More

    ದಕ್ಷಿಣ ಕನ್ನಡದಲ್ಲಿ ಕೊವಿಡ್‌ಗೆ ಎರಡನೇ ಬಲಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊವಿಡ್ ಪ್ರಕರಣ ವರದಿಯಾಗಿ ಒಂದು ತಿಂಗಳು ಪೂರ್ತಿಯಾಗಿದ್ದು, ಗುರುವಾರ ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ.
    ಏ.19ರಂದು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯ ಅತ್ತೆ(ಪತಿಯ ತಾಯಿ) 75 ವರ್ಷದ ವೃದ್ಧೆ ಗುರುವಾರ ಸಂಜೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಈ ಮೊದಲು ಪಾರ್ಶ್ವವಾಯು, ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆಯೇ ನಗರದ ಫಸ್ಟ್ ನ್ಯೂರೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಯಾಂಪಲ್ ಕೂಡಾ ಪಾಸಿಟಿವ್ ಇದ್ದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ವೃದ್ಧೆ ಮೃತರಾದರು. ಈ ಪ್ರಕರಣದಿಂದಾಗಿ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮೃತರಾದಂತಾಗಿದೆ. ಇವರ ದೂರದ ಸಂಬಂಧಿ ಇನ್ನೋರ್ವ ವೃದ್ಧೆಯೂ ಪಾಸಿಟಿವ್ ಇದ್ದು, ಆರೋಗ್ಯ ಯಥಾಸ್ಥಿತಿಯಲ್ಲೇ ಮುಂದುವರಿದಿದೆ, ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
    ಗುರುವಾರ 65 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಎನ್‌ಐಟಿಕೆ ಸುರತ್ಕಲ್‌ನಲ್ಲಿ 50 ಮಂದಿ, ಇಎಸ್‌ಐನಲ್ಲಿ 10 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ. 6073 ಮಂದಿ 28 ದಿನಗಳ ನಿಗಾವಣೆ ಪೂರ್ತಿಗೊಳಿಸಿರುತ್ತಾರೆ. 95 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಬಂದಿರುವ 214ಲ್ಲಿ 213 ನೆಗೆಟಿವ್ ಹಾಗೂ 1 ಪಾಸಿಟಿವ್ ಆಗಿರುತ್ತದೆ.
    39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ಇರಿಸಲಾಗಿದೆ. ತೀವ್ರ ಉಸಿರಾಟದ ತೊಂದರೆ ಇರುವ 14 ಪ್ರಕರಣ ವರದಿಯಾಗಿದ್ದು ಅದರಲ್ಲಿ 8ನ್ನು ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಿದೆ.

    ಫಸ್ಟ್ ನ್ಯೂರೋ ಕಂಟೈನ್ಮೆಂಟ್ ವಲಯ
    ಮೃತ ಮಹಿಳೆ ನಗರದ ಕಣ್ಣೂರು ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ 100 ಮೀಟರ್ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಆಗಿ ಜಿಲ್ಲಾಧಿಕಾರಿ ಘೋಷಿಸಿ ಆದೇಶ ಹೊರಡಿಸಿದ್ದಾರೆ.
    ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರ್ಕಾರಿ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಆಸ್ಪತ್ರೆಗೆ ಜೊತೆಗೆ ಎರಡು ಮನೆ, ಐದು ಅಂಗಡಿಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಅಲ್ಲಿಂದ 5 ಕಿ.ಮೀ. ಸುತ್ತಮುತ್ತಲಿನ ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್‌ವರೆಗೂ ಬಫರ್ ವಲಯ ಆಗಿ ಘೋಷಿಸಲಾಗಿದೆ. ಇದರ ವ್ಯಾಪ್ತಿಗೆ 42000 ಮನೆಗಳು, 1800 ಅಂಗಡಿ ಮತ್ತು ಕಚೇರಿಗಳು, 1,82,500 ಜನರು ಒಳಪಡುತ್ತಾರೆ.
    ಮಂಗಳೂರು ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯನ್ನು ಘಟನಾ ಕಮಾಂಡರ್ ಆಗಿ ನೇಮಕ ಮಾಡಲಾಗಿದ್ದು, ಅವರು ಈ ಕಂಟೈನ್ಮೆಂಟ್ ವಲಯದ ಒಟ್ಟು ಉಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
    ಕರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿರುವುದನ್ನು ತಡೆಗಟ್ಟಲು ತುರ್ತು ಯೋಜನೆಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಇದರ ಭಾಗವಾಗಿ, ಪಡೀಲು ಕಣ್ಣೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ಕೂಡಾ ‘ಸೂಪರ್‌ವೈಸ್ಡ್ ಐಸೋಲೇಶನ್ ಸೆಂಟರ್’ ಆಗಿ ಘೋಷಣೆ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಆಸ್ಪತ್ರೆಯೊಳಗಿನ ರೋಗಿಗಳೂ ಬಾಕಿ!
    ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊವಿಡ್‌ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆ ಕಂಟೈನ್‌ಮೆಂಟ್ ವಲಯವಾಗಿ ಘೋಷಿತವಾಗಿರುವುದರಿಂದ ಅದರೊಳಗೆ ಇರುವ ರೋಗಿಗಳೂ ಒಳಗೇ ಬಾಕಿಯಾದಂತಾಗಿದೆ. 14 ದಿನದಲ್ಲಿ ಅವರಿಗೆ ಕೊವಿಡ್ ಲಕ್ಷಣಗಳು ಕಾಣಿಸದೆ ಹೋದರೆ ಹಾಗೂ ಅವರ ನ್ಯೂರೊ ಸಮಸ್ಯೆಯ ಚಿಕಿತ್ಸೆಯೂ ಪೂರ್ಣವಾದರೆ ಮಾತ್ರವೇ ಅವರು ಬಿಡುಗಡೆಗೊಂಡು ಹೋಗಬಹುದು. ಆಸ್ಪತ್ರೆಗೆ ಇನ್ನು 14 ದಿನ ಯಾರೂ ಹೋಗಿಬರುವಂತಿಲ್ಲ.

    ಹೆದ್ದಾರಿ ಒನ್‌ವೇ
    ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಫಸ್ಟ್ ನ್ಯೂರೊ ಆಸ್ಪತ್ರೆಯ ಮುಂಭಾಗದಲ್ಲೇ ಹಾದುಹೋಗುವ ಕಾರಣ ಹೆದ್ದಾರಿಯನ್ನು ಏಕಮುಖ ಗೊಳಿಸಲಾಗಿದೆ. ಆಸ್ಪತ್ರೆ ಬದಿಯ ರಸ್ತೆಯನ್ನು ಕಣ್ಣೂರಿನಿಂದ ಪಡೀಲು ವರೆಗೆ ಬ್ಲಾಕ್ ಮಾಡಲಾಗಿದೆ. ಮಂಗಳೂರು-ಬಿ.ಸಿ.ರೋಡ್ ಕಡೆಗಿನ ಭಾಗದಲ್ಲೇ ಹೋಗುವ ಬರುವ ವಾಹನಗಳು ಸಂಚರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts