗೋಡಿನ ಏಳು ಮಂದಿ, ಕಣ್ಣೂರು ಹಾಗೂ ತೃಶ್ಯೂರ್‌ನ ತಲಾ ಒಬ್ಬರು ಒಳಗೊಂಡಿದ್ದಾರೆ.
    ವೈರಸ್ ಬಾಧಿತರಲ್ಲಿ ಮೂವರು ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡವರು ಸೇರಿದ್ದಾರೆ. ಚಿಕಿತ್ಸೆಯಲ್ಲಿದ್ದ 14 ಮಂದಿ ಗುಣಮುಖರಾಗಿದ್ದಾರೆ. ವೈರಸ್ ಗುಣಮುಖರಾಗಿ ಮನೆಗೆ ತೆರಳಿದವರನ್ನೂ ಒಳಗೊಂಡಂತೆ ರಾಜ್ಯದಲ್ಲಿ ಇದುವರೆಗೆ 295 ಮಂದಿಯಲ್ಲಿ ರೋಗ ಬಾಧೆ ಕಾಣಿಸಿಕೊಂಡಿದೆ.
    ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 10,256 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10,072 ಮಂದಿ ಮನೆ ಹಾಗೂ 184 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1325 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 951 ಮಂದಿಯ ಸ್ಯಾಂಪಲ್ ಫಲಿತಾಂಶ ಲಭಿಸಿದ್ದು, 823 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 374 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಶುಕ್ರವಾರ ಹೊಸದಾಗಿ 16 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ವರ್ಗಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts