More

    ಬೆಳೆ ಸಮೀಕ್ಷೆ ದೇಶಾದ್ಯಂತ ವಿಸ್ತರಣೆಗೆ ಚಿಂತನೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ರಾಜ್ಯದಲ್ಲಿ ಬೆಳೆ ಸಮೀಕ್ಷೆ ಒಂದೂವರೆ ತಿಂಗಳಲ್ಲಿ ನೂರಕ್ಕೆ ನೂರರಷ್ಟು ಪೂರ್ಣಗೊಂಡಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವಾಲಯ ಶ್ಲಾಘಿಸಿದ್ದು, ದೇಶದಾದ್ಯಂತ ಇದರ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಶೇ. 46ರಷ್ಟು ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿದ್ದಾರೆ. ಇನ್ನುಳಿದ ಸಮೀಕ್ಷೆಯನ್ನು ಪಿಆರ್​ಗಳ ಮೂಲಕ ನಡೆಸಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿ ರೈತರು ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆ ಎಂಬ ನಿಖರ ಮಾಹಿತಿ ಸಿಗಲಿದೆ. ಈ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಸಮೀಕ್ಷೆಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಆಗುವ ಬೆಳೆ ಹಾನಿ ಹಾಗೂ ಬೆಳೆ ವಿಮೆ ನೀಡಲು ಅನುಕೂಲವಾಗಲಿದೆ ಎಂದರು.

    ಭೂಮಿ ತಂತ್ರಾಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 2,10,26,991 ರೈತರ ತಾಕುಗಳನ್ನು ಸಮೀಕ್ಷೆ ಮಾಡಬೇಕಾಗಿತ್ತು. ಅ. 25ಕ್ಕೆ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ ಎಂದರು.

    ಬೆಳೆ ವಿಮೆ ಕ್ಲೇಮ್ ಎಲ್ಲ ಸಮಸ್ಯೆಗಳು ಇತ್ಯರ್ಥ: 2019ನೇ ಸಾಲಿನ ಮುಂಗಾರು ಬೆಳೆ ವಿಮೆ 2,71,670 ಫಲಾನುಭವಿಗಳಿಗೆ 263.24 ಕೋಟಿ ವಿಮೆಯನ್ನು ಬೆಳೆ ಸಮೀಕ್ಷೆ ಮಾಹಿತಿಯೊಂದಿಗೆ ತಾಳೆಯಾದ ರೈತ ಫಲಾನುಭವಿಗಳಿಗೆ ಇತ್ಯರ್ಥಪಡಿಸಲಾಗಿದೆ. ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು. 2017-18, 2018-19ನೇ ಸಾಲಿನಲ್ಲಿ ಬ್ಯಾಂಕ್​ನಿಂದ ಹಾಗೂ ರೈತರ ಕೆಲವು ತಾಂತ್ರಿಕ ತೊಡಕಿನಿಂದ ಇತ್ಯರ್ಥವಾಗದ 11,251 ಫಲಾನುಭವಿಗಳಿಗೆ ವಿಮಾ ಪರಿಹಾರವಾಗಿ 14.95 ಕೋಟಿ ರೂ.ಗಳನ್ನು ನೀಡಲಾಗಿದೆ. 2015ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಮೊಟೆಬೆನ್ನೂರು ಗ್ರಾಮದ ಬೆಳೆ ವಿಮೆ ಕಟ್ಟಿದ ರೈತರಿಗೆ ತಾಂತ್ರಿಕ ತೊಂದರೆಯಿಂದ ಇತ್ಯರ್ಥಪಡಿಸಲಾಗಿರಲಿಲ್ಲ. ಇದನ್ನು ಇತ್ಯರ್ಥಪಡಿಸಿ 992 ರೈತರಿಗೆ 1.22 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. 2017ಕ್ಕಿಂತ ಹಿಂದಿನ ಸಾಲಿನಲ್ಲಿ ತಾಂತ್ರಿಕ ಕಾರಣದಿಂದ (ಆಧಾರ್ ತಿದ್ದುಪಡಿ, ಬ್ಯಾಂಕ್ ಅಕೌಂಟ್ ತಪ್ಪು ಮಾಹಿತಿ) ಇತ್ಯರ್ಥಪಡಿಸದ 1.26 ಲಕ್ಷ ರೈತರಿಗೆ ಅಕೌಂಟ್​ನಲ್ಲಿ ಇಡಲಾಗಿದ್ದ ಒಟ್ಟು 86.39 ಕೋಟಿ ಮೊತ್ತವನ್ನು ಹಲವು ಸಭೆಗಳ ನಂತರ 85,570 ರೈತರಿಗೆ 56.15 ಕೋಟಿ ಮೊತ್ತವನ್ನು ನೀಡಲಾಗಿದೆ ಎಂದರು.

    ಹೆಚ್ಚಿನ ಬೆಲೆಗೆ ಯೂರಿಯಾ ರಸಗೊಬ್ಬರ ಮಾರುತ್ತಿದ್ದ ಅಂಗಡಿ ಪತ್ತೆ ಹಚ್ಚಿದ್ದೇವೆ. 148 ರಸಗೊಬ್ಬರ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಲಾಗಿದೆ. ರೈತರು ಕಳಪೆ ಬೀಜಗಳನ್ನು ಖರೀದಿಸಬಾರದು ಎಂದರು.

    ಘನತೆಗೆ ತಕ್ಕಂತೆ ಮಾತನಾಡಲಿ: ಉಪಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಭಾಷಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ, ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸುವುದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ರೀತಿಯ ಭಾಷೆಗಳನ್ನು ನಾನು ಬಳಸುವುದಿಲ್ಲ. ಪ್ರಾಣಿಗಳಿಗೆ ಹೋಲಿಸಿ ಮಾತನಾಡುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಘನತೆಗೆ ತಕ್ಕುದಲ್ಲ ಎಂದರು.

    ಯಡಿಯೂರಪ್ಪ ಸಿಎಂ ಆಗಲು ನಾವು 17 ಜನರು ಬಂದಿದ್ದಕ್ಕೆ ವಿರೋಧ ಪಕ್ಷದಲ್ಲಿ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಎಲ್ಲಿ ತನ್ನ ವಿರೋಧ ಪಕ್ಷದ ಸ್ಥಾನ ಅಲ್ಲಾಡಿ ಹೋಗುತ್ತೆ ಅಂತಾ ಭಯ ಅವರಿಗಿದೆ. ಡಿ.ಕೆ. ಶಿವಕುಮಾರ ನಾವು ಪಕ್ಷ ಬಿಟ್ಟಾಗ ರಾಜಕೀಯ ಸಮಾಧಿಯಾಗ್ತಾರೆ ಎಂದಿದ್ದರು. ಈಗ ಏನಾಗಿದ್ದೇವೆ ನೋಡಲಿ ಎಂದರು.

    ಯಡಿಯೂರಪ್ಪವರು ಉಳಿದ ಅವಧಿಗೂ ಸಿಎಂ ಆಗಿರುತ್ತಾರೆ. ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಶಿರಾ ಮತ್ತು ಆರ್​ಆರ್ ನಗರ ಉಪಚುನಾವಣೆಯಲ್ಲಿ ದೊಡ್ಡ ಅಂತರದಿಂದ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts