More

    ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸೈಕಲ್

    ಸೊರಬ: ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಹಾಗೂ ಶಾಲಾ ಕೊಠಡಿಗಳು ಶಿಥಿಲವಾಗಿರುವ ಬಗ್ಗೆ ಮಾಹಿತಿ ಪಡೆದಿದ್ದು ಹಂತ ಹಂತವಾಗಿ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು ಎಂದು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

    ಭಾನುವಾರ ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿ, ತಾಲೂಕಿನಲ್ಲಿ 32 ಸರ್ಕಾರಿ ಶಾಲೆಗಳಿಗೆ ಕಾಯಂ ಶಿಕ್ಷಕರಿಲ್ಲ. ಹಾಗೆಯೇ ಕೆಲವು ಶಾಲೆಗಳಿಗೆ ನೂತ ಕೊಠಡಿ ನಿರ್ಮಾಣದ ಅಗತ್ಯವಿದೆ. ತಿಂಗಳೊಳಗಾಗಿ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
    ಶಾಲಾ ಮಕ್ಕಳಿಗೆ ಎರಡು ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ಭಾಗ್ಯವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಚಿಂತನೆ ಸರ್ಕಾರಕಿದ್ದು ಬರುವ ಶೈಕ್ಷಣಿಕ ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಚಿಂತನೆ ನನಗಿದ್ದು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವಂತೆ ಬಿಗಿಗೊಳಿಸಲಾಗಿದೆ. ಸಚಿವ ಸ್ಥಾನ ಹೊಸ ಅನುಭವ. ಸಮಸ್ಯೆಗಳು ಬಹಳಷ್ಟು ಇವೆ. ಕಾಲಾವಕಾಶ ತಗೆದುಕೊಂಡು ಎಲ್ಲವನ್ನು ನಿಬಾಯಿಸುತ್ತೇನೆ ಎಂದು ಹೇಳಿದರು.
    ತಾಲೂಕಿನಲ್ಲಿಯೂ ಮಳೆ ಪ್ರಮಾಣ ಕಡಿಮೆ ಆಗಿದ್ದರ ಬಗ್ಗೆ ಮಾಹಿತಿ ಪಡೆದಿದ್ದು ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಬೆಳೆಗಳ ಬೆಳೆಯಲು ನೀರಿನ ಸಮಸ್ಯೆ ಎದುರಾಗಿದೆ. ಆದರೂ ಮಳೆ ಬರುವ ನಿರೀಕ್ಷೆ ಇದ್ದು ರೈತರು ಧೃತಿಗೆಡಬಾರದು. ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
    ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದ್ದು ಈಗಾಗಲೇ ಪಠ್ಯ ಪರಿಷ್ಕರಣೆ, ಶಕ್ತಿ ಯೋಜನೆ, ಗೃಹ ಜ್ಯೋತಿ, ಉಚಿತ ಪಡಿತರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಸದ್ಯದಲ್ಲಿಯೇ ಗೃಹಲಕ್ಷ್ಮೀ ಯೋಜನೆಯೂ ಅನುಷ್ಠಾನಗೊಳ್ಳಲಿದೆ. ಹಾಗೆಯೇ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಕಾಲಮಿತಿಯೊಳಗೆ ಜಾರಿಗೊಳಿಸಲಾಗುವುದು. ನೂತನ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಶಕ್ತಿ ಬಂದಿದ್ದಲ್ಲದೆ, ಮಹಿಳೆಯರು ತಮ್ಮ ಕುಟುಂಬದ ಜತೆಗೆ ದೇವಾಲಯ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ಸಾರಿಗೆ ಇಲಾಖೆ ಸೇರಿದಂತೆ ರಾಜ್ಯದ ಅಭಿವೃದ್ಧಿ ಸಹಕಾರಿಯಾಗಿದೆ. ಸರ್ಕಾರ ಸದ್ಯದಲ್ಲಿ 3 ಸಾವಿರ ಬಸ್ ಗಳನ್ನು ಖರೀದಿಸಲಿದೆ. ತಾಲೂಕಿನಲ್ಲಿಯೂ ಬಸ್ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದರು.
    ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಅಧಿವೇಶದಲ್ಲಿ ಆರೋಪ ಮಾಡುವ ಶಿಕಾರಿಪುರ ಕ್ಷೇತ್ರದ ಶಾಸಕ ವಿಜಯೇಂದ್ರ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದನ್ನು ಮರೆತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಪ್ರಣಾಳಿಕೆಯಲ್ಲಿ ಜನತೆಗೆ ಮಾತು ಕೊಟ್ಟಂತೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ನಾಡಿನ ಜನತೆ ಒಪ್ಪಿಕೊಂಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ವಕ್ರತೆ ಕಂಡುಬರುತ್ತಿದೆ ಎಂದು ಟೀಕೆ ಮಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.
    ನೂರಾರು ಜನರಿಂದ ಅಹವಾಲು ಸ್ವೀಕರಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಹುಸೇನ್ ಸರಕಾವಸ್, ಇಒ ಪ್ರದೀಪ್‌ಕುಮಾರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸಿಪಿಐ ಎಸ್.ರಾಜಶೇಖರ್, ಪಿಎಸ್‌ಐ ನಾಗರಾಜ್ ಇತರರಿದ್ದರು.

    ಸ್ವಂತ ಬಲದಲ್ಲಿ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬಂದಿಲ್ಲ, ಬರುವುದೂ ಇಲ್ಲ. ಶಾಸಕರನ್ನು ಖರೀದಿ ಮಾಡಿ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ನಮ್ಮನ್ನು ಹನಿಮೂನ್ ಸರ್ಕಾರ ಎಂದು ಟೀಕಿಸುವವರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಯೋಗ್ಯತೆ ಇಲ್ಲ. ಜೆಡಿಎಸ್ ಜತೆ ನೆಂಟಸ್ತಿಕೆ ಮಾಡಲು ಹೊರಟಿದ್ದಾರೆ.
    | ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts