ಮುಖಕ್ಕೆ ಬಳಿದುಕೊಂಡ ಫೇಸ್​ ಮಾಸ್ಕ್ ತೆಗೆದು ಕನ್ನಡಿ ನೋಡಿದವನಿಗೆ ಕಾದಿತ್ತು ಶಾಕ್​..! ​

Face Mask
Published on

ಎಡಿನ್​ಬರ್ಗ್​: ಎಲ್ಲರ ನಡುವೆ ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ನಾನಾ ಪ್ರಯತ್ನ ಮಾಡುವುದನ್ನು ಸಹ ನೋಡಿದ್ದೇವೆ. ಆದರೆ, ಕೆಲವೊಮ್ಮೆ ತಿಳಿಯದೇ ಮಾಡುವ ಕೆಲಸ ಎಂಥಾ ಅವಾಂತರ ಸೃಷ್ಟಿಸುತ್ತದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.

ಇಡೀ ಮುಖಕ್ಕೆ ಪೀಲ್​-ಆಫ್ ಫೇಸ್​ ಮಾಸ್ಕ್​ ಹಚ್ಚಿಕೊಂಡ ವ್ಯಕ್ತಿಯೊಬ್ಬ ಕೊನೆಗೆ ಮಾಸ್ಕ್​ ತೆಗೆಯುವಾಗ ಕಣ್ಣಿನ ರೆಪ್ಪೆಗಳು ಮತ್ತು ಕಣ್ಣಿನ ಹುಬ್ಬು ಕೂಡು ಕಿತ್ತುಬಂದಿದ್ದು, ಅದನ್ನು ನೋಡಿದ ಆತನ ಪತ್ನಿ ಮತ್ತು ಮಗಳು ಕಣ್ಣಲ್ಲಿ ನೀರು ಬರುವಷ್ಟು ನಗೆಗಡಲಲ್ಲಿ ತೇಲಾಡಿದ್ದಾರೆ.

ಅಂದಹಾಗೆ ಈ ಅನಿರೀಕ್ಷಿತ ಪ್ರಸಂಗ ನಡೆದಿರುವುದು ಸ್ಕಾಟ್​ಲ್ಯಾಂಡ್​ನ ಇರ್ವಿನ್​ ನಗರದಲ್ಲಿ. ಇಲ್ಲಿನ ನಿವಾಸಿ ಜಾನ್​ ಮೀಚನ್​, ಫೇಸ್​ ಮಾಸ್ಕ್​ ಹಚ್ಚಿಕೊಳ್ಳಲು ಸಹಾಯ ಮಾಡುವಂತೆ ಪತ್ನಿ ಟ್ರೇಸಿ ಡೌಗಲ್​ ಸಹಾಯ ಕೇಳಿದ್ದಾರೆ. ಆದರೆ, ಆಕೆ ನಿರಾಕರಿಸಿದಾಗ ತಾನೇ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.

ಕಣ್ಣಿನ ರೆಪ್ಪೆ ಮತ್ತು ಹುಬ್ಬು ಬಿಟ್ಟು ಹುಷಾರಾಗಿ ಹಚ್ಚಿಕೊಳ್ಳುವಂತೆ ಪತ್ನಿ ಸಲಹೆ ನೀಡಿದರೂ ಅದನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿ ಇಡೀ ಮುಖಕ್ಕೆ ಕಪ್ಪು ಬಣ್ಣದ ಫೇಸ್​ ಮಾಸ್ಕ್​ ಹಚ್ಚಿದ್ದಾರೆ. ತುಂಬಾ ಹೊತ್ತು ಫೇಸ್​ ಮಾಸ್ಕ್​ ಮುಖದಲ್ಲಿ ಬಿಟ್ಟು ಸಮಯವಾದ ಬಳಿಕ ಅದನ್ನು ತೆಗೆಯಲು ಮುಂದಾದಾಗ, ಜಾನ್​ ಕೈಯಲ್ಲಿ ಸಾಧ್ಯವಾಗಿಲ್ಲ. ಬಳಿಕ ಪತ್ನಿ ಮತ್ತು ಮಗಳ ಸಹಾಯದಿಂದ ಮಾಸ್ಕ್​ ತೆಗೆದಿದ್ದಾರೆ.

ತೆಗೆಯುವಾಗ ಮಾಸ್ಕ್​​ ಜತೆಯಲ್ಲೇ ಕಣ್ಣಿನ ರೆಪ್ಪೆಗಳು ಮತ್ತು ಹುಬ್ಬು ಸಹ ಕಿತ್ತುಕೊಂಡು ಬಂದು ಇಡೀ ಮುಖ ಮರೂಭೂಮಿಯಂತೆ ಒಂದು ಕೂದಲಿಲ್ಲದೆ ಕಾಣುವುದನ್ನು ನೋಡಿ ಪತ್ನಿ, ಮಗಳು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅಲ್ಲದೆ, ತನ್ನ ಮುಖ ತಾನೇ ನೋಡಿಕೊಂಡ ಜಾನ್​ಗೆ ಒಂದು ರೀತಿಯ ಶಾಕ್​ ಜತೆಗೆ ಏನು ಮಾಡಬೇಕೆಂದು ತಿಳಿಯದೇ ಮಾಸ್ಕ್​ ತೆಗೆಯುವಾಗ ಆದ ನೋವಿನಿಂದಲೇ ಪತ್ನಿ, ಮಗಳನ್ನು ನೋಡಿ ಸುಮ್ಮನಾದ ವಿಡಿಯೋ ವೈರಲ್​ ಆಗಿದೆ.

ಕೊನೆಯಲ್ಲಿ ನೀರಿನಿಂದ ಮುಖವನ್ನು ಸಂಪೂರ್ಣ ತೊಳೆದುಕೊಂಡು ಕನ್ನಡಿಯಲ್ಲಿ ಮುಖವನ್ನು ನೋಡಿ ತುಂಬಾ ವಿಚಿತ್ರ ಅನಿಸಿತು. ಆದಷ್ಟು ಬೇಗ ಹುಬ್ಬು ಮತ್ತು ಕಣ್ಣಿನ ರೆಪ್ಪೆಗಳು ಬೆಳೆದರೆ ಸಾಕೆನಿಸಿತು ಎಂದು ಜಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮಿರರ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net