More

    ಕರೊನಾ ಸಂಕಷ್ಟದಲ್ಲಿರುವವರಿಗೆ ನೆರವಾಗಿ : ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ

    ಕುಣಿಗಲ್: ಕರೊನಾದಿಂದ ಮೃತಪಟ್ಟ ವ್ಯಕ್ತಿಗಳ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಪರಿಹಾರ ಹಣ ಕೊಡಿಸುವುದರ ಜತೆಗೆ ಆ ಕುಟುಂಬಗಳ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

    ಪಟ್ಟಣದ ಸಂಸದರ ಕಚೇರಿ ಆವರಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 2500 ಉಚಿತ ಲಸಿಕೆ ಹಾಗೂ ಕರೊನಾದಿಂದ ಮೃತರಾದವರ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರೊನಾ ಸೋಂಕಿಗೆ ತುತ್ತಾಗಿ ಕೆಲ ಮಂದಿ ಆಸ್ಪತ್ರೆಯಲ್ಲೇ ಮೃತಪಟ್ಟರೆ, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಕೊನೆಯುಸಿರೆಳೆದರು. ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕೂಲಿ ಕಾರ್ಮಿಕರು ಸೇರಿ ಮೊದಲಾದವರು ಮನೆಯಲ್ಲಿಯೇ ಮೃತಪಟ್ಟಿದ್ದಾರೆ, ಮನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಪಟ್ಟಿ ಸರ್ಕಾರದ ಪಟ್ಟಿಯಲ್ಲಿ ಸೇರಿಲ್ಲ, ಆ ಕುಟುಂಬಗಳಿಗೆ ಅನ್ಯಾಯವಾಗುತ್ತದೆ, ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಪರಿಹಾರಕ್ಕೆ ಅರ್ಜಿ ಹಾಕಿಸಬೇಕು ಎಂದರು.
    ಚಾಮರಾಜನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಕೆಪಿಸಿಸಿಯಿಂದ ತಲಾ ಒಂದು ಲಕ್ಷ ರೂಪಾಯಿಯಂತೆ 36 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು,

    2500 ಲಸಿಕೆ ಹಂಚಿಕೆ: ಸರ್ಕಾರದ ಸಹಾಯವಿಲ್ಲದೆ, ನಾನು, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ತೀರ್ಮಾನಿಸಿ ಇತರರ ಸಹಾಯದಿಂದ ಡಿಕೆಎಸ್ ಚಾರಿಟಬಲ್ ಟ್ರಸ್ಟ್‌ಗೆ ಹಣ ಹಾಕಿ ಆ ಮೂಲಕ ಕುಣಿಗಲ್ ತಾಲೂಕಿನ ಜನರಿಗೆ ಮೊದಲನೇ ಹಂತದಲ್ಲಿ 2500 ಲಸಿಕೆ ಹಾಗೂ ಎರಡನೇ ಹಂತದಲ್ಲಿ 2500 ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ, ಜೀವ ಇದ್ದರೆ ಜೀವನ, ಈ ದಿಸೆಯಲ್ಲಿ ಬಡವರ ಪ್ರಾಣ ರಕ್ಷಣೆಗಾಗಿ ಉಚಿತ ಲಸಿಕೆ ಹಾಕಲಾಗುತ್ತಿದೆ ಎಂದು ಡಿಕೆಶಿ ತಿಳಿಸಿದರು. ಕರೊನಾದಿಂದ ಮೃತಪಟ್ಟ ನಡೆಮಾವಿನಪುರ, ಕೊತ್ತಗೆರೆ ಪಾಳ್ಯ, ಪಟ್ಟಣದ ಕೋಟೆ ಹಾಗೂ ಆರ್.ಬ್ಯಾಡರಹಳ್ಳಿಯ ಮನೆಗಳಿಗೆ ಭೇಟಿ ನೀಡಿದ ಡಿಕೆಶಿ ತಲಾ ಹತ್ತು ಸಾವಿರ ರೂಪಾಯಿಯಂತೆ 40 ಸಾವಿರ ರೂಪಾಯಿ ವೈಯಕ್ತಿಕವಾಗಿ ನೀಡಿದರು.

    ಕೆಆರ್‌ಎಸ್‌ನಲ್ಲಿ ರಾಜಕಾರಣಿಗಳಿಗೆ ಏನು ಕೆಲಸ? : ಕೆಆರ್‌ಎಸ್ ಡ್ಯಾಂ ಸಂಬಂಧ ಸಂಸದೆ ಸುಮಲತಾ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಮಾತಿನ ಸಮರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಕೆಆರ್‌ಎಸ್ ಡ್ಯಾಂ ರಕ್ಷಣೆಗೆ ಒಂದು ಸಮಿತಿ ಇದೆ, ಪ್ರತಿ ತಿಂಗಳು ಆ ಸಮಿತಿ ಸಭೆ ಸೇರಿ ಚರ್ಚಿಸುತ್ತದೆ, ಇದನ್ನು ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಅಲ್ಲಿ ರಾಜಕಾರಣಿಗಳಿಗೆ ಏನು ಕೆಲಸ ಎಂದ ಡಿ.ಕೆ.ಶಿವಕುಮಾರ್, ದೊಡ್ಡವರ ವಿಚಾರ ನಮಗೆ ಬೇಡ ಎಂದರು.

    ಗಾಯಾಳುಗಳಿಗೆ ನೆರವಾದ ಡಿಕೆಶಿ : ರಾಜ್ಯ ಹೆದ್ದಾರಿ 33 ಟಿ.ಎಂ.ರಸ್ತೆ ಕೊತ್ತಿಪುರ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ಸಾಗಿಸಿ, ಅವರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ಕುಣಿಗಲ್ ತಾಲೂಕು ದಾಸನಪುರದ ಗೋವಿಂದರಾಜು ಎಂಬುವವರು ತಾಯಿಜತೆ ತುರುವೇಕೆರೆ ತಾಲೂಕು ಬೆಳ್ಳಳ್ಳಿ ಗ್ರಾಮಕ್ಕೆ ಹೋಗಿ ದಾಸನಪುರಕ್ಕೆ ಬರುತ್ತಿರುವಾಗ ಕೊತ್ತಿಪುರ ಜುಬೇರ್‌ಉಲ್ಲಾಖಾನ್ ಎಂಬುವವರು ಬೈಕ್‌ಗೆ ಅಡ್ಡ ಬಂದ ಕಾರಣ ಇಬ್ಬರೂ ಬಿದ್ದು ಗಾಯಗೊಂಡಿದ್ದರು. ಇದೇ ಮಾರ್ಗದಲ್ಲಿ ಹುಲಿಯೂರುದುರ್ಗಕ್ಕೆ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರು ನಿಲ್ಲಿಸಿ ಜತೆಯಲ್ಲೇ ಇದ್ದ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರಿಂದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳಿಸಿಕೊಟ್ಟರು.

    ಶಾಸಕ ಡಾ.ಎಚ್.ಡಿ.ರಂಗನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ರಂಗಸ್ವಾಮಿ, ಬಿ.ಎನ್.ಅರುಣ್‌ಕುಮಾರ್, ಕೆ.ಆರ್.ಜಯಲಕ್ಷ್ಮೀ, ರೂಪಿಣಿ, ಮಾಜಿ ಸದಸ್ಯ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ಮುಖಂಡರಾದ ಆಟಿಡ್ ನಾಗರಾಜು, ಕೆಂಪೀರೆಗೌಡ, ನಂಜೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts