More

     ಅಗ್ರಸ್ಥಾನಕ್ಕಾಗಿ ಡೆಲ್ಲಿ-ಸಿಎಸ್‌ಕೆ ಪೈಪೋಟಿ; 10ನೇ ಗೆಲುವಿನ ನಿರೀಕ್ಷೆಯಲ್ಲಿ ಎರಡು ತಂಡಗಳು

    ದುಬೈ: ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಸೋಮವಾರ ಎದುರಾಗಲಿವೆ. ಈಗಾಗಲೇ ಪ್ಲೇಆಫ್ ಖಾತ್ರಿ ಪಡಿಸಿಕೊಂಡಿರುವ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ರಾಜಸ್ಥಾನ ರಾಯಲ್ಸ್ ಎದುರು ಬೃಹತ್ ಮೊತ್ತ ಪೇರಿಸಿದರೂ ರಕ್ಷಿಸಿಕೊಳ್ಳಲು ವಿಫಲವಾದ ಎಂಎಸ್ ಧೋನಿ ಬಳಗ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಪ್ರಸಕ್ತ ಆವೃತ್ತಿಯಲ್ಲಿ ಪ್ರಬಲ ತಂಡಗಳಾಗಿ ಹೊರಹೊಮ್ಮಿರುವ ಡೆಲ್ಲಿ-ಸಿಎಸ್‌ಕೆ ನಡುವಿನ ಕದನ ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

    *ಸೇಡಿನ ತವಕದಲ್ಲಿ ಸಿಎಸ್‌ಕೆ
    ಅರಬ್ ನಾಡಿನಲ್ಲಿ 4 ಗೆಲುವಿನಿಂದ ಬೀಗುತ್ತಿದ್ದ ಸಿಎಸ್‌ಕೆ ತಂಡ ಶನಿವಾರ ಮೊದಲ ಸೋಲು ಕಂಡಿತು. ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅಬ್ಬರಕ್ಕೆ ಸಿಎಸ್‌ಕೆ ಬೌಲರ್‌ಗಳು ಸಂಪೂರ್ಣ ಮಂಕಾದರು. ಈಗಾಗಲೇ ಪ್ಲೇಆಫ್ ಖಚಿತ ಪಡಿಸಿಕೊಂಡಿದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದು ಸಿಎಸ್‌ಕೆಗೆ ದೊಡ್ಡ ಸವಾಲಾಗಿದೆ. ಮೊದಲ ಭಾಗದಲ್ಲಿ ಮುಂಬೈನಲ್ಲಿ ಆಡಿದ ಮೊದಲ ಹಣಾಹಣಿಯಲ್ಲಿ ಡೆಲ್ಲಿ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಅಂಬಟಿ ರಾಯುಡು ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ, ಅನುಭವಿ ಸುರೇಶ್ ರೈನಾ ಇನ್ನೂ ಫಾರ್ಮ್ ಕಂಡುಕೊಂಡಿಲ್ಲ. ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಸ್ ಹ್ಯಾಸಲ್‌ವುಡ್, ದೀಪಕ್ ಚಹರ್, ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್ ಎದುರಾಳಿಗೆ ಕಂಟಕವಾಗಬಲ್ಲರು. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಜಯ, 3 ಸೋಲುಗಳೊಂದಿಗೆ ಸಿಎಸ್‌ಕೆ ತಂಡ 18 ಪಾಯಿಂಟ್ಸ್ ಕಲೆಹಾಕಿದೆ.

    *ಅಗ್ರಸ್ಥಾನದ ಮೇಲೆ ಡೆಲ್ಲಿ ಕಣ್ಣು
    ಯುಎಇಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಜಯ, ಏಕೈಕ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಲೀಗ್‌ನಲ್ಲಿ ಅಗ್ರಸ್ಥಾನಿಯಾಗಿ ಪ್ಲೇಆಫ್ ಹಂತಕ್ಕೇರುವ ಗುರಿಯಲ್ಲಿದೆ. ಮುಂಬೈ ಇಂಡಿಯನ್ಸ್ ಎದುರು ತಿಣುಕಾಡಿ ಜಯ ಕಂಡ ಡೆಲ್ಲಿ ತಂಡಕ್ಕೆ ಆರಂಭಿಕರು ಸಾಥ್ ನೀಡಬೇಕಿದೆ. ಪೃಥ್ವಿ ಷಾ, ಶಿಖರ್ ಧವನ್ ಜೋಡಿಯಿಂದ ಆಕ್ರಮಣಕಾರಿ ನಿರ್ವಹಣೆ ಬರಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ತಂಡದ ಶಕ್ತಿಯಾಗಿದ್ದಾರೆ. ಕಗಿಸೊ ರಬಾಡ, ಅನ್ರಿಚ್ ನೋಕಿಯ, ಅಕ್ಷರ್ ಪಟೇಲ್ ಉತ್ತಮ ಲಯದಲ್ಲಿದ್ದಾರೆ. ಪ್ಲೇಆಫ್ ಹಂತಕ್ಕೆ ತಂಡದ ಸಂಯೋಜನೆ ದೃಷ್ಟಿಯಿಂದ ಕೆಲವೊಂದು ಬದಲಾವಣೆಯೊಂದಿಗೆ ಡೆಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ಮುಖಾಮುಖಿ: 24
    ಸಿಎಸ್‌ಕೆ: 15
    ಡೆಲ್ಲಿ ಕ್ಯಾಪಿಟಲ್ಸ್: 9
    ಹಿಂದಿನ ಮುಖಾಮುಖಿ: ಡೆಲ್ಲಿಗೆ 7 ವಿಕೆಟ್ ಜಯ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಪಂದ್ಯ ಆರಂಭ: ರಾತ್ರಿ 7.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts