More

    46 ಯೋಧರ ದೇಹ ಪ್ರವೇಶಿಸಿದ ಕರೊನಾ ಮಾರಿ- ಓರ್ವ ಬಲಿ: ಅಷ್ಟಕ್ಕೂ ಸೇನೆಯಲ್ಲಿ ನಡೆದಿದ್ದೇನು?

    ನವದೆಹಲಿ: ಭಾರತದ ಬಹುತೇಕ ಪ್ರದೇಶಗಳಲ್ಲಿ ಕರೊನಾ ಮಹಾಮಾರಿ ತನ್ನ ರೌದ್ರಾವತಾರವನ್ನು ಕಡಿಮೆ ಮಾಡುತ್ತ ಬಂದಿದ್ದರೂ. ಅಲ್ಲಲ್ಲಿ ಆತಂಕಕಾರಿ ಘಟನೆಗಳನ್ನು ಸೃಷ್ಟಿಸುತ್ತಲೇ ಇದೆ.

    ರಾಷ್ಟ್ರಪತಿ ಭವನ, ರಾಜ ಭವನ, ಲೋಕಸಭೆ ಹೀಗೆ ಎಲ್ಲಾ ಕಟ್ಟಡಗಳಿಗೂ ನುಸುಳಿ ಅಲ್ಲಿ ತನ್ನ ಕುರುಹು ಬಿಟ್ಟು ಹೋಗಿರುವ ಈ ವೈರಸ್​ ಇದೀಗ ಭಾರತೀಯ ಯೋಧರ ದೇಹಕ್ಕೂ ದಾಳಿ ಇಡಲು ಶುರು ಮಾಡಿದೆ. ದೆಹಲಿಯ ಸಿಆರ್’ಪಿಎಫ್ ​ ಬೆಟಾಲಿಯನ್​ ಪಡೆಯ 46 ಯೋಧರಿಗೆ ಸೋಂಕು ಹಚ್ಚಿಸಿರುವ ಕರೊನಾ, ಓರ್ವ ಯೋಧನ ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಯೋಧರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಈ ಯೋಧರೆಲ್ಲ ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್’ಪಿಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರು.

    ಕರೊನಾ ಸೋಂಕಿಗೆ ಬಲಿಯಾಗಿರುವವರು ಅಸ್ಸಾಂನ 55 ವರ್ಷದ ಸಬ್​ ಇನ್ಸ್​ಪೆಕ್ಟರ್​ ಮೊಹಮ್ಮದ್​ ಇಕ್ರಾನ್​ ಹುಸೇನ್. ಕೆಲ ದಿನಗಳಿಂದ ಸಫ್ದರ್ಜುಂಗ್ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಏಪ್ರಿಲ್ 17 ರಂದು ಇವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಬಳಿಕ ಏಪ್ರಿಲ್ 21 ರಂದು ವೈರಸ್ ಇರುವುದಾಗಿ ದೃಢಪಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಸೋಂಕು ತಗುಲಿದ್ದು ಹೇಗೆ?
    ಸೇನೆಯ ವೈದ್ಯಕೀಯ ವಿಭಾಗದಲ್ಲಿರುವ ನರ್ಸಿಂಗ್​ ಅಸಿಸ್ಟೆಂಟ್​ ಒಬ್ಬರು ರಜೆಯ ಮೇಲೆ ಊರಿಗೆ ತೆರಳಿದ್ದರು. ಊರಿಗೆ ತೆರಳುವ ಮುನ್ನ ಅವರು ಕಾಶ್ಮೀರದ ಕುಪ್ವಾರಾದಲ್ಲಿ ನಿಯೋಜನೆಯಲ್ಲಿದ್ದರು. ರಜೆ ಮುಗಿಸಿ ಬಂದ ಅವರನ್ನು 31ನೇ ಬೆಟಾಲಿಯನ್ ಪಡೆಯಲ್ಲಿ ಸೇವೆಗೆ ನಿಯೋಜನೆ ಮಾಡಲಾಗಿತ್ತು. ಊರಿಗೆ ಹೋಗಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಏಪ್ರಿಲ್​ 7ರಿಂದ 16ರವರೆಗೆ ಅಂದರೆ 10 ದಿನಗಳ ಕಾಲ ಅವರು ಕ್ವಾರಂಟೈನ್​ನಲ್ಲಿದ್ದರು. ಅಲ್ಲಿ ಅವರಿಗೆ ಯಾವುದೇ ಜ್ವರ ಅಥವಾ ಇನ್ನಾವುದೇ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ.

    ಆದ್ದರಿಂದ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರನ್ನು ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿತ್ತು. ಆತಂಕಗೊಂಡಿದ್ದ ಅಧಿಕಾರಿಗಳು ಇವರ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಮೊಹಮ್ಮದ್​ ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು.

    ಡಯಾಬಿಟೀಸ್​, ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ಮೊಹಮ್ಮದ್​ ಅವರು ಈ ಸೋಂಕಿಗೆ ಬೇಗನೆ ಬಲಿಯಾಗಿಬಿಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಂಕು ದೃಢಪಟ್ಟ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಯೋಧರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts