More

    ಮಕ್ಕಳಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಿ: ಕಿಮ್ಮನೆ ರತ್ನಾಕರ್

    ತೀರ್ಥಹಳ್ಳಿ: ಮುಂದಿನ ಪೀಳಿಗೆಯು ರಾಷ್ಟ್ರೀಯ ಭಾವನೆಯೊಂದಿಗೆ ಎಲ್ಲರ ಜತೆ ಸಹಬಾಳ್ವೆಯಿಂದ ಬಾಳಲು ಸ್ವಾತಂತ್ರೃಪೂರ್ವದಲ್ಲಿ ಸ್ಥಾಪನೆಗೊಂಡ ಭಾರತ ಸೇವಾದಳದ ಕಾರ್ಯಕ್ರಮ ಪೂರಕ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
    ಪಟ್ಟಣದ ಕೋಳಿ ಕಾಲು ಗುಡ್ಡದಲ್ಲಿ ಶಿಕ್ಷಣ ಇಲಾಖೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಸಹಯೋಗದಲ್ಲಿ ಭಾರತ ಸೇವಾದಳದ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದರು.
    ಸ್ವಾತಂತ್ರೃ ಪೂರ್ವದಲ್ಲಿ ಸಾಕ್ಷರತೆ ಕೇವಲ ಶೇ.15 ಇದ್ದು ಪ್ರಸ್ತುತ ಶೇ.78 ಇದೆ. ಆದರೆ ಶಿಕ್ಷಣದಿಂದ ಸಮಾಜ ಬದಲಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇಂದು ಅಗತ್ಯವಿದೆ. ಹೀಗಾಗಿ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಭಾವನೆ ಮೂಡದಂತೆ ಪ್ರತಿಯೊಬ್ಬರೂ ಜಾಗೃತಿವಹಿಸಬೇಕು ಎಂದು ಹೇಳಿದರು.
    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಬೇರೆ ಬೇರೆ ಘೋಷಣೆಗಳ ಮೂಲಕ ಇಂದು ದೇಶವನ್ನು ಛಿದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶತಮಾನ ಪೂರೈಸಿರುವ ದೇಶಭಕ್ತ ಸಂಘಟನೆಯಾಗಿ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ಬಹಳ ಮುಖ್ಯವಾಗಿ ಮಕ್ಕಳಲ್ಲಿ ಜಾತಿ, ಧರ್ಮಗಳ ಚೌಕಟ್ಟನ್ನು ಮೀರಿ ಮಾನವೀಯ ಮೌಲ್ಯಗಳನ್ನು ಉದ್ದೀಪನ ಗೊಳಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ ಎಂದರು.
    ತಾಲೂಕಿನಾದ್ಯಂತ ಬಂದಿದ್ದ 600ಕ್ಕೂ ಹೆಚ್ಚಿನ ಮಕ್ಕಳು ಅತ್ಯಂತ ಶಿಸ್ತುಬದ್ಧವಾಗಿ ಭಾಗವಹಿಸಿದ್ದರು. ಪ್ರಭಾತ್ ಪೇರಿ ಮತ್ತು ಚಟುವಟಿಕೆ ಅಭ್ಯಾಸ ಹಾಗೂ ಕವಾಯತು ನಡೆಯಿತು. ವೇದಿಕೆಯಲ್ಲಿ ಭಾರತ ಸೇವಾದಳ ಘಟಕದ ತಾಲೂಕು ಅಧ್ಯಕ್ಷ ಕೆಸ್ತೂರು ಮಂಜುನಾಥ್, ಉಪಾಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಬಿಇಒ ವೈ.ಗಣೇಶ್, ಶಿವಮೂರ್ತಪ್ಪ, ಮಹಾಬಲೇಶ್ವರ ಹೆಗಡೆ, ಅಬ್ದುಲ್ ರೆಹಮಾನ್, ಪರ್ವೇಶ್ ಮತ್ತು ಕೆಳಕೆರೆ ಪೂರ್ಣೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts