More

    ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿ 95 ಲಕ್ಷ ಸುಲಿಗೆ ಮಾಡಿದ ಸೈಬರ್ ಕಳ್ಳರು

    ಬೆಂಗಳೂರು: ವಿದೇಶದಿಂದ ಡ್ರಗ್ಸ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿದ್ದೀರಿ ಎಂದು ಉದ್ಯಮಿಗೆ ಬೆದರಿಸಿ ಬರೋಬ್ಬರಿ 95 ಲಕ್ಷ ರೂ. ಅನ್ನು ಸೈಬರ್ ಕಳ್ಳರು ಸುಲಿಗೆ ಮಾಡಿದ್ದಾರೆ.

    ಸದಾಶಿವನಗರ ಸ್ಯಾಂಕಿ ರಸ್ತೆಯ ಉದ್ಯಮಿ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು. ಉದ್ಯಮಿ ನಗರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನವೆಂಬರ್ 8ರಂದು ಉದ್ಯಮಿ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ,  ಕೋರಿಯರ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು ನಿಮಗೆ ಒಂದು ಪಾರ್ಸೆಲ್ ಬಂದಿದೆ. ಅದನ್ನು ನಿಮಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದರಿಂದ ಕಸ್ಟಮ್ ಕೇರ್ ಸೆಂಟರ್‌ನಿಂದ ನಿಮಗೆ ಕರೆ ಬರಲಿದೆ ಎಂದು ಹೇಳಿ ಕರೆ ಸ್ಥಗಿತ ಮಾಡಿದ್ದಾರೆ.

    ಸ್ವಲ್ಪ ಹೊತ್ತಿಗೆ ಉದ್ಯಮಿಗೆ ಕರೆ ಮಾಡಿದ ಮತ್ತೊಬ್ಬ ಫಿಲಿಕ್ಸ್ ಮ್ಯಾಥ್ಯೂ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿಗೆ ಥೈಲ್ಯಾಂಡ್‌ನಿಂದ ಶಂಗ್ ಲಿನ್ ಎಂಬಾತ ಪಾರ್ಸೆಲ್ ಕಳುಹಿಸಿದ್ದಾರೆ. ಅದರಲ್ಲಿ 6 ರದ್ಧಾದ ಪಾಸ್‌ಪೋರ್ಟ್, 2.35 ಕೆಜಿ ಬಟ್ಟೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ದಾಖಲೆ ಪತ್ರಗಳು, 140 ಗ್ರಾಂ ಎಂಡಿಎಂಎ ಡ್ರಗ್ಸ್, 1 ಜತೆ ಶೂ, 2 ಪೆನ್ ಡ್ರೈವ್ ಮತ್ತು 1 ಲ್ಯಾಪ್‌ಟಾಪ್ ಇದ್ದು, ಇದನ್ನು ಕಳ್ಳ ಸಾಗಾಣಿಕೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ನಿಮ್ಮ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಕೊಡಲಾಗುವುದು. ಎ್ಐಆರ್ ಬೇಡ ಎಂದಾದರೇ ಈ ಕೂಡಲೇ ಹಣ ಕೊಡಬೇಕು. ಇಲ್ಲವಾದರೆ, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

    ಹೆದರಿದ ಉದ್ಯಮಿ, ಹಣ ಕೊಡಲು ಒಪ್ಪಿಕೊಂಡು ಸೈಬರ್ ವಂಚಕರ ಬ್ಯಾಂಕ್ ಖಾತೆಗೆ 65 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಖದೀಮರು ಬ್ಲ್ಯಾಕ್‌ಮೇಲ್ ಮುಂದುವರಿಸಿ, ಮತ್ತೆ 30 ಲಕ್ಷ ರೂ. ಅನ್ನು ಸುಲಿಗೆ ಮಾಡಿದ್ದಾರೆ. ಪದೇ ಪದೆ ಹಣಕ್ಕೆ ಬೇಡಿಕೆ ಒಡ್ಡಿದ್ದಾಗ ಅನುಮಾನಗೊಂಡ ಉದ್ಯಮಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts