More

    ಸಾಮಾನ್ಯ ಠಾಣೆಯಂತಾದ ಸೈಬರ್ ಕ್ರೖೆಂ ವಿಭಾಗ!

    ಹುಬ್ಬಳ್ಳಿ: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಅಂಕುಶ ಹಾಕಬೇಕಿದ್ದ ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೖೆಂ ಠಾಣೆ ಪೊಲೀಸರು ಮಾತ್ರ ಸಾಮಾನ್ಯ ಠಾಣೆಯವರಂತೆ ಬಂದೋಬಸ್ತ್ ಮತ್ತಿತರ ಕರ್ತವ್ಯದಲ್ಲಿ ಕಾಲ ಕಳೆಯುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

    2018ರಲ್ಲಿ ಆರಂಭವಾಗಿರುವ ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆ ಆರಂಭದಲ್ಲಿ ಯಾವುದೇ ಸೌಲಭ್ಯವಿಲ್ಲದೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಹಂತ ಹಂತವಾಗಿ ಸಿಬ್ಬಂದಿ, ಇತರೆ ಸೌಲಭ್ಯ ಕಲ್ಪಿಸಲಾಯಿತಾದರೂ ಈವರೆಗೆ ಹಳಿಗೆ ಬಂದಿಲ್ಲ. ಸಿಬ್ಬಂದಿಗೆ ಪೂರಕ ವಾತಾವರಣ ಇಲ್ಲ. ಲಾಕ್​ಡೌನ್​ನಿಂದ ಹಿಡಿದು ಒಂದರ ನಂತರ ಮತ್ತೊಂದು ಬಂದೋಬಸ್ತ್​ನಲ್ಲಿ ಸಿಬ್ಬಂದಿ ಕಳೆದು ಹೋಗಿದ್ದಾರೆ. ಸೈಬರ್ ಕ್ರೖೆಂ ಪ್ರಕರಣಗಳತ್ತ ತಿರುಗಿಯೂ ನೋಡದಂತಾಗಿದೆ.

    2018ರಲ್ಲಿ 14 ಸೈಬರ್ ಕ್ರೖೆಂ ಪ್ರಕರಣ ದಾಖಲಾಗಿದ್ದು, ಕೇವಲ ಒಂದನ್ನು ಭೇದಿಸಲಾಗಿತ್ತು. 2019ರಲ್ಲಿ 110 ಪ್ರಕರಣ ದಾಖಲಾಗಿದ್ದು, 4 ಪ್ರಕರಣ ಭೇದಿಸಲಾಗಿತ್ತು. 2020ರಲ್ಲಿ 118 ಪ್ರಕರಣ ದಾಖಲಾಗಿದ್ದು, ಒಂದೇ ಒಂದನ್ನೂ ಭೇದಿಸಲು ಸಾಧ್ಯವಾಗಿಲ್ಲ.

    ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲ ಸೈಬರ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಸೈಬರ್ ವಂಚಕರು ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಒಟಿಪಿ, ಕ್ಯೂಆರ್ ಕೋಡ್, ಒಎಲ್​ಎಕ್ಸ್, ಮ್ಯಾಟ್ರಿಮೋನಿ ಸೇರಿದಂತೆ ಹೊಸ ಹೊಸ ಆಪ್​ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಅಂಥವರನ್ನು ಮಟ್ಟ ಹಾಕಲು ಸೈಬರ್ ಕ್ರೖೆಂ ಪೊಲೀಸರು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಬೇಕಿದೆ. ಅಗತ್ಯ ತರಬೇತಿ ಪಡೆದುಕೊಂಡು, ಸೈಬರ್ ಖದೀಮರಿಗೆ ಅಂಕುಶ ಹಾಕಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಯೋಚಿಸಬೇಕಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

    ಆನ್​ಲೈನ್ ವಂಚಕರ ಬಗ್ಗೆ ಜನಜಾಗೃತಿ ಮೂಡಿಸುವ ಸೈಬರ್ ಕ್ರೖೆಂ ಠಾಣೆ ಪೊಲೀಸರಿಗೆ ತಮ್ಮ ಕರ್ತವ್ಯ ಮಾಡಲು ಅಗತ್ಯ ತರಬೇತಿ, ಸಮಯ ನೀಡಬೇಕು. ಪೂರಕ ವಾತಾವರಣ ಸೃಷ್ಟಿಸಬೇಕು. ಆ ಮೂಲಕ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ.

    ಸಿಬ್ಬಂದಿ ಕೊರತೆ

    ಕಾನೂನು ಸುವ್ಯವಸ್ಥೆ ಠಾಣೆಗಳಲ್ಲಿ 50ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಇರುತ್ತಾರೆ. ಆದರೆ, ಹು-ಧಾ ಅವಳಿ ನಗರದ ಏಕೈಕ ಸೈಬರ್ ಕ್ರೖೆಂ ಠಾಣೆಯಲ್ಲಿ ಕೇವಲ 12 ಸಿಬ್ಬಂದಿ ಇದ್ದಾರೆ. ಠಾಣೆಯ ಇನ್​ಸ್ಪೆಕ್ಟರ್ ಎಸ್.ಬಿ. ಮಾಳಗೊಂಡ ಐದಾರು ತಿಂಗಳು ಅನ್ಯ ಕರ್ತವ್ಯದ (ಒಒಡಿ) ಮೇರೆಗೆ ಹಳೇಹುಬ್ಬಳ್ಳಿ ಠಾಣೆಗೆ ತೆರಳಿದ್ದರು. ಇದೀಗ ಎಪಿಎಂಸಿ- ನವನಗರ ಠಾಣೆಯಲ್ಲಿ ಒಒಡಿ ಮೇಲಿದ್ದಾರೆ.ಹೀಗಾಗಿ, ಪ್ರಕರಣಗಳನ್ನು ಭೇದಿಸಲು ಅಡಚಣೆ ಉಂಟಾಗಿದೆ.

    ಧಾರವಾಡಕ್ಕೊಂದು ಠಾಣೆ ಬೇಕು

    10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಹು-ಧಾ ಅವಳಿ ನಗರದ ಏಕೈಕ ಸೈಬರ್ ಕ್ರೖೆಂ ಠಾಣೆ ಇದಾಗಿದೆ. ಸಣ್ಣಪುಟ್ಟ ಪ್ರಕರಣಕ್ಕೂ ಜನರು ಧಾರವಾಡದಿಂದ ಹುಬ್ಬಳ್ಳಿಗೆ ಅಲೆದಾಡಬೇಕಾಗಿದೆ. ಹಾಗಾಗಿ, ಧಾರವಾಡದಲ್ಲಿ ಪ್ರತ್ಯೇಕ ಸೈಬರ್ ಕ್ರೖೆಂ ಠಾಣೆ ಆರಂಭಿಸಬೇಕು ಎಂಬ ಕೂಗು ಕೇಳಿ ಬಂದಿದೆ.

    ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಇನ್​ಸ್ಪೆಕ್ಟರ್ ಒಒಡಿ ಮೇಲೆ ಎಪಿಎಂಸಿ- ನವನಗರ ಠಾಣೆಯಲ್ಲಿ ಹೆಚ್ಚುವರಿ ಕರ್ತವ್ಯದಲ್ಲಿದ್ದಾರೆ. ಸೈಬರ್ ಪ್ರಕರಣಗಳ ಪತ್ತೆ ಕಾರ್ಯದ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    | ಲಾಬುರಾಮ, ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts