More

    ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದ ಸೈಬರ್ ಆರೋಪಿ ಬಂಧನ

    ಮೈಸೂರು: ಪಿಜಿಯಲ್ಲಿ ಉಳಿದುಕೊಳ್ಳುವ ನೆಪದಲ್ಲಿ ಬೇರೆಯವ ಕ್ರೆಡಿಟ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಕದ್ದು ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದ ಸೈಬರ್ ಖದೀಮನನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.
    ತಿ.ನರಸೀಪುರ ತಾಲೂಕು ಮುದ್ದಬೀರನಹುಂಡಿಯ ಪ್ರದೀಪ್(31) ಬಂಧಿತನಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ವಿಜಯನಗರ, ಸರಸ್ವತಿಪುರಂ ಸೇರಿದಂತೆ ಇನ್ನಿತರೆಡೆ ಪಿಜಿಗಳಲ್ಲಿ ವಾಸವಿರುವ ಯುವಕರೊಂದಿಗೆ ಸ್ನೇಹ ಬೆಳೆಸಿ ಒಂದು ದಿನ ವಾಸ್ತವ್ಯ ಹೂಡುವುದಾಗಿ ನಂಬಿಸಿ ಅವರ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳನ್ನು ಕಳವು ಮಾಡಿಕೊಂಡು ಅದರ ಮೂಲಕ ಬ್ಯಾಂಕಿನಲ್ಲಿದ್ದ ಹಣವನ್ನು ದೋಚುತ್ತಿದ್ದ ಎನ್ನಲಾಗಿದೆ.
    ಪರಿಚಯಸ್ಥರಿಂದ ಸಿಮ್ ಮತ್ತು ಕ್ರೆಡಿಟ್ ಕಾರ್ಡ್ ಕಳವು ಮಾಡಿ 87 ಸಾವಿರ ರೂ. ದೋಚಿದ್ದ ಬಳಿಕ ವಿಜಯನಗರದಲ್ಲಿ ಪಿಜಿಯೊಂದರಲ್ಲಿ ಮತ್ತೊಬ್ಬರ ಕ್ರೆಡಿಟ್ ಕಾರ್ಡ ಮತ್ತು ಸಿಮ್ ಕಾರ್ಡ್ ಕಳವು ಮಾಡಿ ಬ್ಯಾಂಕ್ ಖಾತೆಯಿಂದ 2.21 ಲಕ್ಷ ರೂ. ಕದ್ದಿದ್ದ ಎನ್ನಲಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಈತನ ಬಂಧನಿಂದ ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣ, ಸರಸ್ವತಿಪುರಂ-1, ಬೆಂಗಳೂರಿನ ವಿಜಯನಗರ ಠಾಣೆ-1, ಕಲಾಸಿ ಪಾಳ್ಯ-1, ಜೆಸಿ ನಗರ-1 ಪ್ರಕರಣ ಪತ್ತೆಯಾಗಿವೆ. ಆರೋಪಿಯು 5.37 ಲಕ್ಷ ರೂ. ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ಮಾಗದರ್ಶನದಲ್ಲಿ ಸೆನ್ ಠಾಣೆ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಎಂ.ಎಲ್.ಸಿದ್ದೇಶ್, ಸಿಬ್ಬಂದಿ ಸಿ.ಸಂದೇಶ್ ಕುಮಾರ್, ಅನಿಲ್ ಇತರರು ಕಾರ್ಯಾಚರಣೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts