More

    ದ.ಕ. ಲೋಕಸಭೆ ಪ್ರಬಲ ಅಭ್ಯರ್ಥಿಗೆ ‘ಕೈ’ ಕಸರತ್ತು, ಹೈಕಮಾಂಡ್‌ಗೆ ಮೂರು ಹೆಸರು ಶಿಫಾರಸು, ಸತತ ಸೋಲಿನಿಂದ ಹೊರಬರಲು ತಂತ್ರ

    ಪಿ.ಬಿ.ಹರೀಶ್ ರೈ ಮಂಗಳೂರು

    ದಕ್ಷಿಣ ಕನ್ನಡ ಲೋಕಸಭೆ (ಹಿಂದಿನ ಮಂಗಳೂರು ) ಕ್ಷೇತ್ರ ಕಳೆದ ಮೂರು ದಶಕದಿಂದ ಕಾಂಗ್ರೆಸ್‌ಗೆ ಗಗನ ಕುಸುಮವಾಗಿದೆ. ಸತತ ಎಂಟು ಬಾರಿ ಈ ಕ್ಷೇತ್ರದಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸಲಿದೆ.

    ಪ್ರಬಲ ಅಭ್ಯರ್ಥಿ ಆಯ್ಕೆಗಾಗಿ ಕೈ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಪಕ್ಷದ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಮಂಗಳೂರಿಗೆ ಆಗಮಿಸಿ ಎಲ್ಲ ಬ್ಲಾಕ್‌ಗಳ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭ ಹಲವು ನಾಯಕರು ಅಭ್ಯರ್ಥಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಮೂವರು ಹೆಸರು ಹೈಕಮಾಂಡ್‌ಗೆ ರವಾನೆಯಾಗಲಿದೆ ಎನ್ನುವ ಮಾಹಿತಿ ಇದೆ.

    * ಪ್ರಯೋಗ ವಿಫಲ: ಕಾಂಗ್ರೆಸ್‌ನ ಹಿರಿಯ ನಾಯಕರಾದ ಜನಾರ್ದನ ಪೂಜಾರಿ 5 ಬಾರಿ ಹಾಗೂ ವೀರಪ್ಪ ಮೊಯ್ಲಿ 2 ಬಾರಿ ಸೋಲು ಕಂಡ ಬಳಿಕ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಯುವನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಆದರೆ ಮೋದಿ ಅಲೆ ಪರಿಣಾಮ ಬಿಜೆಪಿ 2.74 ಲಕ್ಷ ಮತಗಳ ಅಂತರದ ಭರ್ಜರಿ ಜಯ ಸಾಧಿಸಿತ್ತು. ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವುದೇ? ಅಥವಾ ಹಿರಿಯ ನಾಯಕರಿಗೆ ಮಣೆ ಹಾಕುವುದೇ? ಎನ್ನುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚಿಂತನ ಮಂಥನ ಶುರುವಾಗಿದೆ.

    * ಸಮುದಾಯದ ಬೇಡಿಕೆ: ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಬಿ.ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್, ಎಂಎಲ್‌ಸಿ ಹರೀಶ್ ಕುಮಾರ್, ಮಾಜಿ ಎಂಎಲ್‌ಸಿ ಐವನ್ ಡಿಸೋಜ, ಹಿರಿಯ ಕಾರ್ಪೊರೇಟರ್ ನವೀನ್ ಡಿಸೋಜ, ರಕ್ಷಿತ್ ಶಿವರಾಮ್, ಸ್ಪೀಕರ್ ಯು.ಟಿ.ಖಾದರ್ ಸಹೋದರ ಡಾ.ಯು.ಟಿ.ಇಫ್ತಿಕರ್ ಆಲಿ.. ಹೀಗೆ ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಹೆಸರುಗಳಿವೆ. ಈ ಪೈಕಿ ಕೆಲವು ನಾಯಕರ ಹೆಸರುಗಳನ್ನು ಬ್ಲಾಕ್ ಅಧ್ಯಕ್ಷರು ಶಿಫಾರಸು ಮಾಡಿದ್ದರೆ, ಉಳಿದವರು ಸ್ಪರ್ಧಿಸುವ ಇಂಗಿತವನ್ನು ಸ್ವತಃ ಪಕ್ಷದ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್‌ನಿಂದ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆನ್ನುವ ಬೇಡಿಕೆ ಇದೆ. ಸುಳ್ಯ, ಪುತ್ತೂರು ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವ ಗೌಡ ಸಮುದಾಯದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವಕಾಶ ನೀಡಿಲ್ಲ. ಹಾಗಾಗಿ ಗೌಡ ಸಮುದಾಯವನ್ನು ಪರಿಗಣಿಸಬೇಕು ಎನ್ನುವ ಬೇಡಿಕೆಯೂ ಇದೆ.

    (((((ಕ್ವೋಟ್)))

    ರಾಜ್ಯದ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಪ್ರಕ್ರಿಯೆಗಳು ನಡೆಯುತ್ತಿವೆ. ದ.ಕ.ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜ.21ರಂದು ಪಕ್ಷದ ರಾಜ್ಯಮಟ್ಟದ ಸಭೆ ನಡೆಯಲಿದೆ. ಎಲ್ಲ ನಾಯಕರು ಒಂದಾಗಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ.

    ವಿನಯಕುಮಾರ್ ಸೊರಕೆ, ಮಾಜಿ ಸಚಿವ

    ಮಧು ಬಂಗಾರಪ್ಪ ಅವರು ಜಿಲ್ಲೆಯ ನಾಯಕರ ಅಭಿಪ್ರಾಯ ಪಡೆದು ಹೆಸರುಗಳನ್ನು ರಾಜ್ಯ ಸಮಿತಿಗೆ ಸಲ್ಲಿಸಿದ್ದಾರೆ. ಈ ಪೈಕಿ ಮೂವರ ಹೆಸರು ಶಿಫಾರಸು ಆಗಲಿದೆ. ಆಕಾಂಕ್ಷಿಗಳು ಇನ್ನು ಕೂಡ ಕೆಪಿಸಿಸಿಗೆ ತಮ್ಮ ಹೆಸರು ತಿಳಿಸಲು ಅವಕಾಶವಿದೆ. ಪಕ್ಷದ ಪ್ರತ್ಯೇಕ ತಂಡವೊಂದು ಜಿಲ್ಲೆಯಲ್ಲಿ ಸರ್ವೇ ನಡೆಸಿ ವರದಿ ಸಲ್ಲಿಸಲಿದೆ. ಈ ಪ್ರಕ್ರಿಯೆ ಮುಂದಿನ 2 ವಾರದಲ್ಲಿ ಪೂರ್ಣಗೊಳ್ಳಲಿದೆ.

    – ಹರೀಶ್ ಕುಮಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ದ.ಕ ಕ್ಷೇತ್ರದಲ್ಲಿ ಹೊಸಮುಖಗಳಿಗೆ ಅವಕಾಶ ನೀಡುವ ಪ್ರಸ್ತಾವನೆ ಪಕ್ಷದ ಮುಂದಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದೇನೆ. ಪಕ್ಷ ಯಾರಿಗೆ ಅವಕಾಶ ನೀಡಿದರೂ, ಗೆಲುವಿಗೆ ಶ್ರಮಿಸುವುದು ನಮ್ಮ ಕರ್ತವ್ಯ. ಚುನಾವಣೆಗೆ ಕನಿಷ್ಠ ಮೂರು ತಿಂಗಳ ಮೊದಲು ಅಭ್ಯರ್ಥಿ ಹೆಸರು ಘೋಷಿಸಿದರೆ ಕಾರ್ಯತಂತ್ರ ರೂಪಿಸಲು ಸುಲಭವಾಗಬಹುದು.

    ಪದ್ಮರಾಜ್.ಆರ್, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts