More

    ಕಿಸಾನ್‌ ನರ್ಸರಿ ಪುನರಾರಂಭಕ್ಕೆ ಮನವಿ

    ಚಿತ್ರದುರ್ಗ: ಸಾಮಾಜಿಕ ಅರಣ್ಯ ಯೋಜನೆಯಡಿ ಈ ಹಿಂದಿನಂತೆ ಕಿಸಾನ್‌ ನರ್ಸರಿ ಪುನರಾರಂಭಿಸಬೇಕು. ಜಿಲ್ಲೆಯಲ್ಲಿ ಪಶುಸಂಗೋಪನೆ ಪ್ರಮುಖ ವೃತ್ತಿಯಾಗಿದ್ದು, ಕಾಲುಬಾಯಿ ರೋಗ ಸಂಬಂಧ 2 ಲಕ್ಷ ಲಸಿಕೆ ಲಭ್ಯ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಸಮಾಜದ ಕಾರ್ಯಕಾರಣಿ ಸಭೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ಬುಧವಾರ ಮನವಿ ರವಾನಿಸಲಾಯಿತು.

    ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 16,153 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅದರಲ್ಲಿ ಪ್ರಮುಖವಾಗಿ 14,242 ಹೆಕ್ಟೇರ್ ಈರುಳ್ಳಿ ಸಂಪೂರ್ಣ ನೆಲಕಚ್ಚಿದೆ. ಸರ್ವೇ ಕಾರ್ಯ ಮುಂದುವರೆದಿದ್ದು, ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಬೆಳೆಗೆ ವಿಮೆ ಸೌಲಭ್ಯ ನೀಡಲಾಗುವುದು. ಇದಕ್ಕಾಗಿ ಅಂತಿಮ ದಿನ ನಿಗದಿಪಡಿಸಿಲ್ಲ. ರೈತರು ಅರ್ಜಿ ನೀಡಿದರೆ ತೆಂಗಿನ ತೋಟ ಪರಿಶೀಲಿಸಿ ವಿಮೆ ಊರ್ಜಿತಗೊಳಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

    ಇಲಾಖೆಯಿಂದ 20 ಎಚ್‌ಪಿ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ಸಾಮಾನ್ಯ ವರ್ಗದವರಿಗೆ 75 ಸಾವಿರ ರೂ. ಹಾಗೂ ಎಸ್‌ಸಿ, ಎಸ್‌ಟಿ ವರ್ಗದವರಿಗೆ 1 ಲಕ್ಷ ರೂ. ಸಹಾಯಧನ ನೀಡಲಾಗುವುದು. ಮಲೆನಾಡು ಹೊರತುಪಡಿಸಿ ಅಡಿಕೆ ಬೆಳೆಗೆ ಯಾವ ರೀತಿ ಯೋಜನೆಗಳು ಜಿಲ್ಲೆಯ ಇಲಾಖೆ ವ್ಯಾಪ್ತಿಯಲ್ಲಿ ಇಲ್ಲ ಎಂದು ತಿಳಿಸಿದರು.

    ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್‌ಕುಮಾರ್ ಮಾತನಾಡಿ, ರೈತರ ಇ-ಕೆವೈಸಿ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲೆ ಶೇ. 78ರಷ್ಟು ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ಕೋಯ್ಲೇತರ ಬೆಳೆ ನಾಶಕ್ಕೆ ವಿಮೆ ಸೌಲಭ್ಯವಿದೆ. ಇದಕ್ಕಾಗಿ ರೈತರು ವೈಯಕ್ತಿಕವಾಗಿ ವಿಮೆ ಸೌಲಭ್ಯ ಪಡೆಯಬೇಕು. ಕಳೆದ ಬಾರಿ ಬೆಳೆ ವಿಮೆ ಸಂಬಂಧ 96 ಕೋಟಿ ರೂ. ಬಿಡುಗಡೆಯಾಗಿದ್ದು, ಜಿಲ್ಲೆಯ ರೈತರ ಖಾತೆಗೆ ಜಮಾ ಆಗಿದೆ ಎಂದರು.

    ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 45 ಸಾವಿರ ಕುಟುಂಬಗಳು ಕುರಿ ಸಾಕಾಣಿಕೆಯನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿವೆ. ಒಟ್ಟು 17.5 ಲಕ್ಷ ಕುರಿಗಳು ಜಿಲ್ಲೆಯಲ್ಲಿವೆ. ಸಾಂಕ್ರಾಮಿಕ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಅದಕ್ಕೆ ಸೂಕ್ತ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಟಿ.ಜಗದೀಶ್, ರಾಜ್ಯ ಪ್ರತಿನಿಧಿ ಎನ್.ಆರ್.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಟಿ.ರೇವಣ್ಣ, ನಿರ್ದೇಶಕರಾದ ಎಸ್.ರಮೇಶಪ್ಪ, ಹನ್ನಿ ಹನುಮಂತರೆಡ್ಡಿ, ಜಿ.ಟಿ.ತಿಪ್ಪೇಶ್, ಎಚ್.ಆರ್.ತಿಮ್ಮಯ್ಯ, ಎಂ.ಎಸ್.ನವೀನ್, ಬಿ.ಕೃಷ್ಣಮೂರ್ತಿ, ವಿಶ್ವನಾಥ್, ಜಿ.ಎಸ್.ರವಿಕುಮಾರ್ ಇತರರಿದ್ದರು.

    Attachments area

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts