More

    ರಾಜ್ಯ ಸರ್ಕಾರ ಬಹಳ ದಿನ ಉಳಿಯುವುದಿಲ್ಲ

    ಮಾಜಿ ಸಚಿವ ಸಿ.ಟಿ.ರವಿ ಭವಿಷ್ಯ | ಶ್ರೀನಿವಾಸಪುರ, ಮುಳಬಾಗಿಲು ತಾಲೂಕಿನಲ್ಲಿ ಬರ ಅಧ್ಯಯನ
    ರಾಜ್ಯ ಸರ್ಕಾರ ಬಹಳ ದಿನ ಉಳಿಯುವುದಿಲ್ಲ
    ಕೋಲಾರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿದರು. ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಎಸ್​.ಬಿ.ಮುನಿವೆಂಕಟಪ್ಪ, ಓಂಶಕ್ತಿ ಚಲಪತಿ ಇದ್ದರು.

    ಕೋಲಾರ: ರಾಜ್ಯದಲ್ಲಿ ಬರ ಆವರಿಸಿದ್ದು, 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಹೈಕಮಾಂಡ್​ ತಮಟೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿರುವುದರಿಂದ ಸರ್ಕಾರ ತಾಳ ತಪ್ಪಿದೆ. 5 ವರ್ಷ ಇರುತ್ತದೆ ಎಂದುಕೊಂಡಿದ್ದೆವು, ಆದರೆ ಬಹಳ ದಿನ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಭವಿಷ್ಯ ನುಡಿದರು.
    ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕಿನ ಹಳ್ಳಿಗಳಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಕೋಲಾರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಸರ್ಕಾರ ಇದ್ದಾಗ 7ಗಂಟೆ ತ್ರಿ ಫೇಸ್​ ವಿದ್ಯುತ್​ ನೀಡಿದ್ದೆವು. ಆದರೆ ಇವರಿಗೆ ಆ ಯೋಗ್ಯತೆ ಇಲ್ಲ. ಐದು ಗಂಟೆಯೂ ವಿದ್ಯುತ್​ ನೀಡುತ್ತಿಲ್ಲ. ಕರೆಂಟ್​ ಇಲ್ಲದ ಕಾರಣ ಬೆಳೆಗಳು ಹಾಳಾಗುತ್ತಿವೆ. ಶೇ.50 ಬೆಳೆಗಳಿಗೆ ನೀರಿಲ್ಲದೆ ಹಾಳಾಗಿವೆ ಎಂದರು.
    ನವೆಂಬರ್​ನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ. ಇನ್ನು ಮುಂದಿನ ದಿನಗಳ ಬಗ್ಗೆ ಭಯ ಕಾಡುತ್ತಿದೆ. ರೈತರ ನೆರವಿಗೆ ಬರಬೇಕಾಗಿರುವುದು ಸರ್ಕಾರಕ್ಕೆ ಅದರ ಚಿಂತೆಯೇ ಇಲ್ಲ. ರಾಜ್ಯ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ರೂ. ಖರ್ಚು ಮಾಡಿದ್ದಾರೆ. ಜತೆಗೆ ಸಭೆ ಸಮಾರಂಭಗಳಲ್ಲಿ ಹೆಜ್ಜೆ ಹಾಕುತ್ತಾ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
    ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳುವ ಮೂಲಕ ರೈತರನ್ನು ಅವಮಾನ ಮಾಡಿದ್ದಾರೆ. ಹೈದರಾಬಾದ್​ನಲ್ಲಿ ನೋಟು ಎಸೆದದ್ದನ್ನು ನೋಡಿ ಸಂತಸವ್ಯಕ್ತಪಡಿಸುತ್ತಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶವ್ಯಕ್ತಪಡಿಸಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಬೆಳೆಯನ್ನೇ ಬೆಳೆಯಬೇಡಿ ಎನ್ನುವ ಸಲಹೆ ರೈತರಿಗೆ ನೀಡುತ್ತಾರೆ. 2013ರಿಂದ 2018ರ ವರೆಗೆ 4256 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ. ಈಗ 3 ತಿಂಗಳ ಅವಧಿಯಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
    ರೈತರಿಗೆ ವಿಶ್ವಾಸ ತುಂಬುವುದಕ್ಕಾಗಿ ಬಿಜೆಪಿಯಿಂದ ಪ್ರವಾಸ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಬ್ರೇಕ್​ಫಾಸ್ಟ್​ ಮತ್ತು ಡಿನ್ನರ್​ನಲ್ಲಿ ಇಂಟ್ರೆಸ್ಟ್​ ಆಗಿದೆ. ಇವರ ಸಭೆಗಳು ಖುರ್ಚಿ ಉಳಿಸಿಕೊಳ್ಳಲು ಆಗಿದೆ ಎಂದರು. ಕೇಂದ್ರಕ್ಕೆ ಪರಿಹಾರ ಕೇಳಿದ್ದೀರಿ ಸರಿ, ಆದರೆ ನೀವೆಷ್ಟು ಬಿಡುಗಡೆ ಮಾಡಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರಲ್ಲದೆ, ಖಜಾನೆ ಕೀಲಿಯನ್ನು ಸುರ್ಜೇವಾಲ ಮತ್ತು ವೇಣುಗೋಪಾಲ್​ಗೆ ಕೊಟ್ಟಿದ್ದೀರಿ. ನಾವ್ಯಾರು ನಿಮ್ಮ ಖುರ್ಚಿ ಮೇಲೆ ಕಣ್ಣು ಇಟ್ಟಿಲ್ಲ. 2028ರಲ್ಲಿ ನಿಮ್ಮನ್ನು ಸೋಲಿಸಿ ಅಧಿಕಾರಕ್ಕೆ ಬರುತ್ತೇವೆ ಎಂದರು.

    ಡಿಎಫ್​ಒ ಮೇಲೆ ಕ್ರಮ

    ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಮರಗಳನ್ನು ಕಡಿಯುವುದು ಅಪರಾಧ, ಡಿಎಫ್​ಒ ಏಡುಕೊಂಡಲ ಕರ್ತವ್ಯದಲ್ಲಿರಲು ಅನರ್ಹರು. ಅವರನ್ನು ಡಿಸ್ಮಿಸ್​ ಮಾಡಬೇಕು ಎಂದು ಸಿಟಿ ರವಿ ಒತ್ತಾಯಿಸಿದರು.
    ರೈತರ ಸರ್ಕಾರವೇ ಅಲ್ಲ. ಏಡುಕೊಂಡಲ ಅವರು ಆಂಧ್ರಪ್ರದೇಶದಲ್ಲಿ ಈ ರೀತಿ ವರ್ತನೆ ಮಾಡಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು. ಇಲ್ಲಿಯ ಜನ ಸಜ್ಜನರು ಆದ್ದರಿಂದ ಏನೂ ತಪ್ಪನ್ನು ಎಸಗಿಲ್ಲ. ನೀವೇ ಕಟುಕನಂತೆ ವರ್ತನೆ ಮಾಡುತ್ತಿದ್ದೀರಿ ಎಂದರು. .ಬಿ.ಮುನಿವೆಂಕಟಪ್ಪ, ಓಂಶಕ್ತಿ ಚಲಪತಿ ಮುಂತಾದವರು ಇದ್ದರು.

    ಗಾಯದ ಮೇಲೆ ಬರೆ

    ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ. ನಾವು ಬರಪ್ರವಾಸ ಹೊರಟಿದ್ದು ನೋಡಿ ಅಲ್ಲೊಂದು ಇಲ್ಲೊಂದು ಪ್ರವಾಸ ಮಾಡುತಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆ ಎನ್ನುವಂತೆ ಮುಖ್ಯಮಂತ್ರಿಯಂತೆಯೇ ಎಲ್ಲ ಸಚಿವರೂ ಕೂಡ ಆಗಿದ್ದಾರೆ ಎಂದರು. ಬರದ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ವಿದ್ಯುತ್​ ಸಮಸ್ಯೆ ಕಾಡುತ್ತಿದೆ. ಪಂಪ್​ಸೆಟ್​ ಹಾಕಿಕೊಳ್ಳಲು ಲಂಚ ಕೊಡುವುದನ್ನು ಬಿಟ್ಟು ಎರಡು ಲಕ್ಷ ರೂಪಾಯಿ ಸರ್ಕಾರಕ್ಕೆ ಕಟ್ಟಬೇಕು ಎನ್ನುವ ಕಾನೂನು ತಂದಿದ್ದಾರೆ. ಇದು ಗಾಯದಮೇಲೆ ಬರೆ ಎಳದಂತೆ ಆಗಿದೆ ಎಂದರು.

    ಜಿಲ್ಲಾಡಳಿತದಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ

    ಶ್ರೀನಿವಾಸಪುರ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಜಿಲ್ಲಾಡಳಿತ, ಅರಣ್ಯ ಇಲಾಖೆ ಮಾಡಿದ್ದು, ಮಾನವಿಯತೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
    ತಾಲೂಕಿನ ಪಾತಪಲ್ಲಿ ಗ್ರಾಮದ ರೈತರ ತೋಟಗಳಿಗೆ ಬಿಜೆಪಿ ಬರ ಅಧ್ಯಯನ ತಂಡವು ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದರು. ಕಟುಕರು ಮಾಡಿರುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ನಿಮ್ಮ ಬಳಿಯಿರುವ ದಾಖಲೆಗಳನ್ನು ಸಲ್ಲಿಸಿ, ರೈತರಿಗೆ ನ್ಯಾಯ ದೊರಕಿಸುವ ತನಕ ಹೋರಾಟ ನಡೆಸಲಾಗುವುದು ಎಂದರು.
    ಸರ್ಕಾರವೇ ಸ್ವಾತಂತ್ರ್ಯಕ್ಕೂ ಮುನ್ನ ಕಾನೂನು ಪ್ರಕಾರ ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ಅರಣ್ಯ ಇಲಾಖೆಯವರು ಮರಗಳನ್ನು ಕಡಿಯದಂತೆ ದೂರು ನೀಡಿದ್ದರೂ ಸ್ವೀಕರಿಸದೆ ಪೊಲೀಸರು ತಪ್ಪು ಮಾಡಿದ್ದಾರೆ. ಕಾನೂನು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಲಾಗುವುದು ಎಂದು ಸಿಟಿ ರವಿ ಹೇಳಿದರು.
    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, 1942&-43 ಸಾಲಿನಲ್ಲಿ ರೈತರ ಹೆಸರಿಗೆ ಜಮೀನು ನೋಂದಣಿಯಾಗಿದೆ. ಅರಣ್ಯ ಇಲಾಖೆಯವರದ್ದೇ ಜಮೀನು ಆಗಿದ್ದರೆ ಬೆಸ್ಕಾಂ ಕಂಬಗಳನ್ನು ಯಾಕೆ ತೆರವು ಮಾಡಲಿಲ್ಲ. ಜಮೀನುಗಳಲ್ಲಿ ಕಂಬಗಳನ್ನು ಅಳವಡಿಸಲು ಕೇಂದ್ರದಿಂದ ಪರಿಹಾರ ನೀಡಲಾಗಿದೆ ಎಂದರು.
    ರೈತ ಚೌಡರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಜಮೀನು ಮಂಜೂರು ಆಗಿದೆ. ಅರಣ್ಯ ಇಲಾಖೆಯವರು ರಾತ್ರೋರಾತ್ರಿ ದೌರ್ಜನ್ಯದಿಂದ ಜಮೀನಿನೊಳಗೆ ಪ್ರವೇಶ ಮಾಡಿ, ಮಾವಿನ ಮರಗಳನ್ನು ನಾಶಪಡಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಮಯದಲ್ಲಿ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊರ ತಳ್ಳಿದರು ಎಂದು ಅಳಲು ತೋಡಿಕೊಂಡರು. ನಮಗೆ ಕಂದಾಯ ಇಲಾಖೆಯಿಂದ ಮಂಜೂರಾಗಿರುವುದಕ್ಕೆ ಸಮರ್ಪಕ ದಾಖಲೆಗಳಿವೆ. ಒತ್ತುವರಿ ತೆರವಿಗೂ ಮುನ್ನ ಕಾನೂನಿನ ಪ್ರಕಾರ ಪೂರ್ವ ನೋಟೀಸ್​ ನೀಡಿಲ್ಲ. ಇಲಾಖಾಧಿಕಾರಿಗಳ ವರ್ತನೆಗೆ ರೈತರು ಬೀದಿಪಾಲಾಗಬೇಕಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಹಿರಿಯ ಮುಖಂಡ ಎಸ್​.ಬಿ.ಮುನಿವೆಂಕಟಪ್ಪ, ರೈತ ಹೋರಾಟಗಾರ ಗೋಪಾಲಗೌಡ, ಮಾಜಿ ಶಾಸಕ ವೈ.ಸಂಪಂಗಿ, ಮುಖಂಡರಾದ ಕೃಷ್ಣಮೂರ್ತಿ, ರೋಣೂರು ಚಂದ್ರಶೇಖರ್​, ಪಾಳ್ಯ ಗೋಪಾಲ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts