More

    ಜಗದಗಲ: ಸಾಂಸ್ಕೃತಿಕ ಬೃಹದ್​ಭಾರತ, ಭಾರತೀಯ ಸಾಮ್ರಾಜ್ಯವಲ್ಲ!

    ಜಗದಗಲ: ಸಾಂಸ್ಕೃತಿಕ ಬೃಹದ್​ಭಾರತ, ಭಾರತೀಯ ಸಾಮ್ರಾಜ್ಯವಲ್ಲ!

    ದಕ್ಷಿಣ ಚೀನಾದಲ್ಲಿ ವರ್ಷವರ್ಷವೂ ಪತ್ತೆಯಾಗುತ್ತಿರುವ ಅನೇಕ ಹಿಂದೂ ದೇವಾಲಯಗಳ ಅವಶೇಷಗಳು ಪ್ರಾಚೀನ ‘ಹಿಂದೂ ಚೀನಾ’ದ ಬಗ್ಗೆ ನಿರಾಕರಿಸಲಾಗದಷ್ಟು ಹೇರಳ ಆಧಾರಗಳನ್ನು ಒದಗಿಸುತ್ತವೆ. ನಂತರದ ಶತಮಾನಗಳಲ್ಲಿ ಬೌದ್ಧಧರ್ಮ ಭಾರತದಿಂದ ಚೀನಾವನ್ನು ಪ್ರವೇಶಿಸಿದ್ದಂತೂ ಚೀನೀ ಇತಿಹಾಸದಲ್ಲೊಂದು ಮಹತ್ವದ ಬೆಳವಣಿಗೆ.

    ಪ್ಲೇಟೋ ತನ್ನ ಹುಟ್ಟೂರು ಅಥೆನ್ಸ್ ಮತ್ತು ಪ್ರಬಲ ಸ್ಪಾರ್ಟಾ ಅಲ್ಲದೆ ತನ್ನ ಯೌವನದ ದಿನಗಳಲ್ಲಿ ಜ್ಞಾನಾರ್ಜನೆಗಾಗಿ ಪಶ್ಚಿಮದ ಸಿಸಿಲಿ, ಪೂರ್ವದ ಅನಟೋಲಿಯಾ (ಟರ್ಕಿ), ಇಸ್ರೇಲ್ ಮತ್ತು ಪರ್ಷಿಯಾ, ದಕ್ಷಿಣದ ಕ್ರೀಟ್ ಮತ್ತು ಈಜಿಪ್ತಿಗೂ ಭೇಟಿ ನೀಡಿದ್ದ ಮತ್ತು ಆ ದೇಶಗಳ ಸಮಾಜಗಳು ಮತ್ತು ರಾಜಕೀಯ ವ್ಯವಸ್ಥೆಗಳನ್ನು ಅಭ್ಯಸಿಸಿದ್ದ ಎಂದು ಹೇಳಲಾಗುತ್ತದೆ. ಆ ಎಲ್ಲ ಪ್ರವಾಸಗಳು ಮತ್ತು ಅಧ್ಯಯನಗಳು ‘ದ ರಿಪಬ್ಲಿಕ್’ನಲ್ಲಿ ವ್ಯಕ್ತವಾಗಿರುವ ಅವನ ಚಿಂತನೆಗಳನ್ನು ಸಹಜವಾಗಿಯೇ ಪ್ರಭಾವಿಸಿದ್ದವು ಎಂದು ನಂತರದ ಪಾಶ್ಚಿಮಾತ್ಯ ತತ್ತ್ವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಹೇಳಿದ್ದಾರೆ.

    ಪ್ಲೇಟೋ ತನ್ನ ‘ಜ್ಞಾನಾರ್ಜನಾ ತಿರುಗಾಟ’ದಲ್ಲಿ ಭಾರತಕ್ಕೂ ಭೇಟಿ ನೀಡಿದ್ದಿರಬಹುದು ಹಾಗೂ ಇಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಅಭ್ಯಸಿಸಿರಬಹುದು ಎಂದು ನನಗನಿಸುತ್ತದೆ. ಅವನ ಕಲ್ಪನೆಯ ‘ಆದರ್ಶ ರಾಜ್ಯ’ದ ನಾಗರಿಕರ ಮೂರು ವರ್ಗಗಳಾದ ಗಾರ್ಡಿಯನ್ನರು, ಸೈನಿಕರು, ರೈತರು ಮತ್ತು ಕುಶಲಕರ್ವಿುಗಳನ್ನು ಕ್ರಮವಾಗಿ ಭಾರತದ ವರ್ಣಾಶ್ರಮ ಧರ್ಮದ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ಶೂದ್ರರಿಗೆ ಹೋಲಿಸಬಹುದು. ಇಲ್ಲಿನ ವೈಶ್ಯವರ್ಗವನ್ನು ತಿರಸ್ಕರಿಸಿದ್ದಕ್ಕೆ ಅವನ ಅತಿಯಾದ ಸ್ಪಾರ್ಟಾ-ಪ್ರೇಮ ಮತ್ತು ಅದರಿಂದ ಮೂಡಿದ ಹಣ-ಆಸ್ತಿಯ ತಿರಸ್ಕಾರವೇ ಕಾರಣ. ಆದರಿಲ್ಲಿ ನಮಗೆ ಮುಖ್ಯವಾಗುವುದು ಭಾರತೀಯ ಸಾಮಾಜಿಕ ವ್ಯವಸ್ಥೆ ವೈಶ್ಯವರ್ಗಕ್ಕೂ ಇತರ ಮೂರರ ಜತೆ ಸಮಾನ ಸ್ಥಾನವನ್ನು ಕಲ್ಪಿಸಿತ್ತು ಎನ್ನುವುದು. ವ್ಯಾಪಾರವಹಿವಾಟುಗಳನ್ನು ವಿದೇಶೀಯರಿಗೆ ಬಿಟ್ಟುಬಿಡಬೇಕು ಎಂಬ ಪ್ಲೇಟೋನ ನಿಲುವು ಎಂತಹ ಆತ್ಮಹತ್ಯೀಯ ಆಗಬಲ್ಲುದು ಎಂಬುದನ್ನು ತಮ್ಮ ಅರ್ಥವ್ಯವಸ್ಥೆಯ ಜುಟ್ಟನ್ನು ಚೀನಾಗೆ ನೀಡಿ ಇಂದು ಸಂಕಷ್ಟದಲ್ಲಿ ಸಿಲುಕಿಹೋಗಿರುವ ಮತ್ತು ಅದರಿಂದ ಹೊರಬರಲು ಹೆಣಗಾಡುತ್ತಿರುವ ಯೂರೋಪಿಯನ್ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾದ ಉದಾಹರಣೆಗಳು ಸಾರುತ್ತಿವೆ. ಅಷ್ಟೇಕೆ ‘ದ ರಿಪಬ್ಲಿಕ್’ ಅನ್ನು ಪ್ಲೇಟೋ ರಚಿಸಿದ್ದು ತನ್ನ ನಲವತ್ತನೆಯ ವಯಸ್ಸಿನಲ್ಲಿ. ಎಂಬತ್ತರ ಮಾಗಿದ ವಯಸ್ಸಿನಲ್ಲಿ ಆತ ಬರೆದ ‘ದ ಲಾಸ್’ ಆತನ ಎಷ್ಟೋ ನಿಲುವುಗಳು ಬದಲಾಗಿರುವುದಕ್ಕೆ ಸಾಕ್ಷ್ಯಗಳನ್ನು ಒದಗಿಸಿದೆ. ರಿಪಬ್ಲಿಕ್​ನಲ್ಲಿ ನಾಗರಿಕರಿಗೆ ಆಸ್ತಿ, ಆರ್ಥಿಕ ವ್ಯವಹಾರಗಳು ಹಾಗೂ ಕುಟುಂಬವ್ಯವಸ್ಥೆಯನ್ನು ನಿರಾಕರಿಸಿದ್ದ ಪ್ಲೇಟೋ ‘ದ ಲಾಸ್’ ಕೃತಿಯಲ್ಲಿ ಅವೆಲ್ಲವನ್ನೂ ಸೀಮತ ಪ್ರಮಾಣದಲ್ಲಿಯಾದರೂ ನಾಗರಿಕರಿಗೆ ನೀಡುತ್ತಾನೆ.

    ವರ್ಣಾಶ್ರಮ ಧರ್ಮ ಸಮಾಜಕ್ಕೆ ವೈಶ್ಯವರ್ಗದ ಮಹತ್ವವನ್ನು ಗುರುತಿಸಿ ಮಾನ್ಯ ಮಾಡಿದ್ದು ಭಾರತೀಯ ದರ್ಶನಶಾಸ್ತ್ರ ನಾಲ್ಕು ‘ಪುರುಷಾರ್ಥ’ಗಳಲ್ಲಿ ‘ಅರ್ಥ’ ಅಂದರೆ ಸಂಪತ್ತಿನ ಗಳಿಕೆಯನ್ನೂ ಒಳಗೂಡಿಸಿದ್ದಕ್ಕೆ ಅನುಗುಣವಾಗಿಯೇ ಇದೆ. ಈ ಬಗೆಯಲ್ಲಿ ತತ್ತ್ವಶಾಸ್ತ್ರೀಯವಾಗಿ ಮತ್ತು ಸಾಮಾಜಿಕವಾಗಿ ಮಾನ್ಯಗೊಂಡ ಧನಾರ್ಜನೆ ಭಾರತೀಯ ಬದುಕಿನಲ್ಲಿ ಹಾಸುಹೊಕ್ಕಾದುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಇದಕ್ಕೆ ಸಂಬಂಧಿಸಿ ಸಮಕಾಲೀನ ಜಗತ್ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಪಾಲ್ ಬೈರೋಖ್ ಮತ್ತು ಆಂಗಸ್ ಮ್ಯಾಡಿಸನ್ ವ್ಯಾಪಕ ಹಾಗೂ ದೀರ್ಘಕಾಲೀನ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಹೇಳಿರುವ ವಿಷಯಗಳು ಆಸಕ್ತಿಕರವಾಗಿವೆ. ಕ್ರಿಸ್ತಶಕದ ಆರಂಭದಿಂದ ತೆಗೆದುಕೊಂಡರೂ ಹದಿನೈದನೇ ಶತಮಾನದವರೆಗೆ ಅಂದರೆ ಮೊಘಲ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬರುವವರೆಗೆ ಭಾರತ ಜಗತ್ತಿನ ಬಲಾಢ್ಯ ಅರ್ಥವ್ಯವಸ್ಥೆಯಾಗಿತ್ತು, ಆಗ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತದ ಪಾಲು ಶೇಕಡ 35ರಷ್ಟಿತ್ತು! ನಂತರದ ಮೂರು ಶತಮಾನಗಳಲ್ಲಿ ಜಾಗತಿಕ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಮೊದಲ ಸ್ಥಾನಕ್ಕಾಗಿ ಭಾರತ ಮತ್ತು ಚೀನಾಗಳ ನಡುವೆ ಹಗ್ಗಜಗ್ಗಾಟದ ಸ್ಥಿತಿ ನಿರ್ವಣವಾಯಿತು.

    ಇಂತಹ ಬಲಾಢ್ಯ ಅರ್ಥವ್ಯವಸ್ಥೆಯ ಅವನತಿ ಆರಂಭವಾದದ್ದು 19ನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ವಸಾಹತುಶಾಹಿ ಆರ್ಥಿಕ ನೀತಿಗಳಿಂದಾಗಿ. ಮುಂದಿನ ಒಂದೇ ಶತಮಾನದಲ್ಲಿ ಭಾರತದ ಅರ್ಥವ್ಯವಸ್ಥೆ ಅದೆಷ್ಟರ ಮಟ್ಟಿಗೆ ಕುಸಿದುಹೋಯಿತೆಂದರೆ ಕಳೆದ ಹದಿನೆಂಟು ಶತಮಾನಗಳಿಂದಲೂ ಜಾಗತಿಕ ವ್ಯಾಪಾರದಲ್ಲಿ ಶೇಕಡ 35ರಿಂದ 27ರ ನಡುವೆ ಓಲಾಡುತ್ತಿದ್ದ ಭಾರತದ ಪಾಲು ಇಪ್ಪತ್ತನೆಯ ಶತಮಾನ ಅರಂಭವಾಗುವ ಹೊತ್ತಿಗೆ ಶೇ.2.5ಕ್ಕಿಳಿಯಿತು ಮತ್ತು ಸ್ವಾತಂತ್ರ್ಯದ ಹೊತ್ತಿಗೆ ಶೇ.2ಕ್ಕಿಂತಲೂ ಕೆಳಗಿಳಿದುಹೋಯಿತು!

    ಗತ ಶತಮಾನಗಳಲ್ಲಿ ಭಾರತ ಜಾಗತಿಕ ಅಗ್ರಮಾನ್ಯ ಅರ್ಥವ್ಯವಸ್ಥೆಯಾಗಿದ್ದದ್ದು ಇಲ್ಲಿನ ಬಟ್ಟೆಗಳು ಮತ್ತಿತರ ದೈನಂದಿನ ಅತ್ಯಗತ್ಯ ವಸ್ತುಗಳಿಗೆ ಪಶ್ಚಿಮ ಏಷ್ಯಾ ಮತ್ತು ಯೂರೋಪಿನಲ್ಲಿ ಅತ್ಯಧಿಕ ಬೇಡಿಕೆ ಇದ್ದುದರಿಂದ ಮತ್ತು ಆ ಬೇಡಿಕೆಗಳನ್ನು ಪೂರೈಸುವಷ್ಟು ಪ್ರಮಾಣದಲ್ಲಿ ಆ ವಸ್ತುಗಳ ಉತ್ಪಾದನೆ ಈ ದೇಶದಲ್ಲಾಗುತ್ತಿದ್ದುದರಿಂದ. ಹದಿನೆಂಟನೆಯ ಶತಮಾನದಲ್ಲಿ ಭಾರತದ ಉತ್ಪಾದನೆ ಮತ್ತು ರಫ್ತಿನ ಪಟ್ಟಿಗೆ ಚಹಾ ಕೂಡ ಸೇರಿಕೊಂಡಿತು ಮತ್ತು ಅಮೆರಿಕದ ವಸಾಹತುಗಳು ಭಾರತದ ಪ್ರಮುಖ ಆರ್ಥಿಕ ಸಹಯೋಗಿಯಾದವು. ಆ ದಿನಗಳಲ್ಲಿ ಭಾರತದ ಜತೆ ವ್ಯಾಪಾರವ್ಯವಹಾರಗಳನ್ನು ನಡೆಸಿ ಸಂಪತ್ತು ಗಳಿಸಬೇಕು, ಅದಕ್ಕಾಗಿ ಭಾರತಕ್ಕೆ ಭೇಟಿ ನೀಡಬೇಕು ಎನ್ನುವುದು ಬಹುತೇಕ ಅಮೆರಿಕನ್ ಯುವಕರ ಕನಸಾಗಿತ್ತು ಎಂದು ಅಮೆರಿಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಪುಸ್ತಕಗಳು ಸಾರುತ್ತವೆ. ಅಂದು ಅಮೆರಿಕದ ‘ಮ್ಯಾರಿಯೇಜ್ ಮಾರ್ಕೆಟ್’ನಲ್ಲಿ ಭಾರತದಿಂದ ಹಿಂತಿರುಗಿದ ಯುವಕರಿಗೆ ಹೆಚ್ವಿನ ‘ಬೆಲೆ’ ಇತ್ತಂತೆ!

    ಹೀಗೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಪ್ರಮುಖವಾಗಿದ್ದುಕೊಂಡು ಹಲವು ಅರ್ಥಗಳಲ್ಲಿ ಅದನ್ನು ನಿಯಂತ್ರಿಸುವ ಸ್ಥಿತಿಯಲ್ಲಿ ಭಾರತ ಇದ್ದಿತಾದರೂ ತನ್ನ ಆರ್ಥಿಕ ಶಕ್ತಿಯನ್ನು ಸೇನಾ ಶಕ್ತಿಯಾಗಿ ಪರಿವರ್ತಿಸಿ, ಆ ಎರಡೂ ಶಕ್ತಿಗಳನ್ನು ಜಗತ್ತಿನಾದ್ಯಂತ ರಾಜಕೀಯ ಅಧಿಪತ್ಯ ಸ್ಥಾಪಿಸಲು ಈ ದೇಶ ಪ್ರಯತ್ನಿಸಲಿಲ್ಲ. ಬದಲಾಗಿ, ತನ್ನ ಧಾರ್ವಿುಕ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಹೊರದೇಶಗಳಿಗೆ ಕೊಡುಗೆಗಳಾಗಿ ಭಾರತ ನೀಡಿದ್ದನ್ನು ಇತಿಹಾಸ ದಾಖಲಿಸಿದೆ. ‘ಭಾರತ ತನ್ನ ಗಡಿಯಿಂದಾಚೆಗೆ ಒಬ್ಬನೇ ಒಬ್ಬ ಸೈನಿಕನನ್ನೂ ಕಳುಹಿಸದೆ ಚೀನಾವನ್ನು ಸಾಂಸ್ಕೃತಿಕವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು ಮತ್ತು ಎರಡು ಸಾವಿರ ವರ್ಷಗಳವರೆಗೆ ತನ್ನ ಅಧಿಪತ್ಯ ಸಾಗಿಸಿತು’ ಎಂದು 1891-1962ರ ಅವಧಿಯಲ್ಲಿ ಬದುಕಿದ್ದ ಗೌರವಾನ್ವಿತ ಚೀನೀ ತತ್ತ್ವಜ್ಞಾನಿ ಮತ್ತು ರಾಜತಂತ್ರಜ್ಞ ಹು ಶಿಹ್ ಹೇಳಿದ್ದಾರೆ.

    ತನ್ನ 7-8 ಸಾವಿರ ವರ್ಷಗಳ ಇತಿಹಾಸದಲ್ಲಿ ಭಾರತ ನೆರೆನಾಡುಗಳೊಂದಿಗೆ ವ್ಯವಹರಿಸಿದ ಬಗೆಯ ಸ್ಪಷ್ಟ, ಸುಂದರ ಚಿತ್ರಣವನ್ನು ಈ ಮಾತುಗಳು ನೀಡುತ್ತವೆ. ಮೊದಲಿಗೆ ಹಿಂದೂಧರ್ಮ, ನಂತರ ಬೌದ್ಧಧರ್ಮ ಹಾಗೂ ಅವುಗಳ ಮೆಲೆ ಆಧಾರಿತವಾದ ಜೀವನಮೌಲ್ಯಗಳು ಮತ್ತು ಕಲೆ, ಸಾಹಿತ್ಯಗಳು ಭಾರತದಿಂದ ಹೊರಟು ಪಶ್ಚಿಮದಲ್ಲಿ ಅಫ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಪೆಸಿಫಿಕ್ ಸಾಗರದ ತೀರದವರೆಗೆ ಹರಡಿಹೋದವು. ಚೀನಾದ ಬಗ್ಗೆ ಹೇಳುವುದಾದರೆ, ‘ಪೂರ್ಣವಾಗಿ ಸಿದ್ಧಗೊಂಡ ಸಂಸ್ಕೃತಿಯೊಂದನ್ನು ಚೀನಾ ಹೊರಗಿನಿಂದ ಪಡೆದುಕೊಂಡಿತು, ಅದು ವೈದಿಕ ಸಂಸ್ಕೃತಿಯಾಗಿತ್ತು’ ಎಂದು ಇತಿಹಾಸಕಾರರಾದ ಅರ್ನಾಲ್ಡ್ ಟಾಯ್್ನ ಮತ್ತು ಸರ್ ಎಲ್.ವೂಲಿ ಬರೆದಿದ್ದಾರೆ. ದಕ್ಷಿಣ ಚೀನಾದಲ್ಲಿ ವರ್ಷವರ್ಷವೂ ಪತ್ತೆಯಾಗುತ್ತಿರುವ ಅನೇಕ ಹಿಂದೂ ದೇವಾಲಯಗಳ ಅವಶೇಷಗಳು ಪ್ರಾಚೀನ ‘ಹಿಂದೂ ಚೀನಾ’ದ ಬಗ್ಗೆ ನಿರಾಕರಿಸಲಾಗದಷ್ಟು ಹೇರಳ ಆಧಾರಗಳನ್ನು ಒದಗಿಸುತ್ತವೆ. ನಂತರದ ಶತಮಾನಗಳಲ್ಲಿ ಬೌದ್ಧಧರ್ಮ ಭಾರತದಿಂದ ಚೀನಾವನ್ನು ಪ್ರವೇಶಿಸಿದ್ದಂತೂ ಚೀನೀ ಇತಿಹಾಸದಲ್ಲೊಂದು ಮಹತ್ವದ ಬೆಳವಣಿಗೆ. ಭಾರತೀಯ ಧಾರ್ವಿುಕ ನಂಬುಗೆಗಳನ್ನು ಮುಕ್ತವಾಗಿ ತಮ್ಮದಾಗಿಸಿಕೊಂಡ ಚೀನೀಯರು ಭಾರತವನ್ನು ‘ಚೀನಾದ ಗುರು’ ಎಂದು ಅಂಗೀಕರಿಸಿದರು.

    ಪೂರ್ವದ ಇತರ ದೇಶಗಳಾದ ಮ್ಯಾನ್ಮಾರ್, ಥಾಯ್ಲ್ಯಾಂಡ್, ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾಗಳು ಇತಿಹಾಸದ ವಿವಿಧ ಘಟ್ಟಗಳಲ್ಲಿ ಸಾಂಸ್ಕೃತಿಕವಾಗಿ ಭಾರತದ ಪ್ರಭಾವಕ್ಕೊಳಗಾದ ಕಾರಣ ಆಗ್ನೇಯ ಏಷ್ಯಾವನ್ನು ಐತಿಹಾಸಿಕವಾಗಿ ‘ಸಾಂಸ್ಕೃತಿಕ ಬೃಹದ್ಭಾರತ’ ಎಂದು ಗುರುತಿಸಲಾಗಿದೆ ಹಾಗೂ ಅವುಗಳಲ್ಲಿ ಭಾರತೀಯ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಇದರ ಬಗ್ಗೆ ಆ ದೇಶವಾಸಿಗಳಲ್ಲಿ ಹೆಮ್ಮೆಯಿದೆ. ಇದನ್ನು, 1958ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ ವಿಯೆಟ್ನಾಮೀ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೊದಲ ಪ್ರಧಾನಮಂತ್ರಿ ಹೊ ಚಿ ಮಿನ್ಹ್ ‘ಭಾರತೀಯ ಸಂಸ್ಕೃತಿ ಮತ್ತು ಬೌದ್ಧಧರ್ಮ ಪ್ರಾಚೀನ ಕಾಲದಲ್ಲೇ ವಿಯೆಟ್ನಾಂಗೆ ಕಾಲಿಟ್ಟವು. ಈ ಐತಿಹಾಸಿಕ ಸ್ನೇಹ ನಮ್ಮೆರಡು ನಾಡುಗಳನ್ನು ಯಾವಾಗಳೂ ಒಂದಾಗಿರಿಸಿವೆ’ ಎಂದು ನವದೆಹಲಿಯಲ್ಲಿ ಹೇಳುವ ಮೂಲಕ ವ್ಯಕ್ತಪಡಿಸಿದರು. ಇಂಥದೇ ಮಾತುಗಳನ್ನು ಇಂಡೋನೇಷ್ಯಾ ಸ್ವಾತಂತ್ರ್ಯ ಹೋರಾಟದ ಮುಂದಾಳು ಮತ್ತು ದೇಶದ ಮೊದಲ ಅಧ್ಯಕ್ಷ ಸುಕರ್ನೇ ಇನ್ನಷ್ಟು ಸ್ಪಷ್ಟವಾಗಿ ಹೇಳಿದ್ದಾರೆ. 1946 ಜನವರಿ 4ರಂದು ‘ದ ಹಿಂದೂ’ ಆಂಗ್ಲ ದೈನಿಕಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಹೀಗೆ ವಿವರಿಸಿದ್ದಾರೆ: ‘ನನ್ನ ಜನರಲ್ಲಿ ಪ್ರತಿಯೊಬ್ಬರ ರಕ್ತನಾಳಗಳಲ್ಲೂ ಹರಿಯುತ್ತಿರುವುದು ಭಾರತೀಯ ಪೂರ್ವಜರ ರಕ್ತ… ಎರಡು ಸಾವಿರ ವರ್ಷಗಳ ಹಿಂದೆ ನಿಮ್ಮ ದೇಶದ ಜನ ಸಹೋದರತ್ವದ ಪ್ರೀತಿಯನ್ನು ಹೊತ್ತು ಜಾವಾದ್ವೀಪ ಮತ್ತು ಸುವರ್ಣದ್ವೀಪಕ್ಕೆ ಬಂದರು. ಅವರು ಶ್ರೀವಿಜಯ, ಮಾತರಾಂ ಮತ್ತು ಮಾಯಾಪಹಿತ್​ನಂಥ ಶಕ್ತಿಶಾಲಿ ಸಾಮ್ರಾಜ್ಯಗಳ ಸ್ಥಾಪನೆಗೆ ಚಾಲನೆ ನೀಡಿದರು. ನೀವು ಈಗಲೂ ಪೂಜಿಸುತ್ತಿರುವ ದೇವರುಗಳನ್ನೇ ಪೂಜಿಸಲು ನಾವಾಗ ಕಲಿತೆವು ಮತ್ತು ಇಂದಿಗೂ ನಿಮ್ಮ ಸಂಸ್ಕೃತಿಯ ಪಡಿಯಚ್ಚಿನಂತೇ ಇರುವ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡೆವು. ನಂತರ ನಾವು ಇಸ್ಲಾಂನ ಕಡೆ ತಿರುಗಿದೆವು. ಆ ಧರ್ಮವನ್ನು ಸಹ ನಮ್ಮಲ್ಲಿಗೆ ತಂದವರು ಸಿಂಧೂನದಿಯ ಆಚೀಚಿನ ಕಡೆಯವರೇ.’ ಹೊ ಚಿ ಮಿನ್ಹ್ ಸ್ವತಃ ಕಮ್ಯೂನಿಸ್ಟರಾದರೆ, ಸುಕರ್ನೇ ಕಮ್ಯೂನಿಸಂ ಬಗ್ಗೆ ಅಗಾಧ ಒಲವಿದ್ದವರು ಎಂಬ ವಾಸ್ತವಗಳ ಹಿನ್ನೆಲೆಯಲ್ಲಿ ಭಾರತದ ಬಗ್ಗೆ ಆ ಇಬ್ಬರು ನಾಯಕರ ಮಾತುಗಳು ವಿಶೇಷ ಅರ್ಥ ಪಡೆದುಕೊಳ್ಳುತ್ತವೆ.

    ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾಗಳಲ್ಲಿ ಭಾರತೀಯ ಮತ್ತ ಚೀನೀ ಸಂಸ್ಕೃತಿಗಳು ಪ್ರಚಲಿತವಿರುವುದನ್ನು ಗುರುತಿಸಿ ಆ ಮೂರೂ ನಾಡುಗಳನ್ನು ಒಟ್ಟಿಗೆ ಸೇರಿಸಿ ‘ಇಂಡೋಚೀನಾ’ ಎಂದು ಯೂರೋಪಿಯನ್ನರು ಕರೆದರು. ಒಂದು ಕಡೆ ವಿಯೆಟ್ನಾಂ, ಮತ್ತೊಂದು ಕಡೆ ಲಾವೋಸ್ ಮತ್ತು ಕಾಂಬೋಡಿಯಾಗಳನ್ನು ಇಂದು ರಾಜಕೀಯವಾಗಿ ಪ್ರತ್ಯೇಕಿಸುವ ಗಡಿರೇಖೆ ಆಗ್ನೇಯ ಏಷ್ಯಾದಲ್ಲಿ ಚೀನೀ ಮತ್ತು ಭಾರತೀಯ ಸಂಸ್ಕೃತಿಗಳನ್ನು ವಿಭಾಗಿಸುವ ರೇಖೆ ಎಂದು ನನ್ನ ವಿದ್ಯಾರ್ಥಿ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಪಾಶ್ಚಿಮಾತ್ಯ ವಿದ್ವಾಂಸರ ಕೃತಿಗಳಲ್ಲಿ ಓದಿದ್ದೆ. ನಂತರದ ವರ್ಷಗಳಲ್ಲಿ ಆ ಅಭಿಪ್ರಾಯವನ್ನು ಬದಲಾಯಿಸಬೇಕಾದ ಅಗತ್ಯ ನನಗೆ ಕಾಣಬರತೊಡಗಿತು.

    ಚೀನೀಯರ ವಿರುದ್ಧ ವಿಯಟ್ನಾಮಿಯರ 2 ಸಾವಿರ ವರ್ಷಗಳ ದೀರ್ಘ ಸಂಘರ್ಷವನ್ನು ಇತಿಹಾಸ ದಾಖಲಿಸಿದೆ. ವಿಯೆಟ್ನಾಂ ಮೇಲೆ ಚೀನೀಯರು ಒಂದುಸಾವಿರ ವರ್ಷಗಳವರೆಗೆ ನೇರ ನಿಯಂತ್ರಣ ಹೊಂದಿದ್ದರು. ಹತ್ತನೆಯ ಶತಮಾನದಲ್ಲಿ ಚೀನೀಯರ ಸೇನಾ ಹಾಗೂ ರಾಜಕೀಯ ಹಿಡಿತದಿಂದ ವಿಯೆಟ್ನಾಂ ಹೊರಬಂದರೂ ನಂತರದ 900 ವರ್ಷಗಳಲ್ಲಿ ಈ ಪುಟ್ಟ ನಾಡಿನ ಮೇಲೆ ಚೀನೀಯರ ಹಿಡಿತ ಪರೋಕ್ಷವಾಗಿ ಸಾಗಿತ್ತು. ಅದು ಪೂರ್ಣವಾಗಿ ಅಂತ್ಯಗೊಂಡದ್ದು 1880ರ ದಶಕದಲ್ಲಿ ವಿಯೆಟ್ನಾಂ ಜತೆಗೆ ಲಾವೋಸ್ ಮತ್ತು ಕಾಂಬೋಡಿಯಾಗಳೂ ಸೇರಿ ಇಡೀ ಇಂಡೋಚೀನಾ ಫ್ರೆಂಚರ ವಶವಾದಾಗ. ಹೀಗೆ 2 ಸಾವಿರ ವರ್ಷಗಳವರೆಗಿನ ಚೀನೀ ಅಧಿಪತ್ಯ ವಿಯೆಟ್ನಾಮಿಗಳ ಬದುಕನ್ನು ಪ್ರಭಾವಿಸಿದ್ದು ಬಹುತೇಕ ಆಹಾರಪದ್ಧತಿಗಳಿಗೆ ಸಂಬಂಧಿಸಿದಂತೆ ಮಾತ್ರ.

    ವಿಯೆಟ್ನಾಂನ ಉದ್ದಗಲದಲ್ಲಿ ಅಸಂಖ್ಯ ಹಿಂದೂ ಮಂದಿರಗಳು ಪತ್ತೆಯಾಗಿವೆ. ಇಲ್ಲಿ ಪತ್ತೆಯಾಗಿರುವ ಶಿವಲಿಂಗವೊಂದು ಮೂರೂವರೆ ಟನ್ ಭಾರವಿದೆ! ಇಷ್ಟು ಬೃಹತ್ ಶಿವಲಿಂಗ ಭಾರತದಲ್ಲಿ ಎಲ್ಲಾದರೂ ಇದೆಯೇ ಎಂದು ನನಗೆ ತಿಳಿದಿಲ್ಲ. ಒಟ್ಟಿನಲ್ಲಿ ವಿಯೆಟ್ನಾಮೀಗಳು ನೆರೆಯ ಕಾಂಬೋಡಿಯನ್ನರು ಮತ್ತು ಲಾವೋಸಿಯನ್ನರಂತೇ ಧಾರ್ವಿುಕವಾಗಿ ಭಾರತದ ಪ್ರಭಾವಕ್ಕೊಳಗಾಗಿದ್ದರು ಎನ್ನುವುದು ಐತಿಹಾಸಿಕ ಸತ್ಯ ಮತ್ತು ಆ ನಾಡು ಚೀನೀ ಸಂಸ್ಕೃತಿಯ ವಿಸ್ತರಣ ಎಂದು ಪಶ್ಚಿಮದ ವಿದ್ವಾಂಸರು ಹೇಳಿದ್ದು ಸತ್ಯದೂರ.

    ಹೀಗೆ ಪೆಸಿಫಿಕ್ ತೀರದವರೆಗೆ ಸಾಂಸ್ಕೃತಿಕ ಬೃಹದ್ಭಾರತ ವಿಸ್ತಾರಗೊಂಡದ್ದು ಈ ದೇಶದ ಸಾಂಸ್ಕೃತಿಕ ವಕ್ತಾರರಿಂದಲೇ ಹೊರತು ವ್ಯಾಪಾರಿಗಳು ಮತ್ತು ಸೈನಿಕರಿಂದಲ್ಲ ಎಂದು ವಿಶದೀಕರಿಸಲು ಇಷ್ಟು ಹೇಳಬೇಕಾಯಿತು. ಈ ಪೂರ್ವತಯಾರಿಯೊಂದಿಗೆ, ಭಾರತವನ್ನು ಸೃಷ್ಟಿಸಿದವರೂ ಸಾಂಸ್ಕೃತಿಕ ವ್ಯಕ್ತಿಗಳು ಮತ್ತವರ ಸಾಧನೆಗಳೇ ಹಾಗೂ ಇಂದು ಈ ದೇಶವನ್ನು ಈಗಿನ ಗಡಿಗಳವರೆಗಾದರೂ ಉಳಿಸಿಕೊಳ್ಳಲು ಸಾಂಸ್ಕೃತಿಕ ವ್ಯಕ್ತಿಗಳೇ ಹೋರಾಡಬೇಕಾಗಿದೆ, ಅವರ ಹೋರಾಟ ಸಾಗಿರುವುದು ಮುಖ್ಯವಾಗಿ ತಮ್ಮದೇ ವರ್ಗದಲ್ಲಿನ ಅಡ್ಡದಾರಿಗಿಳಿದ ಕೆಲವರ ವಿರುದ್ಧ ಎಂಬುದನ್ನು ಮುಂದಿನವಾರ, ಲೇಖನದ ಅಂತಿಮ ಭಾಗದಲ್ಲಿ ವಿಶ್ಲೇಷಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts